ENTERTAINMENT: ಕನ್ನಡದ ಕ್ರೇಜಿಸ್ಟಾರ್, ಅನುಪಮ ತಂತ್ರಜ್ಞ, ನಿರಂತರ ಕ್ರಿಯಾಶೀಲ, ಸ್ಯಾಂಡಲ್ ವುಡ್ ಶೋಮ್ಯಾನ್, ಕನಸುಗಾರ ವಿ.ರವಿಚಂದ್ರನ್ ಭಾನುವಾರ (ಮೇ 30/2021) ತಮ್ಮ ಅರವತ್ತನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಇದನ್ನು ಸವಿ ನೆನಪಾಗಿಸುವ ವಿನೂತನ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಸಕ್ರಿಯರಾಗಿರುವ ಕ್ರೇಜಿಸ್ಟಾರ್ ತಮ್ಮ ಹುಟ್ಟುಹಬ್ಬದ ಸಲುವಾಗಿನ ಯೋಜನೆಗಳ ಕುರಿತು ಅತ್ಯಂತ ವರ್ಣರಂಜಿತ ಹಾಗೂ ಕ್ರಿಯಾತ್ಮಕ ವಿಡಿಯೋ ಮಾಡಿ ಬಿಟ್ಟಿದ್ದಾರೆ. ಅಭಿಮಾನಿಗಳಿಗೆ ಗಿಫ್ಟ್ ಎನ್ನುತ್ತಲೇ ಕಲಾತ್ಮಕ ಅಭಿವ್ಯಕ್ತಿ ರೂಪದ ಯೋಜನೆಗಳು ಪ್ರಕಟಗೊಂಡಿವೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಹಾಗೂ ತಾವೇ ನಿರ್ಮಾಪಕರಾಗಿ ಮುಂದುವರೆದಿರುವ 'ರವಿ ಬೋಪಣ್ಣ' ಚಿತ್ರ ಸೇರಿದಂತೆ ಹೊಸ ಪ್ರಯೋಗಾತ್ಮಕ ಚಿತ್ರಗಳ ಟೀಸರ್ ಮಾದರಿಯ ವಿವರಗಳನ್ನು ಆ ವಿಡಿಯೋ ನೀಡುತ್ತದೆ. 'ಗಾಡ್' ಎಂಬುದು ಮತ್ತು ಕಲ್ಲು ಹೃದಯಿ ಎಂಬ ಟ್ಯಾಗ್ ಲೈನ್ ಗಮನ ಸೆಳೆಯುತ್ತದೆ. ಅದೇ ರೀತಿ ಮನೆ ಮಂದಿಯೆಲ್ಲ (ತಮ್ಮ ಇಬ್ಬರು ಮಕ್ಕಳು) ನಟಿಸಿದಂತೆ ಕಾಣುವ 'ಬ್ಯಾಡ್ ಬಾಯ್ಸ್' ತ್ರಿ ಇನ್ ಒನ್ ಎಂಬ ಟ್ಯಾಗ್ ಲೈನ್ ಕಾಣಿಸುತ್ತದೆ. ವಿಡಿಯೋ ವರ್ಣಾತೀತ; ರವಿಚಂದ್ರನ್ ಅವರ ಕ್ರಿಯಾಶೀಲ ನಡೆಯನ್ನು ವಿವರಿಸುವುದೂ ಕಷ್ಟ.. ಕನ್ನಡದ ಮಟ್ಟಿಗೆ ವಿನೂತನ ಚಿತ್ರಗಳ ನಿರ್ಮಾಣ ಸಾಧ್ಯತೆಯನ್ನು ರವಿಚಂದ್ರನ್ ಬಿಚ್ಚಿಟ್ಟಿದ್ದಾರೆ ಎನಿಸುತ್ತದೆ.