LATEST: ಚಂಡೀಘಡ: ಕೇಂದ್ರದ ಹೊಸ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ 350 ರೈತರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದನ್ನು ವಿರೋಧಿಸಿ ಹರ್ಯಾಣ ರೈತರು ಹಿರಿಯ ಪೊಲೀಸ್ ಅಧಿಕಾರಿಗಳ ನಿವಾಸಕ್ಕೆ ಮುತ್ತಿಗೆ ಹಾಲು ನಿರ್ಧರಿಸಿದ್ದ ಬೆನ್ನಲ್ಲೇ ಹಿಸಾರ್ ಜಿಲ್ಲೆಯಲ್ಲಿ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ. ಅಧಿಕೃತ ಮೂಲಗಳ ಪ್ರಕಾರ, ಕ್ಷಿಪ್ರ ಕಾರ್ಯಾಚರಣೆ ಪಡೆಯ 3 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ಕರೆಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಸಂಬಂಧ ಪೊಲೀಸ್ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆದಿದೆ. ಈ ಮಧ್ಯೆ, ಇಂದು ಸಾವಿರಾರು ರೈತರು ಹರಿಯಾಣದ ಕರ್ನಾಲ್ ನಿಂದ ದೆಹಲಿಗೆ ತೆರಳಿದ್ದಾರೆ. ಬುಧವಾರ ಕರಾಳ ದಿನ ಆಚರಿಸಲು ಈ ರೈತರು ಯೋಜಿಸಿದ್ದಾರೆ. ಮೂರು ಕೃಷಿ ಕಾನೂನುಗಳ ವಿರುದ್ಧ ಆರು ತಿಂಗಳ ಪ್ರತಿಭಟನೆಯನ್ನು ಗುರುತಿಸಿ, ರಾಜ್ಯವ್ಯಾಪಿ ಕೋವಿಡ್ ಲಾಕ್ಡೌನ್ ಮಧ್ಯೆ. ಪಂಜಾಬ್‌ನ ಸಂಗ್ರೂರ್‌ನ ಅನೇಕರು ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ ಎಂದು ವರದಿಗಳು ತಿಳಿಸಿವೆ. ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಕೃಷಿ ಕಾನೂನುಗಳ ವಿರುದ್ಧ ಸಾವಿರಾರು ರೈತರು ನವದೆಹಲಿಯ ಅಂಚಿನಲ್ಲಿ ಕ್ಯಾಂಪಿಂಗ್ ಮಾಡುತ್ತಿದ್ದಾರೆ ಮತ್ತು ಇನ್ನೂ ಅನೇಕರು ದೇಶದ ಹಲವಾರು ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.