LIFESTYLE:
ಈ ಅಜೋಲಾ ಇದೆಯಲ್ಲಾ, ಇದು ನೀರಿನ ಮೇಲೆ ಬೆಳೆಯುವ ಹಸಿರು ಪಾಚಿ. ಇದು ಹಸಿರೆಲೆ ಗೊಬ್ಬರವಾಗಿದ್ದು, ಪಶುಗಳಿಗೆ ಉತ್ತಮವಾದ ರೆಡಿಮೇಡ್ ಆಹಾರವಾಗಿದೆ. ಇದನ್ನು ಇತರ ಮೇವಿನ ಜೊತೆಯಲ್ಲಿಯೂ ನೀಡ್ಬಹುದು. ಇಲ್ಲಾಂದ್ರೆ ಪ್ರತ್ಯೇಕವಾಗಿಯೂ ನೀಡ್ಬಹುದು. ಇದನ್ನು ಕೋಳಿ, ಹಂದಿ, ಮೀನು, ಮೊಲಗಳಿಗೆ ಆಹಾರವಾಗಿ ಬಳಸಲಾಗುತ್ತೆ. ಇದನ್ನೇ ಮೂಲ ಆಹಾರವಾಗಿ ಕೊಡೋ ಬದಲು ವಿವಿಧ ಪಶು ಆಹಾರಗಳ ಜೊತೆಗೆ ನೀಡೋದ್ರಿಂದ ಜಾನುವಾರುಗಳ ಶಕ್ತಿ ಹೆಚ್ಚಾಗುತ್ತೆ.
ಅಜೋಲಾದ ಸ್ಪೆಷಾಲಿಟಿ ಏನು ಅಂದ್ರೆ, ಇದನ್ನು ಬೆಳೆಯಲು ಯಾವುದೇ ರಸಗೊಬ್ಬರದ ಅವಶ್ಯಕತೆ ಇಲ್ಲ, ಔಷಧಗಳೂ ಬೇಡ. ಉತ್ಪಾದನಾ ವೆಚ್ಚಾನೂ ಕಡಿಮೆ. ಸಾಮಾನ್ಯವಾಗಿ ರೈತ್ರು ತಮ್ಮ ಲಾಭದ ಶೇ 60ರಿಂದ 70ರಷ್ಟನ್ನು ಪಶು ಆಹಾರಕ್ಕಾಗಿ ಖರ್ಚು ಮಾಡ್ತಾರೆ. ಆದ್ರೆ ಅಜೋಲಾ ಬೆಳೆದ್ರೆ ಅಷ್ಟೊಂದು ಹಣ ಖರ್ಚು ಮಾಡೋ ಅಗತ್ಯವೇ ಬರೋದಿಲ್ಲ.
ಅಜೋಲಾದಿಂದ ರೈತರಿಗೆ ಖರ್ಚು ಕಮ್ಮಿ ಆಗೋದಷ್ಟೇ ಅಲ್ಲ; ದನಗಳೂ ಚೆನ್ನಾಗಿ ಆಗ್ತವೆ. ಅಜೋಲಾದಲ್ಲಿ ಶೇ 25ರಿಂದ 35ರಷ್ಟು ಪ್ರೊಟೀನ್, ಶೇ 10ರಿಂದ 15ರಷ್ಟು ಮಿನರಲ್ಸ್, ಶೇ 7 ರಿಂದ 10ರಷ್ಟು ಅಮೈನೋ ಆ್ಯಸಿಡ್ ಅಂಶಗಳಿವೆ. ಸುಲಭದಲ್ಲಿ ಜೀರ್ಣವಾಗೋ ಆಹಾರ ಇದು. ಹಸು-ಎಮ್ಮೆಗಳಿಗೆ ಒಂದೂವರೆಯಿಂದ ಎರಡು ಕೆಜಿಯಷ್ಟು ಅಜೋಲಾ ಕೊಡೋದ್ರಿಂದ ಶೇ 15ರಿಂದ 20ರಷ್ಟು ಹಾಲಿನ ಉತ್ಪಾದನೆ ಹೆಚ್ಚಾಗುತ್ತೆ. ಎಮ್ಮೆಗಳ ಹಾಲಿನಲ್ಲಿ ಕೊಬ್ಬಿನಾಂಶ 0.3ರಿಂದ 0.7ರಷ್ಟು ಹೆಚ್ಚಳವಾಗುತ್ತೆ. ಹಿಂಡಿ ಯಲ್ಲಿರುವಷ್ಟೇ ಪೌಷ್ಟಿಕಾಂಶ ಇದರಲ್ಲಿರೋದ್ರಿಂದ ಹಿಂಡಿಗೆ ಮಾಡೋ ಖರ್ಚನ್ನು ಉಳಿಸ್ಬಹುದು. ಇನ್ನು ಅಜೋಲಾದಿಂದ ಮಾಂಸದ ಕೋಳಿಯ ದೇಹದ ತೂಕ ಹೆಚ್ಚಾದ್ರೆ, ಮೊಟ್ಟೆ ಕೋಳಿಯಲ್ಲಿ ಮೊಟ್ಟೆ ಪ್ರಮಾಣ ಹೆಚ್ಚಾಗ್ತವೆ. ಮೀನಿನ ಕೊಳದಲ್ಲಿ ಬೆಳೆಯೋದ್ರಿಂದ ಮೀನಿನ ಉತ್ಪಾದನೆಯಲ್ಲಿ ಶೇ 30ರಷ್ಟು ಹೆಚ್ಚಳವಾಗುತ್ತೆ. ಭತ್ತದ ಹೊಲದಲ್ಲಿ ಬೆಳೆದ್ರೆ ಭತ್ತದ ಇಳುವರಿ ಶೇ 20ರಷ್ಟು ಹೆಚ್ಚುತ್ತೆ.
