ENTERTAINMENT:
ಪೂರ್ಣ ವಿ-ರಾಮ
ರಘು ವೈನ್ ಸ್ಟೋರ್ ಎಂಬ ಯಶಸ್ವೀ ಯೂ ಟ್ಯೂಬ್ ಚಾನೆಲ್ನ ರೂವಾರಿ ರಘು ಗೌಡ ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಮಾತಿನಲ್ಲೇ ಮನೆ ಮೇಲೆ ಮನೆ ಕಟ್ಟುವ ರಘು ಗೌಡ, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್. ಅವರ ಕೆಲವ ಫ್ಯಾಮಿಲಿ ರಿಲೇಟೆಡ್ ವಿಡಿಯೋಗಳು ಲಕ್ಷಾಂತರ ವೀಕ್ಷಣೆ ಪಡೆಯುತ್ತವೆ. ಅವರು ಹಾಗೂ ಅವರ ಪತ್ನಿ ವಿದ್ಯಾಶ್ರೀ ರಘು ಗೌಡ ಸೇರಿ ಮಾಡುವ ಅಡುಗೆ ಮನೆಯ ಕಾಮಿಡಿ, ಗಂಡ ಹೆಂಡತಿ ನಡುವಿನ ಕೀಟಲೆ, ತರಲೆ, ತಮಾಷೆಯ ವೀಡಿಯೋಗಳು ಇವತ್ತಿಗೂ ಟ್ರೆಂಡಿಂಗ್. ಇವತ್ತಿಗೂ ಅವರಿಗೆ ಅವರದ್ದೇ ಅಭಿಮಾನಿ ಬಳಗ ಹೊಂದಿರುವ ರಘು ಗೌಡ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಅಂದರೆ ನಿನ್ನೆ ಪ್ರಸಾರವಾದ ಎಪಿಸೋಡ್ನಲ್ಲಿ ಅವರು ಎಲಿಮಿನೇಟ್ ಆಗಿದ್ದು, ಅವರಿನ್ನೂ ಅವರ ಮನೆ ಸೇರಿಲ್ಲ. ಈ ಹೊತ್ತಿನಲ್ಲಿ ಅವರ ಮಡದಿ ವಿದ್ಯಾಶ್ರೀ ನಮಗೆ ಮಾತಿಗೆ ಸಿಕ್ಕಿದ್ದರು.
-ವಿದ್ಯಾಶ್ರೀ ಅವರೇ, ರಘು ಗೌಡ ಔಟ್ ಆಗಿದ್ದು ಬೇಸರ ಆಯ್ತಾ?
ವಿದ್ಯಾಶ್ರೀ: ಖಂಡಿತ ಇಲ್ಲ. ಅವರು ಅವರಾಗಿ ಇದ್ದರು. ಅವರಾಗಿ ಹೊರಬಂದರು. ಅವರಿಗೆ ಅವರನ್ನ ಪ್ರೂವ್ ಮಾಡಿಕೊಳ್ಳುವ ಅವಕಾಶ ಸಿಕ್ಕಿತು. ಎರಡನೇ ಇನ್ನಿಂಗ್ಸ್ನಲ್ಲಿ ಮೂರು ವಾರ ತುಂಬಾ ಚೆನ್ನಾಗಿ ಮನರಂಜಿಸಿದ್ರು. ತುಂಬಾ ಎಂಜಾಯ್ ಮಾಡ್ಕೊಂಡು ಮನೆಯಲ್ಲಿದ್ರು!
-ನಿಮ್ಮ ಮನೆಯವರು ಟಾಸ್ಕ್ ತೆಗೆದುಕೊಳ್ಳುವ ವಿಚಾರದ ಬಗ್ಗೆ ಹೇಳುವುದಾದರೆ?
ವಿದ್ಯಾಶ್ರೀ: ಮೊದಲ ಇನ್ನಿಂಗ್ಸ್ಗೆ ಕಂಪೇರ್ ಮಾಡಿದರೆ ಅವರು ಪ್ರತೀ ಹಂತದಲ್ಲೂ ತುಂಬಾ ಚೆನ್ನಾಗಿ ತೊಡಗಿಕೊಂಡಿದ್ದರು. ದಿನದಿಂದ ದಿನಕ್ಕೆ ಅವರು ಇಂಪ್ರೂವ್ ಆಗ್ತಾ ಇದ್ದರು. ಅವರಿಗೆ ಕೆಪಾಸಿಟಿ ಇದೆ ಅಂತ ನನಗೆ ಗೊತ್ತಿತ್ತು. ಅದನ್ನು ಅವರು ಮೂರೂ ವಾರ ಯಶಸ್ವಿಯಾಗಿ ಪ್ರದರ್ಶಿಸಿದ್ರು!
