ENTERTAINMENT:
'ಮನಿಕೆ ಮಗೆ ಹಿತೆ' (ನನ್ನ ಹೃದಯದಲ್ಲಿ) ಎಂದು ಶುರುವಾಗುವ ಆ ಹಾಡು, ನಿನ್ನ ಬಗೆಗೆ ಮೋಹದ ಭಾವಗಳು ಬೆಂಕಿಯಂತೆ ಎಂದೆಲ್ಲ ಮುಂದುವರಿಯುತ್ತದೆ. ಸಿಂಹಳ ಭಾಷೆಯ ಈ ಹಾಡಿನ ಮಾಧುರ್ಯವನ್ನು ಲೋಕಕ್ಕೆಲ್ಲ ಹನಿಸಿದ ಗಾಯಕಿಯ ಹೆಸರು ಯೊಹಾನಿ ದಿಲೋಕ ಡಿಸಿಲ್ವಾ.
ಇದೇ ವರ್ಷದ ಮೇ 22ರಂದು ಈ ಹಾಡು ಯೂಟ್ಯೂಬ್ನಲ್ಲಿ ಅಪ್ಲೋಡ್ ಆಗಿದ್ದೇ ಆಗಿದ್ದು; ಅಂತರ್ಜಾಲ ಬಿಸಿಯೇರಿ ಹೋಯಿತು. ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರೂ ಇದರ ಲಯಬದ್ಧತೆಗೆ ತಲೆದೂಗುತ್ತ ಮೈಕುಣಿಸುತ್ತ ಮಾರುಹೋಗಿಬಿಟ್ಟಿದ್ದರು.
'ಮನಿಕೆ ಮಗೆ ಹಿತೆ' ಟೀನ್ ಪಾಪ್ ಶೈಲಿಯ ಸೊಗಸಿನೊಂದಿಗಿರುವ ಒಂದು ಪ್ರೇಮಗೀತೆ. ಹದಿಹರೆಯದವರ ಮಿಡಿತವನ್ನೇ ಕೂಡಿಸಿಕೊಂಡಂತಿರುವ ಟೀನ್ ಪಾಪ್ ಶೈಲಿ ಪಾಪ್ ಮ್ಯೂಸಿಕ್ನ ಒಂದು ಉಪ ಪ್ರಕಾರ. ಹಾಗಾಗಿ, ಆರ್ಕೆಸ್ಟ್ರಾ, ಜಾನಪದ ಎಲ್ಲವೂ ಮಿಳಿತವಾದಂತಿರುವ, ಸಾರಂಗಿಯ ಹಿತದ ಹಿನ್ನೆಲೆಯನ್ನು ಹೊಂದಿರುವ ಮತ್ತು ಜಟಿಲವಲ್ಲದ ಮಧುರ ಹಾಡಾಗಿ ಮನದುಂಬುತ್ತದೆ ಇದು.
ಸತೀಶನ್ ರತ್ನಾಯಕ ಹಾಡಿಗೆ ಅವರೊಡನೆ ಲವಲವಿಕೆಯ ದನಿಯಾದವರು ಶ್ರೀಲಂಕಾ ಗಾಯಕಿ ಯೊಹಾನಿ ದಿಲೋಕ ಡಿಸಿಲ್ವಾ. ಯೊಹಾನಿಯ ದನಿ ದೊಡ್ಡ ಮೋಡಿಯನ್ನೇ ಮಾಡಿಬಿಟ್ಟಿತು. ಅಮಿತಾಭ್ ಬಚ್ಚನ್ ಕೂಡ ಈ ಹಾಡಿಗೆ, ಯೊಹಾನಿ ದನಿಯ ಮೋಡಿಗೆ ಸೋತವರಲ್ಲಿ ಒಬ್ಬರು.