ಅಜೋಲಾ ಬೆಳೆಯೋದು ಕೂಡ ತುಂಬಾ ಸುಲಭ. ಸಿಲ್ಫಾಲಿನ್ ಶೀಟ್ ವಿಧಾನ ಹಾಗೂ ಸಿಮೆಂಟ್ ತೊಟ್ಟಿ ವಿಧಾನಗಳಲ್ಲಿ ಬೆಳೆಯಬಹುದು. ಎರಡರಲ್ಲೂ ಬೆಳೆಯೋ ವಿಧಾನ ಒಂದೇ.. ಆದ್ರೆ ಸಿಮೆಂಟ್ ತೊಟ್ಟಿ ವಿಧಾನ ಸ್ವಲ್ಪ ಕಾಸ್ಟ್ಲಿ. ಸಿಲ್ಫಾಲಿನ್ ಶೀಟ್ ವಿಧಾನದಲ್ಲಾದ್ರೆ ಸೂರ್ಯನ ಕಿರಣಗಳು ನೇರವಾಗಿ ಬೀಳದಂತಾ ಸ್ಥಳದಲ್ಲಿ ಅಂದ್ರೆ ತೋಟ, ಮನೆಯಂಗಳ, ಮನೆಯ ಹಿತ್ತಿಲಿನಲ್ಲಿ ಅಜೋಲಾವನ್ನು ಬೆಳೀಬಹುದು.
ಮೊದ್ಲು ಭೂಮಿಯನ್ನು ಸ್ವಚ್ಛ ಮಾಡಿ ಸಮತಟ್ಟಾಗಿ ಮಾಡಿಕೊಳ್ಳಬೇಕು. 2.25 ಮೀಟರ್ ಉದ್ದ ಹಾಗೂ 1.5 ಮೀ ಅಗಲ ಅಳತೆ ಇರೋ ಗುಂಡಿ ತೆಗೀಬೇಕು. ನಂತ್ರ ಸುಮಾರು ಒಂದು ಅಂಗುಲ ಮರಳು ಹಾಕಿ ಇದರ ಮೇಲೆ 120 ರಿಂದ 150 ಜಿಸಿಎಂ ಸಿಲ್ಫಾಲಿನ್ ಶೀಟನ್ನು ತೊಟ್ಟಿಯ ಮೇಲ್ಭಾಗದ ಅಂಚಿನವರೆಗೆ ಬರುವಂತೆ ಹರಡ್ಬೇಕು. ನಂತ್ರ ಸುಮಾರು 30 ರಿಂದ 35 ಕೆ.ಜಿಯಷ್ಟು ಫಲವತ್ತಾದ ಮೆತ್ತನೆ ಮಣ್ಣನ್ನು ಸಮಾನವಾಗಿ ಅದರ ಮೇಲೆ ಹರಡ್ಬೇಕು. 5 ದಿನದಷ್ಟು ಹಳೇದಾದ 3 ರಿಂದ 5ಕೆ.ಜಿ ಸಗಣಿಯನ್ನು 40 ಗ್ರಾಂನಷ್ಟು ಖನಿಜ ಮಿಶ್ರಣದಲ್ಲಿ ಸೇರಿಸಿ, ಇದನ್ನು ನೀರಿನಲ್ಲಿ ಕಲಸಿ ಮಣ್ಣಿನಲ್ಲಿ ಮಿಶ್ರಣ ಮಾಡ್ಬೇಕು. ನಂತ್ರ ಸುಮಾರು 7 ರಿಂದ 10 ಸೆಂ.ಮಿ ಎತ್ತರದವರೆಗೆ ನೀರು ಹಾಯಿಸಿ ಅದಕ್ಕೆ ಒಂದು ಕೆಜಿಯಷ್ಟು ಅಜೋಲಾ ಕಲ್ಚರ್ ಅಥವಾ ಹೆಪ್ಪನ್ನು ಮೇಲುಗಡೆ ಸಮಾನವಾಗಿ ಬೀಳುವಂತೆ ಹಾಕ್ಬೇಕು. ಹೀಗೆ ಹರಡಿದ ಅಜೋಲಾ ಮೇಲೆ ನೀರನ್ನು ಚಿಮುಕಿಸಸ್ಬೇಕು. ಹೀಗೆ ಮಾಡಿದ್ರೆ ಅಜೋಲಾ ತುಂಬಾ ಬೇಗ ಬೆಳೆಯುತ್ತೆ.
