FACT CHECK:
ಭಾರತದ ರಾಷ್ಟ್ರೀಯ ಭದ್ರತೆ , ವಿದೇಶಾಂಗ ಸಂಬಂಧಗಳು ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ವಿಚಾರಗಳಲ್ಲಿ ತಪ್ಪು ಮಾಹಿತಿಯನ್ನು ಹರಡಿದ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು 16 ಯುಟ್ಯೂಬ್ ಚಾನೆಲ್‌ಗಳನ್ನು ಸೋಮವಾರ ನಿರ್ಬಂಧಿಸಿದೆ. ಈ ನಿರ್ಬಂಧಿಸಲಾದ 16 ಚಾನೆಲ್ಗಳಲ್ಲಿ 6 ಪಾಕಿಸ್ತಾನದ ಯುಟ್ಯೂಬ್ ಚಾನೆಲ್ಗಳು ಹಾಗೂ ಉಳಿದವು ಭಾರತೀಯ ಯುಟ್ಯೂಬ್ ಚಾನೆಲ್ಗಳು ಎಂದು ಕೇಂದ್ರ ಸರ್ಕಾರ ಹೇಳಿದೆ.
ಯೂ ಟ್ಯೂಬ್ ಚಾನೆಲ್ಗಳು ಭಾರತದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ , ಭಯದ ವಾತಾವರಣವನ್ನು ಹುಟ್ಟಿಸುವ ಹಾಗೂ ಸಾರ್ವಜನಿಕ ಸುವ್ಯವಸ್ಥೆಯನ್ನು ಹಾಳು ಮಾಡುವಂತಹ ಸುದ್ದಿಗಳನ್ನೇ ಹರಡುತ್ತಿವೆ. ನಿರ್ಬಂಧಿಸಲಾದ ಯುಟ್ಯೂಬ್ ಚಾನೆಲ್ಗಳು 68 ಕೋಟಿಗೂ ಅಧಿಕ ವೀಕ್ಷಕರನ್ನು ಹೊಂದಿದ್ದವು ಎಂದು ಕೇಂದ್ರ ಸರ್ಕಾರದ ಆದೇಶ ಪ್ರತಿಯು ಮಾಹಿತಿ ನೀಡಿದೆ.
ಕೇಂದ್ರ ಸರ್ಕಾರವು ಈ ರೀತಿಯಾಗಿ ಯುಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿರುವುದು ಇದೇ ಮೊದಲೇನಲ್ಲ. ಈ ತಿಂಗಳ ಆರಂಭದಲ್ಲಿ ಭಾರತದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರದಲ್ಲಿ ತಪ್ಪು ಮಾಹಿತಿಯನ್ನು ಹರಡಿದ ಕಾರಣಕ್ಕೆ ಕೇಂದ್ರ ಸರ್ಕಾರವು 22 ಯುಟ್ಯೂಬ್ ಚಾನೆಲ್ಗಳಿಗೆ ಕೊಕ್ ನೀಡಿತ್ತು. ನಿರ್ಬಂಧಗೊಂಡ 22 ಯುಟ್ಯೂಬ್ ಚಾನೆಲ್ಗಳ ಪೈಕಿ ನಾಲ್ಕು ಪಾಕಿಸ್ತಾನ ಹಾಗೂ ಉಳಿದವು ಭಾರತದಲ್ಲಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಐಟಿ ನಿಯಮಗಳ ಅಧಿಸೂಚನೆಯ ಬಳಿಕ ಭಾರತ ಮೂಲದ ಯುಟ್ಯೂಬ್ ಖಾತೆಗಳ ವಿರುದ್ಧ ಕೈಗೊಂಡ ಮೊದಲ ಕ್ರಮ ಇದಾಗಿತ್ತು.
“ಭಾರತೀಯ ಸಶಸ್ತ್ರ ಪಡೆಗಳು, ಜಮ್ಮು ಮತ್ತು ಕಾಶ್ಮೀರ ಮುಂತಾದ ವಿವಿಧ ವಿಷಯಗಳ ಕುರಿತು ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡುತ್ತಿದ್ದ ಅನೇಕ ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಲಾಗಿದೆ. ನಿರ್ಬಂಧಿಸಲು ಆದೇಶಿಸಿದ ವಿಷಯವು ಸಂಘಟಿತ ರೀತಿಯಲ್ಲಿ ಕಾರ್ಯನಿರ್ವಹಿಸುವ ಬಹು ಸಾಮಾಜಿಕ ಮಾಧ್ಯಮ ಖಾತೆಗಳಿಂದ ಪೋಸ್ಟ್ ಮಾಡಿದ ಕೆಲವು ಭಾರತ ವಿರೋಧಿ ವಿಷಯವನ್ನು ಒಳಗೊಂಡಿದೆ. ಪಾಕಿಸ್ತಾನದಿಂದ,” ಎಂದು ಸರ್ಕಾರ ಹೇಳಿದೆ.