ENTERTAINMENT: ಜೂನ್ 4ರಂದು ಬಿಡುಗಡೆಗೆ ಸಿದ್ಧವಾಗಿರುವ "ಫ್ಯಾಮಿಲಿ ಮ್ಯಾನ್-2" ಹಿಂದಿ ಧಾರಾವಾಹಿಯನ್ನು ನಿಷೇಧಿಸಬೇಕೆಂದು ರಾಜ್ಯಸಭಾ ಸದಸ್ಯ ವೀಕೋ ಆಗ್ರಹಿಸಿದ್ದಾರೆ. ಈ ಸಂಬಂಧ ಅವರು ಮಾಹಿತಿ ಮತ್ತು ತಂತ್ರಜ್ನಾನ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರಿಗೆ ಪತ್ರ ಬರೆದಿದ್ದಾರೆ. ಈ ಧಾರಾವಾಹಿಯಲ್ಲಿ ತಮಿಳರನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂಬುದು ಅವರ ಆರೋಪ. ಇತ್ತೀಚೆಗೆ ಬಿಡುಗಡೆಯಾಗಿರುವ ಧಾರಾವಾಹಿಯ ಟ್ರೈಲರಿನ ಬಗ್ಗೆ ಪ್ರಸ್ತಾಪಿಸಿರುವ ಅವರು, ತಮಿಳರನ್ನು ಉಗ್ರರಂತೆಯೂ ಐಎಸ್ಐ ಏಜಂಟರಂತೆಯೂ ಚಿತ್ರಿಸಲಾಗಿದೆ. ತಮಿಳ್ ಈಳಂ ಯೋಧರತ್ಯಾಗವನ್ನೂ ತಪ್ಪಾಗಿ ತೋರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ಧಾರಾವಾಹಿಯಲ್ಲಿ ನಟ ಮನೋಜ್ ವಾಜಪೇಯಿ ಜೊತೆ ಮುಖ್ಯ ಭೂಮಿಕೆಯಲ್ಲಿರುವ ನಟಿ ಸಮಂತಾ ತಮಿಳು ಭಾಷೆ ಮಾತನಾಡುವವರಾಗಿದ್ದು, ಪಾಕಿಸ್ತಾನದ ಭಯೋತ್ಪಾದಕರೊಡನೆ ಸಂಬಂಧ ಇರುವಂತೆ ಕಣಿಸಲಾಗಿರುವುದು ತಮಿಳರ ಭಾವನೆಗಳನ್ನು ಘಾಸಿಗೊಳಿಸುವಂತಿದೆ. ತಮಿಳು ಸಮುದಾಯ ಮತ್ತು ಸಂಸ್ಕೃತಿಗೆ ವಿರುದ್ಧವಾದ ಚಿತ್ರಣ ಇಲ್ಲಿದೆ ಎಂದು ತಕರಾರು ತೆಗೆದಿದ್ದಾರೆ. ಈ ದಾರಾವಾಹಿಯನ್ನು ನಿಷೇಧಿಸದಿದ್ದರೆ ತಮಿಳರ ಪ್ರತಿಕ್ರಿಯೆ ತೀವ್ರವಾಗಿರಲಿದೆ ಮತ್ತು ಸರ್ಕಾರ ಅದನ್ನು ಎದುರಿಸಬೇಕಾಗಿ ಬರುತ್ತದೆ ಎಂದು ಎಂಡಿಎಂಕೆ ನಾಯಕ ವೈಕೋ ಎಚ್ಚರಿಸಿದ್ದಾರೆ.