ಅಜೋಲಾ ಬೆಳೆಯುವಾಗ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಇದನ್ನ ಬೆಳೆಯೋ ಗುಂಡಿಯ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿಗೆ ಇರಬಾರ್ದು. ಸೂರ್ಯನ ಕಿರಣ ನೇರವಾಗಿ ಬೀಳೋ ಜಾಗದಲ್ಲಾಗಲಿ ಅಥವಾ ತೀವ್ರವಾಗಿ ನೆರಳು ಇರೋ ಜಾಗದಲ್ಲಾಗಲಿ ಇದನ್ನು ಬೆಳೀಬಾರ್ದು. ಉಷ್ಣಾಂಶ 35 ಡಿಗ್ರಿಗಿಂತ ಹೆಚ್ಚಿಗೆ ಇದ್ರೆ ಸೂರ್ಯನ ಕಿರಣ ನೇರವಾಗಿ ಬೀಳದಂತೆ ನೋಡಿಕೊಳ್ಬೇಕು. ಇದನ್ನು ಒತ್ತೊತ್ತಾಗಿ ಬೆಳೆಯೋದಕ್ಕೆ ಬಿಡಬಾರ್ದು. ದಿನ ಬಿಟ್ಟು ದಿನ ಕಟಾವು ಮಾಡ್ಬೇಕು. ಎರಡು ತಿಂಗಳಿಗೊಮ್ಮೆ 5 ಕೆಜಿಯಷ್ಟು ಹೊಸ ಮಣ್ಣು ಹಾಕಿ ಅಷ್ಟೇ ಪ್ರಮಾಣದ ಹಳೆಯ ಮಣ್ಣನ್ನು ತೆಗೀಬೇಕು. 10 ದಿನಕ್ಕೊಮ್ಮೆ ಕಾಲು ಭಾಗದಷ್ಟು ನೀರು ತೆಗೆದು, ಹೊಸ ನೀರು ಹಾಕ್ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಯಾವುದೇ ಕಾರಣಕ್ಕೂ ಗುಂಡಿಯೊಳಗೆ ಇಳೀಬಾರ್ದು.
ಏಳು ದಿನಗಳ ನಂತ್ರ ಮೊದಲ ಇಳುವರಿ ಪಡೀಬಹುದು. ನಂತ್ರ ಪ್ರತಿ 2 ದಿನಗಳಿಗೆ ಒಮ್ಮೆ ಅಜೋಲಾವನ್ನು ಕಟಾವು ಮಾಡಬಹ್ದು. ಪ್ರತಿ 10 ದಿನಕ್ಕೊಮ್ಮೆ ಒಂದು ಕೆಜಿ ಸಗಣಿಯನ್ನು 20 ಗ್ರಾಂ ಮಿನರಲ್ ಮಿಕ್ಸರ್ ಜೊತೆ 5 ಲೀಟರ್‌ನಷ್ಟು ನೀರಿನಲ್ಲಿ ಕಲಸಿ ಅಜೋಲಾದೊಂದಿಗೆ ಸೇರಿಸ್ತಿರಬೇಕು. ಗುಂಡಿಯಿಂದ ತೆಗೆದ ಅಜೋಲಾವನ್ನು ಬಕೆಟ್‌ನಲ್ಲಿ ಹಾಕಿ 2 ರಿಂದ 3 ಬಾರಿ ತೊಳೆದು ಆಮೇಲೆ ಅದನ್ನು ದನಗಳಿಗೆ ಕೊಡ್ಬೇಕು. ಮೊದ್ಲು ಪಶುಗಳಿಗೆ ಅವು ದಿನನಿತ್ಯ ಸೇವಿಸೋ ಆಹಾರದ ಜೊತೆ ಸೇರಿಸಿ ಕೊಡ್ಬೇಕು. ಅವಕ್ಕೆ ಒಂದಷ್ಟು ರೂಢಿಯಾದ ನಂತ್ರ ನೇರವಾಗಿಯೇ ಕೊಡಬಹ್ದು.
ಅಜೋಲಾ ಸಸ್ಯವನ್ನು ಹೇಗೆ ಬೆಳೀಬಹುದು ಅನ್ನೋದು ಗೊತ್ತಾಯ್ತಲ್ಲಾ, ಮತ್ತೊಂದು ವಿಶೇಷ ಕೃಷಿ ಲೇಖನ ನಾಳಿನ ಸಂಚಿಕೆಯಲ್ಲಿ ನೋಡೋಣ
-ರಮೇಶ್, ಹಿರಿಯ ಕಾರ್ಯಕ್ರಮ ನಿರ್ಮಾಪಕ, BMG 24x7 ಲೈವ್ ಕನ್ನಡ