ಸುಶಾಂತ್ ಸಿಂಗ್ ರಜಪೂತ್ ಸಾವು; ಪ್ರಕರಣಕ್ಕೆ ಈಗ ಮತ್ತೊಂದು ತಿರುವು

ಸುಶಾಂತ್ ಸಿಂಗ್ ರಜಪೂತ್ ಸಾವು; ಪ್ರಕರಣಕ್ಕೆ ಈಗ ಮತ್ತೊಂದು ತಿರುವು
ಬಾಲಿವುಡ್ ರಂಗದಲ್ಲಿನ ಪಕ್ಷಪಾತ ಧೋರಣೆಯ ಬಲಿಪಶುವಾಗಿ ಖಿನ್ನತೆಗೊಳಗಾಗಿದ್ದ, ಕಡೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಇದೀಗ ಮತ್ತೊಂದು ತಿರುವು ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿ, ಎನ್‌ಸಿಬಿ ಪೊಲೀಸರು ಸುಶಾಂತ್ ಸಿಂಗ್ ಸ್ನೇಹಿತ ಹಾಗೂ ಫ್ಯ್ಲಾಟ್‌ಮೇಟ್ ಆಗಿದ್ದ ಸಿದ್ಧಾರ್ಥ್ ಪಿಥಾಣಿಯನ್ನು ಬಂಧಿಸಿರುವುದು ಪ್ರಕರಣದ ಬಗ್ಗೆ ಕುತೂಹಲ ಹೆಚ್ಚಿಸಿದೆ. ಸುಶಾಂತ್ ಮೃತಪಟ್ಟು ವರ್ಷ ಕಳೆಯುತ್ತಿರುವ ಹೊತ್ತಲ್ಲಿನ ಈ ಬೆಳವಣಿಗೆ ಹಲವು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ. ಸುಶಾಂತ್ ಸಾವಿಗೆ ಇದುವರೆಗೂ ನಿಖರವಾದ ಕಾರಣವನ್ನು ಭೇದಿಸುವಲ್ಲಿ ಪೊಲೀಸರು ಮತ್ತು ಸಿಬಿಐ ಯಶಸ್ವಿಯಾಗಿರದ ಹಿನ್ನೆಲೆಯಲ್ಲಿ ಈ ಅನುಮಾನ ವ್ಯಕ್ತವಾಗಿದೆ. ಸುಶಾಂತ್ ಸಿಂಗ್ ಸಾವಿಗೂ ಮುನ್ನ ಫ್ಲ್ಯಾಟ್‌ನಲ್ಲಿ ಇದ್ದ ನಾಲ್ವರಲ್ಲಿ ಒಬ್ಬರಾಗಿದ್ದ ಸಿದ್ಧಾರ್ಥ್ ಪಿಥಾಣಿಯನ್ನು ಹೈದರಾಬಾದ್‌ನಲ್ಲಿ ಎನ್‌ಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೊದಲೇ ಮುಂಬೈ ಪೊಲೀಸರು, ಸಿಬಿಐ ಅಧಿಕಾರಿಗಳು ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಸಿದ್ದಾರ್ಥ್ ಪಿಥಾನಣಿಯನ್ನು ಹಲವು ಬಾರಿ ವಿಚಾರಣೆ ನಡೆಸಿದ್ದರು. ಇದೀಗ ವರ್ಷದ ಬಳಿಕ ಸಿದ್ಧಾರ್ಥ್ ಬಂಧನವಾಗಿದೆ. 2020ರ ಜೂನ್ 14ರಂದು ಮುಂಬೈನ ಫ್ಲ್ಯಾಟ್‌ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ಶವ ಪತ್ತೆಯಾಗಿತ್ತು. ಅನುಮಾನಸ್ಪಾದ ಸಾವು ಎಂಬ ಕಾರಣಕ್ಕೆ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಸ್ನೇಹಿತರು, ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದರು. ಬಳಿಕ, ಈ ಕೇಸ್‌ ಸಿಬಿಐಗೆ ವರ್ಗಾವಣೆಯಾಗಿತ್ತು. ಸಿದ್ಧಾರ್ಥ್ ಸಾವಿನ ಬಳಿಕ ಬೆಳಕಿಗೆ ಬಂದಿದ್ದ ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ರಿಯಾ ಚಕ್ರವರ್ತಿ, ಸಹೋದರರ ಶೌವಿಕ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಈಗ ಸಿದ್ಧಾರ್ಥ್ ಪಿಥಾಣಿ ಬಂಧನವಾಗಿದೆ.