DISTRICT:
ಯಾದಗಿರಿ: ಗ್ರಾಮ ಪಂಚಾಯತಿಗೆ ಹೋಗುವಾಗ ರಸ್ತೆ ಅಪಘಾತವಾದ ಪರಿಣಾಮ ಗ್ರಾಮ ಪಂಚಾಯತಿ ಅಧ್ಯಕ್ಷೆ ಮೃತಪಟ್ಟಿರುವ ಘಟನೆ ಸುರುಪುರ ತಾಲೂಕಿನಲ್ಲಿ ನಡೆದಿದೆ.
ಸುರಪುರ ತಾಲೂಕಿನ ದೇವಾಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಬಸಮ್ಮ ಹುಡೇದ್ ಅರಳಹಳ್ಳಿ ಅಪಘಾತದಲ್ಲಿ ನಿಧನರಾಗಿರುವ ದುರ್ದೈವಿ. ಕಳೆದ ವಾರ ಬಸಮ್ಮ ತಮ್ಮ ಊರು ಅರಳಹಳ್ಳಿಯಿಂದ ದೇವಾಪುರ ಗ್ರಾಮ ಪಂಚಾಯತಿಗೆ ಮಗನೊಂದಿಗೆ ಬೈಕ್‌ನಲ್ಲಿ ಹೊರಟ್ಟಿದ್ದಾಗ ದೇವಾಪುರ ಬಳಿ ಬೈಕ್ ಅಪಘಾತಕ್ಕೀಡಾಗಿತ್ತು.
ಅಧ್ಯಕ್ಷೆ ಬಸಮ್ಮ ಹುಡೇದ್ ಅವರಿಗೆ ತಲೆಗೆ ಪೆಟ್ಟಾಗಿ ಮೆದುಳಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಅವರನ್ನು ಕಲಬುರ್ಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.ಮಗನಿಗೆ ಚಿಕ್ಕಪುಟ್ಟ ಗಾಯಗಳಾಗಿ ಚೇತರಿಸಿಕೊಂಡಿದ್ದಾನೆ. ಅಧ್ಯಕ್ಷೆಯ ಸಾವು ಕುಟುಂಬ ಮಾತ್ರವಲ್ಲ ಇಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಶೋಕ ಮಡುಗಟ್ಟುವಂತೆ ಮಾಡಿದೆ.