ENTERTAINMENT: ಕಳೆದ ಒಂದು ವರ್ಷದಿಂದ ಕೊರೊನಾ ಮಹಾಮಾರಿ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿರುವ ಮನರಂಜನಾ ಕ್ಷೇತ್ರ ಸದ್ಯಕ್ಕಂತೂ ಚೇತರಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ.. ಇದರಿಂದಾಗಿ ಕ್ರಿಯಾಶೀಲ ಹಾಗೂ ತಂತ್ರಜ್ಞರು ಸೇರಿದಂತೆ ಸಾವಿರಾರು ಮಂದಿಯ ಜೀವನೋಪಾಯದ ಸ್ಥಿತಿ ಗಂಭೀರವಾಗಿದೆ. ಭಾರತೀಯ ಚಿತ್ರರಂಗ ಮತ್ತು ಕನ್ನಡ ಚಿತ್ರರಂಗಗಳು ಕಳೆದ ಡಿಸೆಂಬರ್ -ಜನವರಿ ಹೊತ್ತಿಗೆ ಇನ್ನೇನು ಚೇತರಿಕೆ ಕಾಣುತ್ತಿವೆ ಎನ್ನುವಾಗ ಮತ್ತೆ ಅಪ್ಪಳಿಸಿರುವ ಎರಡನೇ ಅಲೆಯ ಈ ಮಹಾಮಾರಿಗೆ ಜೀವಗಳು ಜೀವಂತ ಶವ ಆಗುವ ಸ್ಥಿತಿ ತಲುಪಿವೆ. ರಾಜ್ಯದಲ್ಲಿ ಎಲ್ಲಾ ಚಿತ್ರಮಂದಿರಗಳು ಸೇರಿದಂತೆ ಮನರಂಜನಾ ಚಟುವಟಿಕೆ ಸ್ಥಬ್ಧವಾಗಿರುವುದರಿಂದ ಇದನ್ನು ನಂಬಿಕೊಂಡು ಜೀವನ ಮಾಡುವವರ ಸ್ಥಿತಿ ಅಯೋಮಯವಾಗಿದೆ. ಈ ಕೊರೊನಾ ಕಾಲಿಟ್ಟ ಕ್ಷಣದಿಂದಲೇ ಮನರಂಜನಾ ಕ್ಷೇತ್ರ ಸಾವಿರಾರು ಕೋಟಿ ರೂಪಾಯಿಗಳ ನಷ್ಟ ಅನುಭವಿಸಿತ್ತು. ಇದೇ ವೇಳೆ ಸಿನಿಮಾ ಕ್ಷೇತ್ರದ ಜನರ ಬದುಕು ಶೋಚನೀಯ ಸ್ಥಿತಿ ತಲುಪಿತ್ತು. ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ಸಿನಿಮಾ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಲಾಗಿತ್ತು. ಆದರೆ ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸಂಕಷ್ಟದ ಸ್ಥಿತಿಯನ್ನೇ ಅನುಭವಿಸಿದ್ದರು. ಈಗ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಸರ್ಕಾರದ ನಿರ್ದೇಶನಗಳನ್ನು ಪಾಲಿಸುವುದು ನಮ್ಮ ಕರ್ತವ್ಯ. ಇದೇ ವೇಳೆ ಚಿತ್ರಮಂದಿರಗಳ ಕಾರ್ಮಿಕರಿಗೆ ಮತ್ತು ಇತರ ಕೆಲಸಗಾರರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಬೇಕೆಂಬುದು ನಮ್ಮ ನಿರೀಕ್ಷೆಯಾಗಿದೆ ಎಂದು ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಅವರ ಮನವಿಯಾಗಿದೆ. ಕಳೆದ ವರ್ಷ ಕೊರೊನಾ ಹೊಡೆತ ಬಿದ್ದಾಗ ಒಂದು ವಾರಕ್ಕೆ ನೂರಕ್ಕಿಂತಲೂ ಅಧಿಕ ಕೋಟಿಗಳ ನಷ್ಟವಾಗಿದೆ ಎಂದು ಚಿತ್ರರಂಗದ ಗಣ್ಯರು ಹೇಳಿದ್ದರು. ಈ ವರ್ಷ ಗಳಿಕೆಯೇ ನಿಂತು ಹೋಗಿರುವಾಗ ಇನ್ನು ನಷ್ಟದ ಅಂದಾಜು ಹೇಗೆ ಸಾಧ್ಯ ಎಂಬುದು ಗಣ್ಯರ ಅಭಿಪ್ರಾಯ ವಾಗಿದೆ. ಇಡೀ ವಿಶ್ವದ ಮನರಂಜನಾ ಕ್ಷೇತ್ರ ಅಪಾಯದಲ್ಲಿದೆ. ಇನ್ನು ನಮ್ಮದೇನು ಮಹಾ ಎಂಬ ವಿಷಾದವನ್ನು ಹೊರಹಾಕಿದರು ಕನ್ನಡ ಚಿತ್ರರಂಗದ ಗಣ್ಯರು.