ENTERTAINMENT: ಪೂರ್ಣ ವಿ-ರಾಮ ಇಂದು ಸಂಗೀತ ಸ್ವರ ಮಾಂತ್ರಿಕ ಹಂಸಲೇಖ ಜನುಮದಿನ. ಕನ್ನಡ ಚಿತ್ರರಂಗದಲ್ಲಿ ಆಡಿಯೋ ಮಾರುಕಟ್ಟೆಗೆ ಕೋಟಿ ಬೆಲೆ ತಂದುಕೊಟ್ಟ ಸಂಗೀತ ದಿಗ್ಗಜನಿಗೆ ಇದೀಗ ಎಪ್ಪತ್ತೊಂದರ ಹರೆಯ. ಹದಿಹರೆಯದ ಪಲ್ಸ್ ರೇಟ್ ಗೆ ಹೊಂದುವ ಹಾಡುಗಳನ್ನ ಕಟ್ಟಿಗೊಟ್ಟ ಹಂಸಲೇಖ ಪೆನ್ನಿನ ಪದಗಳು ಇವತ್ತಿಗೂ ಎವರ್ ಗ್ರೀನ್! ಜಗನ್ಮಾತೆಯ ಜೀವಂತ ಪುತ್ರ ಅವರು ಎಂದರೂ ತಪ್ಪಿಲ್ಲ. ಸಿನೆಮಾ ಸಾಹಿತ್ಯಕ್ಕೆ ಆಡು ಭಾಷೆಯ ಟಚ್ ಕೊಟ್ಟು ಅದರಲ್ಲಿ ಶಿಖರದೆತ್ತರ ಹೆಸರು ಮಾಡಿರುವ ಹಂಸಲೇಖ ಹಾರ್ಮೋನಿಯಂ ಹಿಡಿದು ಕುಂತರೆ ಮುಗಿಯಿತು. ಇಲ್ಲಿಯವರೆಗೆ ಹಂಸಲೇಖ ಮ್ಯೂಸಿಕ್ ದಾಖಲೆಯನ್ನ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಅದಕ್ಕೆ ಒಂದೇ ಒಂದು ತಾಜಾ ಉದಾಹರಣೆ ಅಂದರೆ ಅವರು ಒಂದು ವರ್ಷಕ್ಕೆ ಬರೋಬ್ಬರಿ ಮೂವತ್ತು ಸಿನೆಮಾಗಳಿಗೆ ಮ್ಯೂಸಿಕ್ ಮಾಡಿದ್ದರು ಎಂದರೆ ನಂಬುತ್ತೀರಾ? ಹೌದು, ಒಂದು ವರ್ಷ ಅವರು ಆಕಸ್ಮಿಕ, ಆತಂಕ, ಅಣ್ಣಯ್ಯ, ಅನುರಾಗದ ಅಲೆಗಳು, ಅಪೂರ್ವ ಜೋಡಿ, ಬಾ ನಲ್ಲೆ ಮಧುಚಂದ್ರಕೆ, ಬೇವು ಬೆಲ್ಲ, ಭಗವಾನ್ ಶ್ರೀ ಸಾಯಿಬಾಬಾ, ಚಿರಬಾಂಧವ್ಯ, ಗಡಿಬಿಡಿ ಗಂಡ, ಗೋಲಿಬಾರ್, ಹೂವು ಹಣ್ಣು, ಹೃದಯ ಬಂಧನ, ಜೈಲರ್ ಜಗನ್ನಾಥ್, ಕಾದಂಬರಿ, ಕಲ್ಯಾಣ ರೇಖೆ, ಕೆಂಪಯ್ಯ ಐ.ಪಿ.ಎಸ್, ಕುಂಕುಮ ಭಾಗ್ಯ, ಮಾಂಗಲ್ಯ ಬಂಧನ, ಮನೆ ದೇವ್ರು, ಮಿಡಿದ ಹೃದಯಗಳು, ಮೋಜಿನ ಮದುವೆ, ರಾಜಕೀಯ, ರೂಪಾಯಿ ರಾಜ, ಸರ್ಕಾರಕ್ಕೆ ಸವಾಲ್, ಶೃಂಗಾರ ರಾಜ, ವಾಂಟೆಡ್, ಶೃ೦ಗಾರ ಕಾವ್ಯ, ಮು೦ಜಾನೆಯ ಮ೦ಜು, ಮೌನ ಸ೦ಗ್ರಾಮ ಸಿನೆಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು. ರವಿಮಾಮಾ ಗಂಗರಾಜು ಜುಗಲ್ ಬಂದಿ! ಕನ್ನಡ ಚಿತ್ರರಂಗದಲ್ಲಿ ಅದು ಖಂಡಿತ ಟ್ರೆಂಡ್ ಸೆಟ್ಟರ್. ಮುಟ್ಟಿದ್ದೆಲ್ಲಾ ಮ್ಯೂಸಿಕ್ ಮಯ. ಆ ಎಲ್ಲಾ ಮ್ಯೂಸಿಕಲ್ ಹಿಟ್ ಗಳನ್ನ ಮ್ಯೂಸಿಯಂ ಒಂದರಲ್ಲಿ ಇಟ್ಟು ಪ್ರದರ್ಶನ ಮಾಡಿದರೆ ಬರೋಬ್ಬರಿ ತಿಂಗಳೇ ಬೇಕಾಗುತ್ತದೆ ಅವೆಲ್ಲವನ್ನೂ ಕೇಳಿ ಮುಗಿಸುವ ಹೊತ್ತಿಗೆ! ರವಿಚಂದ್ರನ್ ಅಪ್ಪನಾದರೆ ನಾದಬ್ರಹ್ಮ ಅಮ್ಮ, ಕ್ರೇಜಿಸ್ಟಾರ್ ಕಟ್ಟಿಕೊಟ್ಟಿರೋ ಹೆಚ್ಚಿನ ಕ್ರೇಜಿ ಸಿನೆಮಾಗಳ ಹಿಂದಿರೋ ಆತ್ಮ ಅಂದರೆ ಅದು ಹಂಸಧ್ವನಿ. ಹಂಸಗೀತೆಗೆ ಮಾರು ಹೋಗದ ರಸಿಕರಿಲ್ಲ ಎಂದರೂ ತಪ್ಪಾಗಲಾರದು! ಇವತ್ತಿಗೂ ಅವರು ಎವರ್ ಆಕ್ಟೀವ್! ಹಂಸಲೇಖರಿಂದ, ಅವರ ಗರಡಿಯಿಂದ ಹೊರಬಿದ್ದ ಪ್ರತಿಯೊಬ್ಬರೂ ಇವತ್ತು ಕನ್ನಡ ಚಿತ್ರರಂಗದಲ್ಲಿ ಟಾಪ್ ಲೆವೆಲ್ಗೆ ಹೋಗಿದ್ದಾರೆ. ಅವೆಲ್ಲಕ್ಕಿಂತ ಹೆಚ್ಚಾಗಿ ಹಂಸಲೇಖ ನೂರಾರು ಮಂದಿಯನ್ನ ಬೆನ್ನುತಟ್ಟಿ ಬೆಳೆಸಿದರು. ಜೊತೆಗಿದ್ದು ಕೆಲಸ ಹೇಳಿಕೊಟ್ಟರು. ತಾವೂ ಬೆಳೆಯುವುದರ ಜೊತೆಜೊತೆಗೆ ತನ್ನವರನ್ನು ತನ್ನ ಶಿಷ್ಯಂದಿರನ್ನು ಇಂಡಸ್ಟ್ರಿಗೆ ತಂದುಬಿಟ್ಟರು. ಕಂಪೋಸಿಂಗ್ ಕಿಂಗ್ ಅಂತ ಇದ್ದರೆ ಅದು ನನ್ ಅದರ್ ದೆನ್ ಹಂಸಲೇಖ ಅನ್ನೋದು ಇಡೀ ಚಂದನ ವನಕ್ಕೆ ಗೊತ್ತು. ಬರವಣಿಗೆಯ ಜೊತೆಜೊತೆಗೆ ಟ್ಯೂನ್ ಮೆರವಣಿಗೆ ಮಾಡೋದು ಅಂದ್ರೆ ಸುಮ್ನೇನಾ? ಕನ್ನಡ ಚಿತ್ರರಂಗ ಕಲ್ಲು ಕಲ್ಲಿನಲು ಹಂಸಲೇಖರ ಹೆಸರಿನ ಹಚ್ಚೆ ಬಿದ್ದಿದೆ. ಅಚ್ಛೇ ಅಚ್ಛೇ ಹಾಡುಗಳು ಹಚ್ಚಹಸುರಿನ ಗಿಡವಾಗಿ ಮರವಾಗಿ ಮಾಮರವಾಗಿದೆ… ಹಂಸಲೇಖನಿ ಎಂಬ ನಿತ್ಯ ಸಂಗೀತ ಸಂಜೀವಿನಿಗೆ ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು…!