LIFESTYLE:
ಭಾರತಕ್ಕೆ ಬರೋ ವಿದೇಶಿಯರು ನಮ್ಮ ಹಳ್ಳಿಗಳಿಗೆ ಬಂದಾಗ ಒಂದು ಅಂಶವನ್ನು ವಿಶೇಷವಾಗಿ ಗಮನಿಸ್ತಾರೆ. ಅದೇನು ಅಂದ್ರೆ, ಹಸುವಿನ ಕೆಚ್ಚಲಿಗೆ ಕೈಹಾಕಿ ಹಾಲು ಕರೆಯೋದು. ಹಾಗಾದ್ರೆ ಅವರ ದೇಶದಲ್ಲಿ ಹೇಗೆ ಹಾಲು ಕರೀತಾರೆ ಅಂತೀರಾ. ಅವರು ಹಾಲು ಕರೆಯೋದು ಯಂತ್ರದ ಮೂಲಕ. ಈಗೀಗ ಭಾರತದಲ್ಲೂ ಕೂಡ ಯಂತ್ರದ ಮೂಲಕ ಹಾಲು ಕರೆಯೋ ಪದ್ಧತಿ ಜನಪ್ರಿಯವಾಗ್ತಿದೆ.
ನಿಮ್ಮ ಬಳಿ ಹತ್ತಿಪ್ಪತ್ತು ಹಸುಗಳಿವೆ ಅಂತಾದರೆ ಇಷ್ಟೊಂದು ಹಸುಗಳನ್ನು ಮೇಂಟೇನ್ ಮಾಡೋದು, ಇವಕ್ಕೆಲ್ಲಾ ಮೇವು ಹೊಂದಿಸೋದು, ಹಾಲು ಕರೆಯೋದು ಇವೆಲ್ಲಾ ಸುಲಭದ ಕೆಲಸಗಳೇನಲ್ಲ. ಹಾಗಾಗಿ ಇಂತ ಕೆಲಸಗಳಿಗೆಲ್ಲಾ ಹಲವು ರೀತಿಯ ಯಂತ್ರಗಳನ್ನು ತಂದಿಟ್ಟುಕೊಳ್ಳೋದು ಒಳ್ಳೆಯದು. ಅದೇ ರೀತಿ ಹಾಲು ಕರೆಯೋದಕ್ಕೆ ಇರೋ ಯಂತ್ರವೇ ಮಿಲ್ಕಿಂಗ್ ಮೆಷಿನ್.
ಹಸುಗಳಿಂದ ಮನುಷ್ಯರೇ ಹಾಲು ಕರೀಬೇಕು ಅಂದ್ರೆ ಅದಕ್ಕೆ ಹೆಚ್ಚೆಚ್ಚು ಜನ ಬೇಕು. ಜೊತೆಗೆ ಹೆಚ್ಚು ದೈಹಿಕ ಶ್ರಮವನ್ನೂ ಹಾಕ್ಬೇಕು. ಅದೇ ಯಂತ್ರ ಬಳಸಿದ್ರೆ ಈ ಎರಡೂ ಉಳಿತಾಯವಾಗ್ತವೆ. ಕೆಚ್ಚಲಿನಿಂದ ಹಾಲು ಕರೆಯೋ ಯಂತ್ರವನ್ನು ಮಿಲ್ಕಿಂಗ್ ಮಿಷಿನ್ ಅಂತಾ ಕರೀತಾರೆ. ಈ ಯಂತ್ರವನ್ನು ಮೊದಲ ಬಾರಿಗೆ ಅಮೆರಿಕದಲ್ಲಿ 1907ರ ಹೊತ್ತಿಗೆ ಬಳಸಲಾಗ್ತಿತ್ತು.
