ದೇವರ ವಿಗ್ರಹ ಪ್ರತಿಷ್ಠಾಪನೆ ಸಂದರ್ಭದಲ್ಲೇ ಪೂಜೆ ನಿಲ್ಲಿಸಬೇಕಿತ್ತು: ಹೆಚ್ ಡಿ ಕೆ

ದೇವರ ವಿಗ್ರಹ ಪ್ರತಿಷ್ಠಾಪನೆ ಸಂದರ್ಭದಲ್ಲೇ ಪೂಜೆ ನಿಲ್ಲಿಸಬೇಕಿತ್ತು: ಹೆಚ್ ಡಿ ಕೆ

ಕೆ.ಆರ್.ಪೇಟೆ: ಮುಸ್ಲಿಮರು ಕೆತ್ತನೆ ಮಾಡಿದ ಮೂರ್ತಿಗಳಿಗೆ ಪೂಜೆ ಬೇಡ ಎಂದು ಈಗ ಹೇಳುತ್ತಿದ್ದೀರಿ. ಪ್ರತಿಷ್ಠಾಪನೆ ಸಂದರ್ಭದಲ್ಲೇ ನೀವು ಪ್ರತಿಭಟನೆ ಮಾಡಿ ಪೂಜೆ ನಿಲ್ಲಿಸಬೇಕಿತ್ತಲ್ಲವೇ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಮಾದ್ಯಮಗಳೊಂದಿಗೆ ಮಾತನಾಡಿದ ಹೆಚ್ ಡಿ ಕೆ, ಒಂದು ಧರ್ಮದವರು ಇನ್ನೊಂದು ಧರ್ಮದವರನ್ನು ಕೊಂದು ಬದುಕಲು ಸಾಧ್ಯವಿಲ್ಲ. ಇಲ್ಲಿ ಎಲ್ಲಾ ಧರ್ಮಗಳು ಉಳಿಯಬೇಕು. ಮುಸ್ಲಿಮರು ಕೆತ್ತಿದ ದೇವರ ಮೂರ್ತಿಗಳು ಸಾವಿರಾರು ಹಳ್ಳಿಗಳ ದೇವಾಲಯಗಳಲ್ಲಿ ಸಂಪ್ರದಾಯದಂತೆ ಪೂಜಿಸಲಾಗುತ್ತಿದೆ. ಆದರೆ ಈಗ ಪೂಜೆ ಬೇಡ ಎನ್ನುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಲಾಗುತ್ತಿದೆ ಎಂದು ಹೆಚ್ ಡಿ ಕೆ ಆರೋಪಿಸಿದರು.

ಮುಸ್ಲಿಮರು ತಯಾರಿಸಿದ ಮೂರ್ತಿಗೆ ಪೂಜೆ ಬೇಡ ಎಂದಿದ್ದ ಶ್ರೀನಿವಾಸ ಗುರೂಜಿ

ಮುಸ್ಲಿಮರು ಹಿಂದೂ ದೇವರ ಮೂರ್ತಿಗಳನ್ನು ಕೆತ್ತನೆ ಮಾಡಬಾರದು. ಅನ್ಯ ಧರ್ಮಿಯರು ತಯಾರಿಸಿದ ದೇವರ ಮೂರ್ತಿಯನ್ನು ಹಿಂದೂ ದೇವಾಲಯಗಳಲ್ಲಿ ಪ್ರತಿಷ್ಠಾಪನೆ ಮಾಡಬಾರದು. ಹಿಂದೂ ದೇವರನ್ನು ಕೆತ್ತನೆ ಮಾಡಲು ಒಂದು ಪದ್ಧತಿ ಹಾಗೂ ಸಂಪ್ರದಾಯವಿದೆ. ವಿಶ್ವಕರ್ಮ ಸಮುದಾಯದ ಕುಶಲಕರ್ಮಿಗಳು ಮಾತ್ರವೇ ದೇವರ ಮೂರ್ತಿ ತಯಾರಿಸುತ್ತಾರೆ. ಮುಸ್ಲಿಮರು ಹಿಂದೂ ದೇವರ ಮೂರ್ತಿ ಕೆತ್ತನೇ ಮಾಡುವುದೇ ಅಪರಾಧ ಎಂದಿದ್ದರು.