ENTERTAINMENT: ಪ್ರಿಯಾಂಕಾ ಚೋಪ್ರಾ ಸಹೋದರಿ, ಕನ್ನಡದ ಅರ್ಜುನ್ ಸಿನಿಮಾದಲ್ಲಿ ನಟಿಸಿದ್ದ ಮೀರಾ ಚೋಪ್ರಾ ಸುಳ್ಳು ಹೇಳಿ ಲಸಿಕೆ ಪಡೆದಿದ್ದಾರೆಂಬ ಸುದ್ದಿ ಹರಡಿದೆ. ಆದರೆ ಈ ಆರೋಪವನ್ನು ನಿರಾಕರಿಸಿದ್ದಾರೆ ಮೀರಾ. ಮೀರಾ ಚೋಪ್ರಾ ತಾನು ಫ್ರಂಟ್ಲೈನ್ ವರ್ಕರ್ ಎಂದು ಲಸಿಕೆ ಪಡೆದರು ಎಂಬ ಆರೋಪ ಕೇಳಿಬಂದಿತ್ತು. ಮುಂಬೈನ ಥಾಣೆ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ ಮೀರಾ ಲಸಿಕೆ ಪಡೆದಿದ್ದು, ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ ಅವರು ತೋರಿಸಿದ್ದರೆನ್ನಲಾದ ಗುರುತಿನ ಪತ್ರದ ಚಿತ್ರದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಲಾಗಿತ್ತು. ಆದರೆ ಬಳಿಕ ಈ ಪೋಸ್ಟ್ ಡಿಲೀಟ್ ಆಗಿತ್ತು. ಈಗ ಇದೆಲ್ಲ ಸುದ್ದಿಗೆ ಸ್ಪಷ್ಟನೆ ನೀಡಿರುವ ಮೀರಾ, ತಾವು ಆಧಾರ್ ಕಾರ್ಡ್ ನೀಡಿ ನೋಂದಣಿ ಮಾಡಿಸಿಕೊಂಡು ಲಸಿಕೆ ಪಡೆದಿರುವುದಾಗಿ ಹೇಳಿದ್ದಾರೆ. ಒಂದು ತಿಂಗಳ ಪ್ರಯತ್ನದ ನಂತರ ನೋಂದಾಯಿಸಿ ಆಧಾರ್ ಕಾರ್ಡ್ ನೀಡಿ ಲಸಿಕೆ ಪಡೆದಿರುವೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಐಡಿ ನನ್ನದಲ್ಲ. ನೋಂದಣಿಗಾಗಿ ನಾನು ಆಧಾರ್ ಕಾರ್ಡ್ ಮಾತ್ರ ನೀಡಿದ್ದೇನೆ. ಯಾವುದೇ ಐಡಿ ನೀಡಿಲ್ಲ ಎಂದು ಟ್ವಿಟ್ಟರ್ನಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.