ಅಪ್ಲೋಡ್ ಆದ ಮರುಘಳಿಗೆಯಲ್ಲೇ ಎಂಬಷ್ಟು ವೇಗವಾಗಿ 11 ಕೋಟಿಗೂ ಹೆಚ್ಚು ಜನರನ್ನು ಮುಟ್ಟಿತು ಈ ಹಾಡು. ಮಾಧುರಿ ದೀಕ್ಷಿತ್, ಪರಿಣೀತಿ ಚೋಪ್ರಾ, ಟೈಗರ್ ಶ್ರಾಫ್ ಮೊದಲಾದವರನ್ನು ಕುಣಿಯಲು ಹಚ್ಚಿತು. ಜಗತ್ತಿನಾದ್ಯಂತ ಈ ಹಾಡಿನ ಸೆಳೆತ ಹಬ್ಬಿಕೊಂಡಿತು. ತಮಿಳು, ತೆಲುಗು, ಹಿಂದಿ, ಕೊಂಕಣಿ, ಬೆಂಗಾಲಿ, ತ್ರಿಪುರಾದ ಕೊಕ್ಬೊರೋಕ್, ಕಡೆಗೆ ಇಂಗ್ಲೀಷಿಗೂ ಭಾಷಾಂತರವಾಗಿ ದೊಡ್ಡ ಅಲೆಯನ್ನೇ ಎಬ್ಬಿಸಿತು. ಟಿಕ್ಟಾಕ್ ವಿಡಿಯೋಗಳು, ಇನ್ಸ್ಟಾಗ್ರಾಂ ಪೋಸ್ಟ್ಗಳು, ಮೀಮ್ಗಳು ಎಲ್ಲೆಲ್ಲೂ 'ಮನಿಕೆ ಮಗೆ ಹಿತೆ'ಯೇ ಮೈದುಂಬಿಕೊಂಡು ಮೈನವಿರೇಳುವಂತೆ ಮಾಡಿತು. ರಾತ್ರಿ ಬೆಳಗಾಗುವುದರೊಳಗೆ ಪ್ರಸಿದ್ಧಿಗೆ ಬಂದುಬಿಟ್ಟಿದ್ದರು ಯೊಹಾನಿ ದಿಲೋಕ ಡಿಸಿಲ್ವಾ. ಆಕೆ ಹಾಡಿದ್ದ ಹಳೆಯ ಹಾಡುಗಳಿಗೂ ಈಗ ಹೊಸ ಕೇಳುಗರ ದಂಡು.
ಕೊಲಂಬೋದ 28 ವರ್ಷದ ಸ್ವರಸುಂದರಿ ಯೊಹಾನಿ ಡಿಸಿಲ್ವಾ, ಈ ಹಾಡು ವೈರಲ್ ಆಗುತ್ತಿರುವ ಪರಿಯನ್ನು ಮನೆಯಲ್ಲೇ ಕೂತು ಗಮನಿಸುತ್ತಿದ್ದರು. ಜಗತ್ತಿನ ತುಂಬ ತನ್ನ ದನಿ ಕೇಳಿಸುತ್ತಿರುವ ಸಂಗತಿ ಬೆರಗನ್ನು ತಂದಿತ್ತು ಅವರಲ್ಲಿ. ಏನೇನೂ ಯೋಜಿಸದೆ ಸುಮ್ಮನೆ ಹಾಡಿದ ಹಾಡೊಂದು ಲೋಕವನ್ನೇ ಗೆದ್ದಿದ್ದಕ್ಕೆ ಅಷ್ಟೇ ಸಡಗರವೂ ಆಗಿತ್ತು.
ಹಾಗೆ ನೋಡಿದರೆ ಯೊಹಾನಿ ಡಿಸಿಲ್ವಾ ಅಂತರ್ಜಾಲದ್ದೇ ಕೂಸು ಎನ್ನುವ ಮಟ್ಟಿಗೆ ಆಕೆಗೂ ಅಂತರ್ಜಾಲಕ್ಕೂ ಬೆಸುಗೆಯಿದೆ. ಆಕೆ ಗಿಟಾರ್ ನುಡಿಸಲು ಕಲಿತದ್ದು ಯೂಟ್ಯೂಬ್ ನೋಡಿ. 23ನೇ ವಯಸ್ಸಿನಲ್ಲಿ ತಮ್ಮದೇ ಯೂಟ್ಯೂಬ್ ಚಾನೆಲ್ ಮಾಡಿ, ಅದರಲ್ಲಿ ತಮ್ಮ ಸಂಗೀತ ವಿಡಿಯೋಗಳನ್ನು ಅಪ್ಲೋಡ್ ಮಾಡತೊಡಗಿದರು. ಮಾಜಿ ಸೇನಾಧಿಕಾರಿ ಮತ್ತು ಮಾಜಿ ಗಗನಸಖಿ ದಂಪತಿಯ ಮುದ್ದಿನ ಮಗಳಾದ ಯೊಹಾನಿ, ಒಂದೆಡೆಗೆ ನಿಲ್ಲಿಸದ ಪೋಷಕರ ಉದ್ಯೋಗದ ಕಾರಣದಿಂದಾಗಿಯೇ ವಿವಿಧ ಭಾಷೆಗಳಿಗೆ ಮತ್ತು ಸಂಗೀತ ವೈವಿಧ್ಯಕ್ಕೆ ಚಿಕ್ಕವಳಿರುವಾಗಿನಿಂದಲೇ ತೆರೆದುಕೊಂಡವರು. ಆರಂಭದಲ್ಲಿ ಪೋಷಕರು ಪಿಯಾನೋ ಕ್ಲಾಸಿಗೆ ಸೇರಿಸಿದ್ದ ಹೊತ್ತಲ್ಲಿ ಆಕೆ ಶಾಲೆಯಲ್ಲಿ ಟ್ರಂಪೆಟ್ ಮತ್ತು ಫ್ರೆಂಚ್ ಕಹಳೆಯನ್ನು ನುಡಿಸುತ್ತಿದ್ದರು. ಅಕೌಂಟಿಂಗ್ನಲ್ಲಿ ಅಧ್ಯಯನ ಮಾಡಿರುವ ಆಕೆ ಅದಕ್ಕೆಂದೇ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಕ್ಕೆ ಹೋಗಿದ್ದಾಗ ವಿವಿಧ ಪ್ರಕಾರಗಳ ಸಂಗೀತವು ಬೆರೆತುಹೋದ ಮಿಶ್ರಿತ ಮೋಹಕತೆಗೆ ಮಾರುಹೋಗಿದ್ದರು. ಹಾಗಾಗಿಯೇ ಸಂಗೀತದಲ್ಲಿ ಪ್ರಯೋಗಶೀಲತೆಗೆ ಹಂಬಲಿಸುವ ಕಲಾವಿದೆ ಆಕೆ. ಸಂಗೀತವೆಂಬುದು ನನ್ನ ಪಾಲಿಗೆ ಉದ್ಯಮವಲ್ಲ ಎಂಬ ಆಕೆಯ ನಿಲುವು, ಆಕೆಯ ಶ್ರದ್ಧೆ ಮತ್ತು ಬದ್ಧತೆಯನ್ನೇ ಹೇಳುತ್ತದೆ.
ಆಸ್ಟ್ರೇಲಿಯಾದಿಂದ ಮರಳಿದ ಮೇಲೆ 2019ರಲ್ಲಿ ಸಂಗೀತವನ್ನೇ ವೃತ್ತಿಯಾಗಿ ತೆಗೆದುಕೊಂಡರು. ಸದ್ಯ ಅವರು ತಮ್ಮ ಮೊದಲ ಆಲ್ಬಂ ಹೊರತರುವುದರಲ್ಲಿದ್ದಾರೆ.
ಹಿಂದೂಸ್ತಾನಿ ಸಂಗೀತದಲ್ಲಿನ ಪೀಲು ರಾಗ ಶೃಂಗಾರದ ಭಾವನೆಗಳನ್ನು ವ್ಯಕ್ತಗೊಳಿಸುವ ರಾಗ. ಅದರ ಬಗ್ಗೆ ಗೊತ್ತಿರದ ಯೊಹಾನಿ, ಮನಿಕೆ ಮಗೆ ಹಿತೆ ಹಾಡಿನಲ್ಲಿ ಅದರ ಪಲುಕುಗಳನ್ನೇ ಅನುಸರಿಸಿರುವುದನ್ನು ಗುರುತಿಸಲಾಗಿದೆ. ಹಿಂದಿ ಚಿತ್ರಗೀತೆಗಳಲ್ಲೂ ಪೀಲು ರಾಗದ ಛಾಯೆ ಇದ್ದೇ ಇರುತ್ತದೆ. ನೆರೆಯ ದೇಶವಾಗಿರುವ ಶ್ರೀಲಂಕೆಯಲ್ಲೂ ಹಿಂದಿ ಚಿತ್ರಗೀತೆಗಳಲ್ಲಿನ ಸಂಗೀತದ ಪ್ರಭಾವ ಹೆಚ್ಚು. ಆದರೆ, ಪುಟ್ಟ ದೇಶದ ಸಿಂಹಳ ಭಾಷೆಯ ಹಾಡು ಜಗತ್ತೇ ತಿರುಗಿ ನೋಡುವಂತೆ ಮಾಡಿದ್ದು ಭಾಷೆಗೆ ಗಡಿಯಿಲ್ಲ ಎಂಬುದಕ್ಕೆ ಮತ್ತೆ ನಿದರ್ಶನ. ಅದು ಯೊಹಾನಿ ಡಿಸಿಲ್ವಾಳ ದನಿಯ ಗೆಲುವು.