ENTERTAINMENT:
ಒಂದು ಸಿನಿಮಾ ನಿರ್ಮಿಸಲು ನಿರ್ದೇಶಿಸಲು, ಅದರ ಮೂಲ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಅವಶ್ಯ. ಈ ವಿಷಯಗಳನ್ನು ತಿಳಿದುಕೊಂಡ ನಂತರ ನಾವು ಅವುಗಳನ್ನು ವಿಸ್ತಾರವಾಗಿ ತಿಳಿದುಕೊಳ್ಳಬಹುದು.
ಮೂಲತಃ ಸಿನಿಮಾ ಎಂದರೆ ದೃಶ್ಯಮಾಧ್ಯಮದ ಮೂಲಕ ಕಥೆಯನ್ನು ಹೇಳುವುದು ಎನ್ನುವುದನ್ನು ಈಗಾಗಲೇ ನಾವು ನೋಡಿದ್ದೇವೆ. ಹಾಗಾದರೆ ಒಂದು ಕಥೆಯನ್ನು ದೃಶ್ಯಮಾಧ್ಯಮದಲ್ಲಿ ಮೂಡಿಸಲು ಏನೆಲ್ಲ ಮಾಡಬೇಕು?
ಮೊದಲಿಗೆ ಒಂದು ಕಥೆಯನ್ನು ಚಿತ್ರಕಥೆ ಮಾಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಸಂಭಾಷಣೆಯನ್ನು ರಚಿಸಿಕೊಳ್ಳಬೇಕು. ಹಾಡುಗಳನ್ನು ಬರೆಯಿಸಿ ಅವುಗಳನ್ನು ಧ್ವನಿಮುದ್ರಿಸಿಕೊಳ್ಳಬೇಕು. ನಂತರ ತಂತ್ರಜ್ಷರು ಕಲಾವಿದರನ್ನು ಆಯ್ಕೆ ಮಾಡಿಕೊಂಡು ಯುನಿಟ್ ಕ್ಯಾಮರಾ ಬುಕ್ ಮಾಡಿಕೊಂಡು ಚಿತ್ರನಿರ್ಮಾಣಕ್ಕೆ ಮೊದಲಾಗಬೇಕು. ಇವನ್ನೆಲ್ಲ ವಿವರವಾಗಿ ಮುಂದಿನ ಅಧ್ಯಾಯಗಳಲ್ಲಿ ನೋಡೋಣ.
ಸಿನಿಮಾಗಳನ್ನು ಮೂವಿ ಕ್ಯಾಮರಗಳಲ್ಲಿ ಶೂಟ್ ಮಾಡುತ್ತಾರೆ. ಡಿಜಿಟಲ್ ಬರುವ ಮೊದಲು ಆರಿ3 ಹಾಗೂ ಆರಿ 4 ಕ್ಯಾಮರಾಗಳು ಬಹುವಾಗಿ ಬಳಕೆಯಲ್ಲಿದ್ದವು. ಅವುಗಳನ್ನು ಹೊರತುಪಡಿಸಿದರೆ, ಇವುಗಳಿಗಿಂತ ಮೊದಲು ಬಳಕೆಯಲ್ಲಿದ್ದವುಗಳೆಂದರೆ 2ಸಿ ಸಿನಿಮಾಸ್ಕೋಪ್ ಕ್ಯಾಮರಾಗಳು. ಶ್ರೀಮಂತ ಸಂಸ್ಥೆಗಳು ಸೂಪರ್ 35 ಮುಂತಾದ ಕ್ಯಾಮರಾಗಳನ್ನು ಸಹ ಬಳಸುತ್ತಿದ್ದರು. ಇವೆಲ್ಲಾ ಕ್ಯಾಮರಾಗಳಲ್ಲಿ ನೆಗೆಟಿವ್ ರೀಲ್ಗಳನ್ನು ಹಾಕಲಾಗುತ್ತಿತ್ತು. ಆ ರೀಲ್ಗಳು 400 ಅಡಿಗಳ ಕ್ಯಾನ್ಗಳಲ್ಲಿ ಲಭ್ಯವಾಗುತ್ತಿದ್ದವು.
ಹಿಂದೆ ಕಡಿಮೆ ಬಜೆಟ್ ಸಿನಿಮಾ ನಿರ್ಮಾಣದಲ್ಲಿ 16ಎಂಎಂ ಕ್ಯಾಮರಾಗಳನ್ನು ಬಳಸಲಾಗುತ್ತಿತ್ತು. ಅವುಗಳ ರಾಸ್ಟಾಕ್ ಅಂದರೆ ಕಚ್ಚಾರೀಲ್ಗಳೂ ಸಹ 400 ಅಡಿ ಕ್ಯಾನ್ಗಳಲ್ಲೇ ಲಭ್ಯವಾಗುತ್ತಿದ್ದವು. ಆದರೆ ಇವುಗಳ 400 ಅಡಿ ರೀಲ್ ಎಂದರೆ 35ಎಂಎಂ ಬ್ಲೋ ಅಪ್ ನಂತರ 100 ಅಡಿ ಲೆಕ್ಕಕ್ಕೆ ಬರುತ್ತಿದ್ದವು. ಆದ್ದರಿಂದ 16ಎಂಎಂ 400 ಅಡಿ ಕ್ಯಾನ್ ಎಂದರೆ 35 ಎಂಎಂ ನ 1000 ಅಡಿ ರೀಲ್ ಇದ್ದಂತೆ ಎಂದು ಗೊತ್ತಿದ್ದರೆ ಸಾಕು. ಅಂದರೆ 35 ಎಂಎಂ ರೀಲಿನ ಒಂದು ಅಡಿಯಲ್ಲಿ 16 ಫ್ರೇಮ್ಗಳಿದ್ದರೆ, 16ಎಂಎಂನ ಒಂದು ಅಡಿಯಲ್ಲಿ 40 ಫ್ರೇಮ್ ಇರುತ್ತಿತ್ತು.
ಸಿನಿಮಾ ಕ್ಯಾಮರಾಗಳಲ್ಲಿ ಅಂದೂ ಇಂದೂ ರೀಲ್ ಒಂದು ಸೆಕೆಂಡಿಗೆ 24 ಫ್ರೇಮ್ ಓಡುತ್ತದೆ. ಇದನ್ನು ನಾರ್ಮಲ್ ಸ್ಪೀಡ್ ಎನ್ನುತ್ತಾರೆ. ಈ ಸ್ಪೀಡಿನಲ್ಲಿ ಫೀಲ್ಮ್ ಓಡಿದರೆ ಮಾತ್ರ ನಮಗೆ ದೃಶ್ಯಗಳು ಸಹಜ ವೇಗದಲ್ಲಿ ಚಲನೆಯಾಗುವುದು ಕಾಣಸಿಗುತ್ತದೆ. ಅದಲ್ಲದೆ ಫಾಸ್ಟ್ ಮೋಷನ್ ಅಥವಾ ಸ್ಲೋಮೋಷನ್ಗಳಲ್ಲಿ ಸಹ ಕ್ಯಾಮರಾ ರನ್ ಮಾಡಬಹುದು. ಫಾಸ್ಟ್ ಮೋಷನ್ ಎಂದರೆ ಸೆಕೆಂಡಿಗೆ 24 ಫ್ರೇಮ್ಗಳಿಗಿಂತ ಕಡಿಮೆ ಓಡುವುದು ಎಂದರ್ಥ.
ಮುಂದುವರೆಯುವುದು..
ಓಂಪ್ರಕಾಶ್ ನಾಯಕ್, BMG24x7ಲೈವ್ಕನ್ನಡ