ಬ್ಯಾಕ್ ಆನ್ ಸ್ಟೇಜ್ ತಂಡದಿಂದ ಶ್ಮಶಾನ ಕುರುಕ್ಷೇತ್ರ ನಾಟಕ: ಅದ್ದೂರಿ ಪ್ರದರ್ಶನ

ಬ್ಯಾಕ್ ಆನ್ ಸ್ಟೇಜ್ ತಂಡದಿಂದ ಶ್ಮಶಾನ ಕುರುಕ್ಷೇತ್ರ ನಾಟಕ: ಅದ್ದೂರಿ ಪ್ರದರ್ಶನ

ಕಳೆದ ಎರಡು ವರ್ಷಗಳಿಂದ ಕೊರೊನಾವೆಂಬ ಸಾಂಕ್ರಾಮಿಕ ರೋಗದಿಂದ ಜಗತ್ತಿಗೆ ಕತ್ತಲಾವರಿಸಿತ್ತು ಇನ್ನೂ ರಂಗಕ್ಕೆ ಎಲ್ಲಿಯ ಬೆಳಕು ಎಂದು ಬುದುಕಿನಲ್ಲಿ ದಾರಿ ಕಾಣದೆ ಕಲಾವಿದರೆಲ್ಲ ಕುಳಿತಾಗ ಕಲಾಪೋಷಕರು ಸಂಕಷ್ಟದಲ್ಲಿದ್ದ ಕಲಾವಿದರಿಗೆ ನೆರವಾಗಬೇಕೆಂದು ತೀರ್ಮಾನಿಸಿ ಸಹಾಯಹಸ್ತ ಚಾಚುತ್ತಾರೆ. ಆದರೆ ಸ್ವಾಭಿಮಾನದ ಅಡಿಯಲ್ಲಿ ಬೆಳೆದಿದ್ದ ಕಲಾವಿದರು ಅದರ ಅವಶ್ಯಕತೆ ಇಲ್ಲವೆಂದು ನೆರವನ್ನು ಪಡೆಯುವುದಿಲ್ಲ. ಕಲಾ ಪೋಷಕರೆಲ್ಲಾ ಸೇರಿ ಬ್ಯಾಕ್ ಆನ್ ಸ್ಟೇಜ್ ತಂಡವನ್ನು ರಚಿಸಿ ಒಂದು ತಿಂಗಳ ಕಾರ್ಯಾಗಾರವನ್ನು ಆನ್ಲೈನ್ ಮೂಲಕ ನಡೆಸಿ ನಂತರ ಗೌರವಧನವನ್ನು ನೀಡುವುದು ಉಚಿತವೆಂದು ಭಾವಿಸಿ ರಂಗಭೂಮಿಯನ್ನು ಸಂಪೂರ್ಣವಾಗಿ ಬದುಕಿಸಿಕೊಂಡವರಿಗೆ ಎಂದು ಅರ್ಜಿಯನ್ನು ಆಹ್ವಾನಿಸಿ ಅದರ ಮೂಲಕ 30 ಕಲಾವಿದರನ್ನು ಸಹ ಆಯ್ಕೆ ಮಾಡುತ್ತಾರೆ.

ಇದರಲ್ಲಿ ನಟ-ನಟಿಯರು, ನೇಪಥ್ಯ ಕಲಾವಿದರು ಇದ್ದರು. ಒಂದು ತಿಂಗಳ ಕಾರ್ಯಗಾರದಲ್ಲಿ ಇವರೆಲ್ಲರ  ಕಾರ್ಯ ವೈಖರಿಯನ್ನು ಗುರುತಿಸಿ ಬ್ಯಾಕ್ ಆನ್ ಸ್ಟೇಜ್ ನ ಎಲ್ಲಾ ಅನಿಯಮಿತ ಕಲಾಪೋಷಕರು ಈ ಕಲಾವಿದರು ನಾಟಕವನ್ನು ಮಾಡಲೆಂದು ತೀರ್ಮಾನಿಸಿ ಮುಂದಿನ 2 ತಿಂಗಳು ನಾಟಕಕ್ಕೆ ಅನುವು ಮಾಡಿ ಕೊಡುತ್ತಾರೆ. 30 ಜನ ಕಲಾವಿದರನ್ನು ಎರಡು ತಂಡವಾಗಿ ನಿರ್ಮಿಸಿ 15 ಜನರ ಒಂದು ತಂಡಕ್ಕೆ ಒಬ್ಬರು ನಿರ್ದೇಶಕರನ್ನು ಸಹಾ ಆಯ್ಕೆ ಮಾಡುತ್ತಾರೆ. ಅದೇ ರೀತಿಯ ಬ್ಯಾಕ್ ಆನ್ ಸ್ಟೇಜ್ ಎರಡು ತಂಡಗಳಲ್ಲಿ ಉಗಮಗೊಂಡ ಒಂದು ತಂಡವೇ ತವಸ್ಯಂ.

ಸ್ಮಾಶಾನ ಕುರುಕ್ಷೇತ್ರ ನಾಟಕದಲ್ಲಿ ಕಲಾವಿದ

ಈ ತವಸ್ಯಂ ತಂಡದ ನಿರ್ದೇಶಕರೇ ಸವಿತಾ ಬಿ. ಇವರು ಆಯ್ಕೆ ಮಾಡಿಕೊಂಡ ನಾಟಕ ಸ್ಮಶಾನ ಕುರುಕ್ಷೇತ್ರಂ. ಬ್ಯಾಕ್ ಆನ್ ಸ್ಟೇಜ್ ನ ಆಶ್ರಯದಲ್ಲಿ ರೂಪಗೊಂಡು ನಿರ್ದೇಶಕರ ಮಾರ್ಗದರ್ಶನದಲ್ಲಿ ಸಾಗುತ್ತಿರುವ ಈ ತಂಡವು ಬ್ಯಾಕ್ ಆನ್ ಸ್ಟೇಜ್ ನ ವತಿಯಿಂದ ಸಾಕಷ್ಟು ಪ್ರದರ್ಶನಗಳನ್ನು ಈಗಾಗಲೇ ಮಾಡಿದ್ದು ಸರ್ವಕಾಲಿಕವಾದ, ಸರ್ವವ್ಯಾಪಿಯಾದ ಈ ನಾಟಕವನ್ನು ತಂಡದ ಮೂಲಕ ಎಲ್ಲಾ ಕಡೆಯಲ್ಲೂ ಹೊತ್ತು ಸಾಗುವ ಆಶಯವನ್ನು ಹೊಂದಿದ್ದಾರೆ.  ಪೂರ್ಣಿಮಾ, ವಿದ್ಯಾ, ವೇದಮಾಲಾ, ಪಣೀಶ್ ಸೇರಿದಂತೆ ಅನೇಕ ಅನುಭವಿ ಕಲಾವಿದರು ತಂಡದಲ್ಲಿದ್ದಾರೆ. ಎಲ್ಲರೂ ನಾಟಕವನ್ನ ನೋಡಿ, ಸ್ವಾಭಿಮಾನಿ ಕಲಾವಿದರನ್ನ ಪ್ರೋತ್ಸಾಹಿಸೋದು ನಮ್ಮ ಕರ್ತವ್ಯ ಅಲ್ಲವೇ?