ENTERTAINMENT:
ಒಂದು ಸಿನಿಮಾ ಚಿತ್ರೀಕರಣ ನಡೆಸಲು ಮೊದಲು ಕಥೆ ಬೇಕಾಗುತ್ತದೆ ಎಂಬುದನ್ನು ಈಗಾಗಲೇ ಚರ್ಚಿಸಿದ್ದೇವೆ. ನಂತರ ಅದನ್ನು ಚಿತ್ರಕಥೆ ಮಾಡಬೇಕಾಗುತ್ತದೆ. ಅದನ್ನು ಮುಂದಿನ ಅಧ್ಯಾಯದಲ್ಲಿ ನೋಡೋಣ.
ಇನ್ನು ಸಿನಿಮಾ ಮಾಡಲು ಮುಖ್ಯವಾಗಿ ಬೇಕಾದ್ದು ಹಣ, ಅಂದರೆ ಹಣ ಹೂಡುವ ನಿರ್ಮಾಪಕ. ನಿರ್ದೇಶಕ ಒಂದು ಕಥೆಯನ್ನು ದೃಶ್ಯಮಾಧ್ಯಮಕ್ಕೆ ಅಳವಡಿಸಿ ಸಿನಿಮಾ ಮಾಡಲು ಬೇಕಾಗುವ ಹಣವನ್ನು ನಿರ್ಮಾಪಕ ಒದಗಿಸುತ್ತಾನೆ. ಆದರೆ ಎಷ್ಟು ಹಣದಲ್ಲಿ ಸಿನಿಮಾ ಮಾಡಬಹುದು ಎಂಬುದು ಒಂದು ದೊಡ್ಡ ಪ್ರಶ್ನೆ. ಏಕೆಂದರೆ ಕೆಲವರ ಪ್ರಕಾರ ಸಿನಿಮಾ ಆಡಲು ಕೋಟಿ ಕೋಟಿ ರೂಪಾಯಿಗಳು ಬೇಕು. ಆದರೆ ಇನ್ನೂ ಕೆಲವರ ಪ್ರಕಾರ ದುಡ್ಡು ಎಷ್ಟಿದ್ದರೂ ನಡೆಯುತ್ತದೆ. ಅಗತ್ಯಕ್ಕೆ ತಕ್ಕಷ್ಟು ಇದ್ದರೆ ಸಾಕು! ಹಾಗಾದರೆ ಯಾವುದು ನಿಜ? ಕಡಿಮೆ ಬಂಡವಾಳದಲ್ಲಿ ಒಂದು ಒಳ್ಳೆಯ ಸಿನಿಮಾ ತಯಾರಿಸಲು ಸಾಧ್ಯವಿಲ್ಲವೆ?
ಕಡಿಮೆ ಎಂದರೆ ಎಷ್ಟು ಕಡಿಮೆ ಹಣದಲ್ಲಿ ಒಂದು ಚಿತ್ರವನ್ನು ತಯಾರಿಸಬಹುದು? ಒಂದು ಕಲಾತ್ಮಕ ಚಿತ್ರವನ್ನು ಎಷ್ಟು ಬಂಡವಾಳದೊಳಗೆ ತಯಾರಿಸಬಹುದು ಎಂಬೆಲ್ಲಾ ಪ್ರಶ್ನೆಗಳು ಸಿನಿಮಾ ನಿರ್ಮಿಸಲು ಬರುವ ಹೊಸ ನಿರ್ಮಾಪಕ ನಿರ್ದೇಶಕರ ತಲೆ ಕೆಡಿಸುತ್ತವೆ. ಸಿನಿಮಾದ ಅಂತರಾಳ ತಿಳಿಯದ ಇವರು ಹತ್ತು ರೂಪಾಯಿಯಲ್ಲಿ ಆಗುವ ಕೆಲಸಕ್ಕೆ ಐವತ್ತು ನೂರು ರೂಪಾಯಿಗಳನ್ನು ಖರ್ಚು ಮಾಡಿ ನಷ್ಟ ಅನುಭವಿಸುವುದೂ ಉಂಟು! ನಂತರ ಸಿನಿಮಾ ಎಂದರೆ ಬೆಚ್ಚಿಬೀಳುವುದೂ ಉಂಟು!!
ಚಿತ್ರದ ಬಂಡವಾಳ ಮುಖ್ಯವಾಗಿ ಕಥಘೆಯನ್ನು, ನಿರ್ದೇಶಕರನ್ನು ಅವಲಂಬಿಸಿರುತ್ತದೆ. ಇದು ಹೇಗೆ, ಯಾವ ಚಿತ್ರಕ್ಕೆ ಎಷ್ಟು ಬಜೆಟ್ ಆಗುತ್ತದೆ ಎಂಬುದನ್ನು, ಮುಂದಿನ ಬಜೆಟ್ ಕುರಿತಾದ ಅಧ್ಯಾಯದಲ್ಲಿ ನೋಡೋಣ.