-ನಿಮ್ಮ ಪ್ರಕಾರ ಅವರು ಈ ವಾರ ಯಾಕೆ ಔಟ್ ಆದ್ರು?
ವಿದ್ಯಾಶ್ರೀ: ಇನ್ನೂ ಇರಬಹುದಾಗಿತ್ತು ಅನ್ನಿಸ್ತು ನನಗೆ. ಇವರಿಗಿಂತ ಕಮ್ಮಿ ಎಂಟರ್ಟೈನ್ ಮಾಡೋರು ಇನ್ನೂ ಇದ್ದಾರೆ ಅಲ್ಲಿ. ಅವರಿಗೆ ಹೋಲಿಸಿದರೆ ರಘು ತುಂಬಾನೇ ಚೆನ್ನಾಗಿ ಟಾಕ್ಸ್ ತೆಗೆದುಕೊಂಡು, ಜನಕ್ಕೆ ಮನರಂಜನೆ ಕೂಡ ಮಾಡಿಕೊಂಡು ಇದ್ದರು. ಮೇ ಬಿ ಅರವಿಂದ್ ಅವರ ಗೇಮ್ ಚೇಂಜ್ ವಿಷಯದಲ್ಲಿ ರಘು ಛಾನ್ಸ್ ತೆಗೆದುಕೊಳ್ಳದೇ ಇರುವುದೂ ಒಂದು ಕಾರಣವಾಗಿರಬಹುದು!
-ರಘು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಮತ್ತೆ ನೀವು ಫ್ಯಾಮಿಲಿ ವೀಡಿಯೋಸ್ ಮಾಡ್ತೀರಾ?
ವಿದ್ಯಾಶ್ರೀ: ಖಂಡಿತ. ಅವರು ಮಂಗಳವಾರ ಮನೆಗೆ ಬರ್ತಾರೆ. ಅವರು ಬಂದ ಮೇಲೆ ಅವರೇ ಸ್ಕ್ರಿಪ್ಟ್ ಎಲ್ಲಾ ಮಾಡ್ತಾರೆ. ಅವರಿಂದಲೇ ರಘು ವೈನ್ ಸ್ಟೋರ್ ಚಾನೆಲ್ ನಿಂತಿರೋದು. ಅವರು ಬಂದ ಮರುಕ್ಷಣವೇ ನಮ್ಮ ಫ್ಯಾಮಿಲಿ ವೀಡಿಯೋಸ್ ಶೂಟಿಂಗ್ ಶುರು!
-ರಘು ಅವರನ್ನ ಈ ಸಮಯದಲ್ಲಿ ಎಷ್ಟು ಮಿಸ್ ಮಾಡ್ಕೊಂಡ್ರಿ?
ವಿದ್ಯಾ ಶ್ರೀ: ನಿಜ್ವಾಗ್ಲೂ ತುಂಬಾ ಬೇಜಾರು ಆಗೋದು. ಆದ್ರೆ ಅವ್ರು ಸಂಜೆ ಆದ್ಮೇಲೆ ಟೀವಿಯಲ್ಲಿ ಬರ್ತಾರೆ ಎಂಬ ಖುಷಿಯಲ್ಲಿ ಆ ಇಡೀ ದಿನವನ್ನ ಹೇಗೋ ಕಳೀತಾ ಇದ್ದೆ. ಅವರು ತುಂಬಾ ಲವಲವಿಕೆಯಿಂದ ಟಾಸ್ಕ್ ತೆಗೆದುಕೊಳ್ಳುವುದು, ಮಾತನಾಡುವುದು ನೋಡಿದಾಗ ಅವರನ್ನ ಮಿಸ್ ಮಾಡ್ಕೊಂತಾ ಇದ್ದೀನಿ ಅನ್ನೋ ವಿಷ್ಯವೇ ಮರೆತುಹೋಗೋದು!