DISTRICT:
ಗದಗ : ರಾಜ್ಯಾದ್ಯಂತ ಮಳೆರಾಯನ ಆರ್ಭಟ ಜೋರಾಗಿದೆ. ಅದೇ ರೀತಿ ಗದಗ ಜಿಲ್ಲೆಯಲ್ಲೂ ನಿನ್ನೆ ಹಲವೆಡೆ ಭಾರಿ ಮಳೆಯಾಗಿದ್ದರಿಂದ ಜನತೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ, ವಾಸನ ಲಖಮಾಪೂರು ಹಾಗೂ ಬೆಳ್ಳೇರಿ ಭಾಗದಲ್ಲಿ ಭಾರಿ ಮಳೆಯಾದ ಹಿನ್ನೆಲೆ ಅನೇಕ ಮನೆಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ.
ಕೊಣ್ಣೂರ ಭಾಗದಲ್ಲಿ ರಸ್ತೆ ಹಾಗೂ ಬೆಳೆಗಳು ಜಲಾವೃತವಾಗಿದ್ದು ೨ ಗಂಟೆಗೂ ಅಧಿಕ ಸುರಿದ ಮಹಾ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದ ಸಾರ್ವಜನಿಕರು, ವಾಹನ ಸವಾರರು ಪರದಾಟ ಅನುಭವಿಸುತ್ತಿದ್ದಾರೆ. ಮನೆಗೆ ನುಗ್ಗಿದ ನೀರು ಹೊರ ಹಾಕಲು ಕುಟುಂಬಸ್ಥರು ಹೈರಾಣಾಗಿದ್ದು ನಿರಂತರ ಮಳೆಯಿಂದಾಗಿ ಜನ ತೊಂದರೆ ಅನುಭವಿಸುತ್ತಿದ್ದಾರೆ. ಮಳೆರಾಯನ ಆರ್ಭಟಕ್ಕೆ ರೈತರು ಬೆಳೆದ ಹೆಸರು, ಗೋವಿನ ಜೋಳ, ಹತ್ತಿ, ಪೇರಲು ಸೇರಿದಂತೆ ವಿವಿಧ ಬೆಳೆಗಳು ತಗ್ಗು ಪ್ರದೇಶದ ಜಮೀನುಗಳಲ್ಲಿ ಹಾನಿ ಸಂಭವಿಸಿದೆ.
ಕಳೆದ ಎರಡು ವರ್ಷಗಳಿಂದ ಮಲಪ್ರಭಾ ನದಿಯ ಪ್ರವಾಹದಿಂದ ಹಾನಿಗೆ ಒಳಗಾಗುತ್ತಿದ್ದ ಬೆಳೆಗಳು ಇವಾಗ ಮಳೆರಾಯನ ಅಬ್ಬರಕ್ಕೆ ಹಾನಿಯಾಗುತ್ತಿದೆ. ಹೀಗಾಗಿ ಸಾಲಾ ಸೂಲ ಮಾಡಿ ಬೆಳೆದ ಹಾನಿ ಕಂಡು ರೈತರು ಕಂಗಾಲಾಗಿದ್ದಾರೆ.