ENTERTAINMENT:
No More Words…ಮೆಚ್ಚಲೇಬೇಕು…
ಅಷ್ಟರ ಮಟ್ಟಿಗೆ ಇದೊಂದು ಸ್ಪೂರ್ತಿದಾಯಕ ಸ್ಟೋರಿ. ಆ ಹುಡುಗನನ್ನ ನೋಡಿದ್ರೆ ಕರುಳು ಚುರುಕ್ ಅನ್ನುತ್ತೆ. ಕಿತ್ತು ತಿನ್ನೋ ಬಡತನದ ನಡುವೆಯೂ ದೇಶ ಸೇವೆ ಮಾಡುವ ಅವನ ಛಲಕ್ಕೆ ನಾವು ಫಿದಾ ಆಗಲೇಬೇಕು. ಅಂದಾಗೆ ಇಂತಹದ್ದೊಂದು ಛಲ ಹೊತ್ತು ನಿತ್ಯ ಕೆಲಸ ಮುಗಿಸಿ 10ಕಿಲೋಮೀಟರ್ ಓಡಿ ಮನೆ ಸೇರುವ ಈ ಹುಡುಗನ ಹೆಸರು ಪ್ರದೀಪ್ ಮೆಹ್ರಾ.
ಸಾಮಾನ್ಯವಾಗಿ ನಾವು ನೀವು ದುಡಿದು ದಣಿವಾದ ಮೇಲೆ ಎಷ್ಟೊತ್ತಿಗೆ ಬಸ್ಸೋ ಟ್ರೈನೋ ಹಿಡ್ಕೊಂಡು ಮನೆಗೆ ಹೋಗಿ ಮಲಗೋಣ ಅಂತೀವಿ. ಆದ್ರೆ ಈ ಹುಡುಗ ಹಗಲೊತ್ತು ನೋಯ್ಡಾದ ಮ್ಯಾಕ್ ಡೋನಾಲ್ಡ್ಸ್ ನಲ್ಲಿ ಕೆಲಸ ಮಾಡ್ತಾನೆ. ಕೆಲಸ ಬಿಟ್ಟ ಬಳಿಕ 10ಕಿಲೋಮೀಟರ್ ದೂರದಲ್ಲಿರೋ ತನ್ನೂರಿಗೆ ಓಡುತ್ತಾ ಹೋಗ್ತಾನೆ. ಇದೇ ರೀತಿ ಓಡಿಕೊಂಡು ಹೋಗುವಾಗ ವ್ಯಕ್ತಿಯೊಬ್ಬರು ಆತನನ್ನ ಮಾತಾಡುಸ್ತಾರೆ. ಡ್ರಾಪ್ ಕೊಡ್ತೀನಿ ಬಾ ಅಂತಲೂ ಕರೀತ್ತಾರೆ. ಆದ್ರೆ ತಾನು ಓಡುತ್ತಿರೋದು ಆರ್ಮಿ ಸೇರೋಕೆ, ಹೀಗಾಗಿ ನಾನು ಓಡಿಯೇ ಮನೆಗೆ ಹೋಗ್ತೀನಿ ಅಂತಾನೆ. ಆ ಹುಡುಗನಲ್ಲಿರೋ ಆತ್ಮವಿಶ್ವಾಸಕ್ಕೆ ನಾವು ಶಹಬ್ಬಾಸ್ ಅನ್ನಲೇ ಬೇಕು.
ಜಸ್ಟ್ 19ರ ಹರೆಯದ ಪ್ರದೀಪ್ ಮೆಹ್ರಾ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಅನಾರೋಗ್ಯ ಪೀಡಿತ ತಾಯಿ ಮತ್ತು ಅಣ್ಣನೊಂದಿಗೆ ವಾಸವಿದ್ದಾನೆ. ರಾತ್ರಿ ಪಾಳಿಯಲ್ಲಿ ಅಣ್ಣ ಕೆಲಸಕ್ಕೆ ಹೋದ್ರೆ ಹಗಲಲ್ಲಿ ಪ್ರದೀಪ್ ಕೆಲಸ ಮಾಡ್ತಾನೆ. ಕೆಲಸ ಮುಗಿದ ಬಳಿಕ ಬರೋಲಾದಲ್ಲಿರುವ ತನ್ನ ಮನೆಗೆ 10ಕಿಲೋಮೀಟರ್ ಓಡಿಕೊಂಡು ಹೋಗುವ ಮೂಲಕ ಮಿಲ್ಟ್ರಿ ಸೇರಲು ಪ್ರಾಕ್ಟೀಸ್ ಮಾಡ್ತಾ ಇದ್ದಾನೆ. ಚಿತ್ರ ನಿರ್ಮಾಪಕ ಹಾಗೂ ಲೇಖಕ ವಿನೋದ್ ಕಪ್ರಿ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಅಪ್ ಲೋಡ್ ಮಾಡಿರುವ 2 ನಿಮಿಷ 20 ಸೆಕೆಂಡಿನ ವಿಡಿಯೋ ಪ್ರದೀಪ್ ನನ್ನ ರಾತ್ರೋ ರಾತ್ರಿ ಸ್ಟಾರ್ ಮಾಡಿಬಿಟ್ಟಿದೆ. ಶುದ್ದ ಚಿನ್ನ ಎಂಬ ಬಿರುದಿಗೂ ಕಾರಣವಾಗಿದೆ. ಭುಜದ ಮೇಲೆ ಬ್ಯಾಗ್ ಹಾಕಿಕೊಂಡು ನೋಯ್ಡಾ ರಸ್ತೆಯಲ್ಲಿ ನಿತ್ಯ ಆರ್ಮಿ ಸೇರೋಕೆ ಅಂತಲೇ ಅಭ್ಯಾಸಕ್ಕಾಗಿ ಓಡೋ ಈ ಹುಡುಗನ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ಸಹಜವಾಗಿ ಈ ವಿಡಿಯೋ ನಮ್ಮೆಲ್ಲರ ಗಮನ ಸೆಳೆಯುತ್ತದೆ. ಈ ವಿಡಿಯೋ ದೇಶದ ಯುವಕರಿಗೆ ಸ್ಪೂರ್ತಿಯಾದ್ರೆ, ಅದು ಸಾರ್ಥಕ.