ಮಿಲ್ಕಿಂಗ್ ಮಿಷಿನ್ನ ಬಳಕೆ ತುಂಬಾ ಸಿಂಪಲ್. ಮೊದ್ಲು ನಾಲ್ಕೂ ಕೆಚ್ಚಲಿಗೆ ಸ್ಟೀಲ್ ಅಥವಾ ಪ್ಲಾಸ್ಟಿಕ್ನಿಂದ ಮಾಡಲಾದ ಮಿಲ್ಕ್ ಟ್ಯೂಬ್ಗಳನ್ನು ಅಳವಡಿಸ್ಬೇಕು. ಇದರ ಮತ್ತೊಂದು ತುದಿಯಲ್ಲಿ ಪಲ್ಸೇಟರ್ ಯಂತ್ರ ಇರುತ್ತೆ. ಇದನ್ನು ಚಾಲೂ ಮಾಡ್ತಿದ್ದಂತೆ ಗಾಳಿಯ ಒತ್ತಡದಿಂದಾಗಿ ಕೆಚ್ಚಲಿನಿಂದ ಹಾಲು ಮಿಲ್ಕ್ ಟ್ಯೂಬ್ನಲ್ಲಿ ಇಳಿಯಲು ಆರಂಭಿಸುತ್ತದೆ. ಈ ಹಾಲನ್ನು ನೇರವಾಗಿ ಕ್ಯಾನ್ಗಳಲ್ಲಿ ಸಂಗ್ರಹಿಸಲಾಗುತ್ತೆ. ಕೆಚ್ಚಲಿನಲ್ಲಿ ಹಾಲು ಕಡಿಮೆ ಆಗ್ತಿದ್ದಂತೆ ಪಲ್ಸೇಟರ್ ಯಂತ್ರದಲ್ಲಿ ಇದು ದಾಖಲಾಗುತ್ತೆ. ಆಗ ಕೆಚ್ಚಲಿನಿಂದ ಮಿಲ್ಕ್ ಟ್ಯೂಬ್ಗಳನ್ನು ತೆಗೆಯೋದಕ್ಕೆ ಸಿಗ್ನಲ್ ನೀಡ್ತದೆ.
ಇವತ್ತು ಹಾಲು ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿರೋ ದೇಶಗಳಾದ ಅಮೆರಿಕ, ಚೀನಾ, ರಷ್ಯಾ, ಡೆನ್ಮಾರ್ಕ್, ಬ್ರೆಜಿಲ್ ಮುಂತಾದ ದೇಶಗಳಲ್ಲಿ ಬಹುತೇಕ ಎಲ್ರೂ ಈ ಮಿಲ್ಕಿಂಗ್ ಮೆಷಿನ್ ಬಳಸಿಯೇ ಹಾಲು ಕರೆಯೋದು. ಆದ್ರೆ, ಭಾರತದಲ್ಲಿ ಇನ್ನೂ ಕೆಚ್ಚಲಿಗೆ ಕೈಹಾಕಿ ಹಾಲು ಕರೆಯೋ ಪದ್ಧತಿಯನ್ನೇ ಹೆಚ್ಚು ಬಳಸಲಾಗ್ತಿದೆ.
ಮಿಲ್ಕಿಂಗ್ ಮಿಷಿನ್ ಬಳಸೋದ್ರಿಂದ ಅನೇಕ ಉಪಯೋಗಗಳಿವೆ. ಇದ್ರಿಂದ ಸ್ವಚ್ಛತೆ ಕಾಪಾಡಿಕೊಳ್ಳೋದು ಮಾತ್ರವಲ್ಲ. ಹೆಚ್ಚು ಹಾಲೂ ಸಹ ಉತ್ಪಾದನೆಯಾಗುತ್ತೆ. ಜೊತೆಗೆ ದೈಹಿಕ ಶ್ರಮ ಕಡಿಮೆಯಾಗುವುದಲ್ಲದೇ ಹಸುಗಳಿಗೆ ಯಾವುದೇ ಸೋಂಕು ಕೂಡ ತಗುಲದಂತೆ ಮುನ್ನೆಚ್ಚರಿಕೆ ವಹಿಸಬಹುದಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕಡಿಮೆ ಅವಧಿಯಲ್ಲಿ ಹೆಚ್ಚು ಹಾಲನ್ನು ಕರೆಯಬಹುದು.
ಇದನ್ನೆಲ್ಲಾ ನೋಡಿದ್ರೆ ಒಂದಂತೂ ಸ್ಪಷ್ಟವಾಗುತ್ತೆ. ನಮ್ಮ ರೈತರ ಕಷ್ಟಗಳಿಗೆ ಆತ್ಮಹತ್ಯೆ ಅನ್ನೋದು ಪರಿಹಾರವಲ್ಲ. ಹಾಗೇನೇ ನಮ್ಮ ರೈತರು ಒಂದಲ್ಲಾ ಒಂದು ದಾರಿಯಿಂದ ಜಮೀನು ನಂಬಿ ಬದುಕೋದಕ್ಕೆ ಖಂಡಿತ ಸಾಧ್ಯವಿದೆ. ರೈತರಿಗಾಗಿ ಇಂಥ ಭರವಸೆಯ ಬೆಳಕು ಬೀರೋ ಮತ್ತಷ್ಟು ಮಾಹಿತಿಗಳು ಇಲ್ಲಿ ