ಕಣ್ಣು ತೇವವಾಗಿಸುವ ಪರಿಸರ ಸಂರಕ್ಷಣೆಯ 'ತಲೆದಂಡ'

ಕಣ್ಣು ತೇವವಾಗಿಸುವ ಪರಿಸರ ಸಂರಕ್ಷಣೆಯ 'ತಲೆದಂಡ'

ಪರಿಸರ ಸಂರಕ್ಷಣೆಯ ಮೇಲೆ ಚಲನಚಿತ್ರಗಳು ಬಂದಿರುವುದು ತೀರ ಕಡಿಮೆಯೆಂದೇ ಹೇಳಬಹುದು. ಪರಿಸರ ಉಳಿಸಿ, ಕಾಡು ಉಳಿಸಿ, ವನ್ಯಪ್ರಾಣಿಗಳನ್ನು ಉಳಿಸಿ, ಪ್ಲಾಸ್ಟಿಕ್ ಬಾಟಲ್​ಗಳನ್ನು ತ್ಯಜಿಸಿ, ನದಿಯನ್ನು ಕಲುಷಿತಗೊಳಿಸಬೇಡಿ ಈ ರೀತಿ ಬಿಡಿಬಿಡಿಯಾಗಿ ಅಲ್ಲಿ ಇಲ್ಲಿ ಪರಿಸರವಾದಿಗಳು ಹೇಳುತ್ತಿರುತ್ತಾರೆಯೇ ಹೊರತು, ಇದನ್ನು ಜನಗಳ ಮನಮುಟ್ಟುವ ಹಾಗೆ ಚಲನಚಿತ್ರ ಮಾಧ್ಯಮದಲ್ಲಿ ಬಿಂಬಿಸಿಲ್ಲ. ಈಗ ಈ ಕೊರತೆಯನ್ನು ತಲೆದಂಡ ಚಿತ್ರದ ಮೂಲಕ ನಿರ್ದೇಶಕ ಪ್ರವೀಣ್ ಕೃಪಾಕರ್ ನೀಗಿಸಲು ಪ್ರಯತ್ನಿಸಿದ್ದಾರೆ.

ತಲೆದಂಡ ಚಿತ್ರ ಶ್ರೇಷ್ಠ ನಟ ಸಂಚಾರಿ ವಿಜಯ್ ಅಭಿನಯದಲ್ಲಿ ಅದ್ಭುತವಾಗಿ ಮೂಡಿಬಂದಿದೆಯೆಂದೇ ಹೇಳಬಹುದು. ಚಿತ್ರದಲ್ಲಿ ಸಂಚಾರಿ ವಿಜಯ್ ಜೊತೆಗೆ ಚೈತ್ರಾ ಆಚಾರ್, ಮಂಗಳಾ, ಭವಾನಿ, ಮಂಡ್ಯ ರಮೇಶ್, ರಮೇಶ್ ಪಂಡೀತ್ ಮುಂತಾದವರು ಅಭಿನಯಿಸಿ ಚಿತ್ರಕ್ಕೆ ಜೀವ ತುಂಬಿದ್ದಾರೆ.

ಕರ್ನಾಟಕದ ಗಡಿ ಜಿಲ್ಲೆಯೊಂದರ ಸೋಲಿಗ ಹಾಡಿಯ ಮಾನಸಿಕ ಅಸ್ವಸ್ಥ ಹುಡುಗನೊಬ್ಬ ಹೇಗೆ ಪರಿಸರಕ್ಕೆ ತನ್ನ ಕೊಡುಗೆಯನ್ನು ನೀಡುತ್ತಾನೆ ಎನ್ನುವುದನ್ನು ಚಿತ್ರ ಮನೋಜ್ಷವಾಗಿ ಹೇಳಿದೆ. ಪರಿಸರಕ್ಕಾಗಿ ತನ್ನ ಜೀವವನ್ನೇ ಬಲಿಕೊಡುವ ಪಾತ್ರದಲ್ಲಿ ಸಂಚಾರಿ ವಿಜಯ್ ಪಾತ್ರ ಅತ್ಯದ್ಭುತ. ಯಾವುದೇ ಪಾತ್ರವನ್ನಾದರೂ ಲೀಲಾಜಾಲವಾಗಿ ಅಭಿನಯಿಸಬಲ್ಲ ಸಂಚಾರಿ ವಿಜಯ್ ಚಿತ್ರ ಬಿಡುಗಡೆಗೆ ಮುನ್ನವೇ ತಿಂಗಳುಗಳ ಮುನ್ನ ನಮ್ಮನ್ನಗಲಿದ್ದು ಎಲ್ಲರಿಗೂ ಗೊತ್ತು. ನಾನು ಅವನಲ್ಲ, ಅವಳು ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದ ಸಂಚಾರಿ ವಿಜಯ್​ ಪ್ರತಿಭೆಗೆ ತಕ್ಕಷ್ಟು ಜನಮನ್ನಣೆ ಸಿಗದಿರುವುದು ಬೇಸರದ ಸಂಗತಿ. ಆದರೆ ತಲೆದಂಡದ ಅಭಿನಯಕ್ಕಾಗಿ ವಿಜಯ್​ಗೆ ಮತ್ತೊಮ್ಮೆ ಮರಣೋತ್ತರ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಸಿಕ್ಕರೂ ಅಚ್ಚರಿಯಿಲ್ಲ.

ತಲೆದಂಡದ ಇಡೀ ಸಿನಿಮಾವನ್ನು ಆವರಿಸಿಕೊಂಡಿರುವ ವಿಜಯ್ ಅರೆಮಾನಸಿಕ ಅಸ್ವಸ್ಥನಾಗಿ ನೋಡುಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಾರೆ. ಪರಿಸರದ ಜೊತೆ ಮಾನವನ ಸಂಘರ್ಷ, ಪರಿಸರದ ವೈವಿಧ್ಯತೆ, ಬದುಕಿನಲ್ಲಿಯ ಹೋರಾಟ, ಸವಾಲುಗಳು, ರಾಜಕೀಯ ಇಚ್ಛಾಶಕ್ತಿಯ ಕೊರತೆ ಹೀಗೆ ಅನೇಕ ವಿಷಯಗಳನ್ನು ತಲೆದಂಡ ಚಿತ್ರ ಚರ್ಚಿಸುತ್ತದೆ.

ಈ ಚಿತ್ರದಲ್ಲಿಯ ಪಾತ್ರಕ್ಕಾಗಿ ಸಂಚಾರಿ ವಿಜಯ್ ಈ ಪಾತ್ರದ ಜೀವಂತ ವ್ಯಕ್ತಿಯನ್ನು ವಾರಗಳ ಕಾಲ ಜೊತೆಗಿದ್ದು ಅಭ್ಯಾಸ ನಡೆಸಿದ್ದರು ಎನ್ನುವುದು ತುಂಬಾ ಜನಕ್ಕೆ ತಿಳಿದಿರಲಾರದು. ಆದರೆ ಹೀಗೆ ನಿಜವಾಗಿಯೂ ಪಾತ್ರದ ಅಧ್ಯಯನ ನಡೆಸಿದ್ದ ವಿಜಯ್ ಈ ವಿಷಯದಲ್ಲಿ ಕಮಲ್​ಹಾಸನ್​ರನ್ನೂ ಮೀರಿಸಿದ್ದಾರೆ ಎನ್ನಬಹುದು. ತಮ್ಮ ಸತತ ಅಧ್ಯಯನ ಹಾಗು ವಿಭಿನ್ನ ಪಾತ್ರಗಳ ತುಡಿತದಿಂದಾಗಿಯೇ ವಿಜಯ್ ತಲೆದಂಡದಲ್ಲಿ ಮಾನಸಿಕ ಅಸ್ವಸ್ಥನ ಪಾತ್ರವನ್ನು ಅಷ್ಟು ಪರಿಪಕ್ವವಾಗಿ ಮೂಡಿಸಲು ಸಾಧ್ಯವಾಗಿದೆ.

ಓಂಪ್ರಕಾಶ್ ನಾಯಕ್, ಹಿರಿಯ ಉಪಸಂಪಾದಕ, BMG24x7 ಲೈವ್ ಕನ್ನಡ