LIFESTYLE: ಪವಿತ್ರಾ ಕೆಲವರಿಗೆ ಇಡ್ಲಿ, ದೋಸೆಗಿಂತ ರೈಸ್ ಬಾತ್ ಹೆಚ್ಚು ಇಷ್ಟವಾಗುತ್ತದೆ. ಇದು ಸುಲಭವಾಗಿ ಕೂಡ ಮಾಡಿ ಮುಗಿಸಬಹುದು. ಇಲ್ಲಿ ಕೊತ್ತಂಬರಿ ಸೊಪ್ಪು ಬಳಸಿ ಮಾಡುವ ರುಚಿಯಾದ ರೈಸ್ ಬಾತ್ ವಿಧಾನ ಇದೆ. ನೀವು ಕೂಡ ಮನೆಯಲ್ಲಿ ಮಾಡಿ ಸವಿದು ನೋಡಿ. ಬೇಕಾಗುವ ಸಾಮಗ್ರಿಗಳು: ¾ ಕಪ್-ಕೊತ್ತಂಬರಿಸೊಪ್ಪು, 2-ಹಸಿಮೆಣಸು, ½ ಇಂಚು-ಶುಂಠಿ, 2 ಎಸಳು-ಬೆಳ್ಳುಳ್ಳಿ, 2 ಟೇಬಲ್ ಸ್ಪೂನ್ ನಷ್ಟು-ನೀರು, ¾ ಕಪ್- ಬಾಸುಮತಿ ಅಕ್ಕಿ, 2 ಟೇಬಲ್ ಸ್ಪೂನ್ –ಎಣ್ಣೆ, 2-ಲವಂಗ, 2-ಏಲಕ್ಕಿ, ½ ಇಂಚು-ಚಕ್ಕೆ, 1-ಪಲಾವ್ ಎಲೆ, ¼ ಕಪ್-ಈರುಳ್ಳಿ ಉದ್ದಕ್ಕೆ ಹಚ್ಚಿಕೊಳ್ಳಿ, ½ ಕಪ್- ಆಲೂಗಡ್ಡೆ (ಹದವಾದ ಗಾತ್ರದಲ್ಲಿ ಕತ್ತರಿಸಿಕೊಳ್ಳಿ), ½ ಕಪ್- ಕಾಲಿಫ್ಲವರ್ (ಚಿಕ್ಕದಾಗಿ ಕತ್ತರಿಸಿಕೊಳ್ಳಿ), ¼ ಕಪ್- ಹಸಿ ಬಟಾಣಿ, ¼ ಕಪ್- ಕ್ಯಾರೆಟ್ (ಹಚ್ಚಿಟ್ಟುಕೊಳ್ಳಿ), ಉಪ್ಪು-ರುಚಿಗೆ ತಕ್ಕಷ್ಟು, 1 ¼ ಕಪ್-ನೀರು. ಮೊದಲಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು 20 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಟ್ಟುಕೊಂಡು ನಂತರ ನೀರನ್ನು ಸೋಸಿಟ್ಟುಕೊಳ್ಳಿ. ಒಂದು ಮಿಕ್ಸಿ ಜಾರಿಗೆ ಕೊತ್ತಂಬರಿಸೊಪ್ಪು, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ, 2 ಟೇಬಲ್ ಸ್ಪೂನ್ ನಷ್ಟು ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಗ್ಯಾಸ್ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಈರುಳ್ಳಿ ಹಾಕಿ ಬಾಡಿಸಿಕೊಳ್ಳಿ. ನಂತರ ಕತ್ತರಿಸಿಕೊಂಡ ತರಕಾರಿಗಳನ್ನೆಲ್ಲವನ್ನೂ ಹಾಕಿ 5 ನಿಮಿಷಗಳ ಕಾಲ ತುಸು ಬಾಡಿಸಿಕೊಳ್ಳಿ. ಹಾಗೇ ಇದಕ್ಕೆ ರುಬ್ಬಿಕೊಂಡ ಮಸಾಲೆ ಮಿಶ್ರಣವನ್ನು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿ. ನೀರು ಸೋಸಿಟ್ಟುಕೊಂಡ ಅಕ್ಕಿಯನ್ನು ಇದಕ್ಕೆ ಹಾಕಿ 1 ನಿಮಿಷಗಳ ಕಾಲ ತುಸು ಬಾಡಿಸಿಕೊಳ್ಳಿ. ನಂತರ 1 ¼ ಕಪ್ ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನೀರು ಕುದಿ ಬರುತ್ತಿದ್ದಂತೆ ಕುಕ್ಕರ್ ಮುಚ್ಚಳ ಮುಚ್ಚಿ 2 ವಿಷಲ್ ಕೂಗಿಸಿಕೊಂಡರೆ ರುಚಿಯಾದ ಕೊತ್ತಂಬರಿಸೊಪ್ಪಿನ ರೈಸ್ ಬಾತ್ ಸವಿಯಲು ಸಿದ್ಧ. ಇದನ್ನು ಮೊಸರು ಅಥವಾ ರಾಯಿತದೊಂದಿಗೆ ಸವಿಯಲು ಚೆನ್ನಾಗಿರುತ್ತದೆ. ತರಕಾರಿಗಳೆಲ್ಲವನ್ನೂ ಹಾಕಿ ತಯಾರಿಸಿರುವುದರಿಂದ ಆರೋಗ್ಯಕ್ಕೂ ಇದು ತುಂಬಾ ಒಳ್ಳೆಯದು.