LIFESTYLE:
ಪವಿತ್ರಾ ಶೆಟ್ಟಿ
ಮನೆಮಂದಿಗೆ ಗರ್ಭಿಣಿಯ ಕಾಳಜಿ ಎಷ್ಟು ಮಾಡಿದರೂ ಸಾಲದು. ಹುಟ್ಟುವ ಮಗು ಆಕರ್ಷಕವಾಗಿ ಸುಂದರವಾಗಿ ಇರಬೇಕೆಂದು ಕೇಸರಿ ಹಾಲನ್ನು ಕುಡಿಯಲು ಕೊಡುತ್ತಾರೆ. ಇದರ ಸೇವನೆಯಿಂದ ಮಗು ಬೆಳ್ಳಗಾಗುವುದು ನಿಜವೇ.
ಮಗು ಬೆಳ್ಳಗಾಗುವುದು ಅಥವಾ ಕಪ್ಪಾಗಿರುವುದು ತಂದೆ-ತಾಯಿಯ ಲಕ್ಷಣಗಳನ್ನು ಹೊಂದಿರುವುದು ನೈಸರ್ಗಿಕ ಕ್ರಿಯೆ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಅತಿಯಾದ ಕೇಸರಿ ಹಾಲಿನ ಸೇವನೆಯಿಂದ ಉಷ್ಣ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಕೇಸರಿ ಹಾಲಿನ ಬಳಕೆಗೆ ಇತಿ-ಮಿತಿ ಇರಲಿ. ದಿನಕ್ಕೆ ಒಂದು ಬಾರಿ ಎರಡರಿಂದ ಮೂರು ಎಸಳು ಬಳಸಿದ ಹಾಲಿನ ಸೇವನೆ ಸಾಕು.
ಮಗುವಿನ ಸೌಂದರ್ಯದ ಮೇಲೆ ಕೇಸರಿ ಹಾಲು ಯಾವುದೇ ಪ್ರಭಾವ ಬೀರುವುದಿಲ್ಲ ಎಂಬುದನ್ನು ಸಂಶೋಧನೆಗಳು ದೃಢಪಡಿಸಿವೆ. ಆದರೆ ಗರ್ಭಿಣಿಯರು ಹಾಲನ್ನು ಕುಡಿಯುವುದು ಬಹಳ ಮುಖ್ಯ. ನೇರವಾದ ಹಾಲಿನ ಸೇವನೆ ಇಷ್ಟವಾಗದಿದ್ದರೆ, ಅಂದರೆ ಹಾಲಿನ ವಾಸನೆಗೆ ವಾಕರಿಕೆ ಬಂದಂತಾಗುತ್ತಿದ್ದರೆ ಎರಡು ಎಸಳು ಕೇಸರಿ ಬೆರೆಸಿ ಕುಡಿಯಬಹುದು.
ಗರ್ಭಿಣಿಯರು ನೆನಪಿಡಬೇಕಾದ ಇನ್ನೊಂದು ಮುಖ್ಯ ಅಂಶ ಎಂದರೆ ನೀವು ಸೇವಿಸುವ ಯಾವುದೇ ಆಹಾರ ಮಗುವಿನ ಬಣ್ಣವನ್ನು ಬದಲಾಯಿಸುವುದಿಲ್ಲ. ಉತ್ತಮ ಪೌಷ್ಟಿಕಾಂಶ ಆಹಾರಗಳು ಮಗುವನ್ನು ಆರೋಗ್ಯಯುತಗೊಳಿಸಬಹುದೇ ಹೊರತು ತ್ವಚೆಯ ಬಣ್ಣದಲ್ಲಿ ಬದಲಾವಣೆ ಮಾಡುವುದಿಲ್ಲ.