ENTERTAINMENT:
ನಿರ್ದೇಶನ ಎಂದರೆ ಒಂದು ಕೆಲಸವನ್ನು ಇದೇ ರೀತಿ ಮಾಡಬೇಕು ಎಂದು ಇತರರಿಗೆ ಹೇಳುವ ಮೂಲಕ ಅವರಿಂದ ಆ ಕೆಲಸ ಮಾಡಿಸುವುದು ಹಾಗೂ ಮಾಡುವುದು. ಆ ಕೆಲಸ ಯಾವುದೇ ರಂಗದ್ದಾಗಿರಬಹುದು. ಅಲ್ಲಿ ಆ ಕೆಲಸವು ಯಾವ ರೀತಿ ನಡೆಯಬೇಕೆಂಬುದನ್ನು ಸೂಚುಸುವುದೇ ನಿರ್ದೇಶನ, ಹಾಗೂ ಆ ರೀತಿ ಸೂಚಿಸುವವನೇ ನಿರ್ದೇಶಕ. ಯಾವುದೇ ಕಾರ್ಪೋರೆಟ್ ಕಂಪನಿಯಾಗಿರಬಹುದು, ಸರ್ಕಾರಿ ಇಲಾಖೆಯಾಗಿರಬಹುದು. ಅಲ್ಲಿ ನಿರ್ದೇಶಕರಿರುವುದನ್ನು ನೀವು ಗಮನಿಸಬಹುದು. ಅವರು ತಮ್ಮ ಇಲಾಖೆಯ ಅಥವ ಕಂಪನಿಯನ್ನು ಯಾವ ರೀತಿಯಲ್ಲಿ ಮುನ್ನಡೆಸಬೇಕೆಂಬುದನ್ನು ನಿರ್ಧರಿಸಿ ಅದನ್ನು ತಮ್ಮ ಅಧೀನ ಅಧಿಕಾರಿ, ಕೆಲಸಗಾರರ ಮುಖಾಂತರ ಮಾಡುತ್ತಾರೆ.
ಇನ್ನು ಬೇರೆ ರೀತಿಯಲ್ಲಿ ನೋಡುವುದಾದರೆ ಒಂದು ಮನೆ ಕಟ್ಟುವ ಪ್ರಕ್ರಿಯೆಯಲ್ಲಿ ಒಬ್ಬ ಕಾಂಟ್ರಾಕ್ಟರ್ ತನ್ನ ಕೈಕೆಳಗಿನ ಮೇಸ್ತ್ರಿಗೆ ಗೋಡೆಯನ್ನು ಹೀಗೆಯೇ ಕಟ್ಟಬೇಕು, ಇಲ್ಲಿ ಕಿಟಕಿ ಬಾಗಿಲುಗಳು ಬರಬೇಕು ಎಂದು ಸೂಚಿಸಿದರೆ, ಮೇಸ್ತ್ರಿ ತನ್ನ ಕೈಕೆಳಗಿನ ಗಾರೆ ಕೆಲಸದವನಿಗೆ ಇದೇ ಇಟ್ಟಿಗೆಗಳನ್ನು ಬಳಸಿ ಇಷ್ಟೇ ಎತ್ತರದ ಗೋಡೆ ಕಟ್ಟಬೇಕು, ಕಿಟಕಿಯ ಅಗಲ ಇಷ್ಟೇ ಇರಬೇಕು ಎಂದು ಹೇಳುತ್ತಾನೆ. ಇವೆಲ್ಲ ಒಬ್ಬರು ಇನ್ನೊಬ್ಬರಿಗೆ ಕೊಡುವ ನಿರ್ದೇಶನವೆಂದರೆ ತಪ್ಪಾಗಲಾರದು.
ಒಬ್ಬ ಡಾಕ್ಟರ್ ನರ್ಸಿಗೆ ಪೇಷೆಂಟ್ಗೆ ಇಷ್ಟು ಗಂಟೆಗೆ ಮಾತ್ರ ಇಂಜೆಕ್ಷನ್ ಕೊಡಬೇಕು ಎನ್ನುವುದು ಕೂಡ ನಿರ್ದೇಶನವೆ! ಇವೆಲ್ಲ ನಿರ್ದೇಶನದ ವಿಸ್ತ್ರತ ಅರ್ಥವಾದರೆ, ಸಿನಿಮಾ, ಟಿವಿ ಅಥವಾ ರಂಗಭೂಮಿಯ ನಿರ್ದೇಶಕರು ಸಹ ಸರಿಸುಮಾರು ಇದೇ ಅರ್ಥದಲ್ಲಿ ಕೆಲಸ ಮಾಡುವುದನ್ನು ನೋಡಬಹುದು.
ಉದಾಹರಣೆಗೆ ರಂಗಭೂಮಿಯಲ್ಲಿ ರಂಗದ ಮೇಲೆ ನಟರು ಯಾವಾಗ ಬರಬೇಕು, ಹೋಗಬೇಕು, ಅವರ ಸಂಭಾಷಣೆ ಯಾವ ರೀತಿಯಿರಬೇಕು, ನೆರಳು ಬೆಳಕುಗಳ ಸಂಯೋಜನೆ, ರಂಗದ ಮೇಲೆ ಯಾವ ರೀತಿಯ ಸೆಟ್ ಹಾಕಬೇಕು.. ಹೀಗೆ ಪ್ರತಿಯೊಂದನ್ನೂ ನಿರ್ಧರಿಸಿ ಆ ರೀತಿಯಲ್ಲಿ ನಾಟಕವನ್ನು ಮಾಡಿಸುವ ಜವಾಬ್ದಾರಿ ರಂಗನಿರ್ದೇಶಕನದ್ದು.
ಮುಂದುವರೆಯುವುದು...
ಓಂಪ್ರಕಾಶ್ ನಾಯಕ್, BMG24x7ಲೈವ್ಕನ್ನಡ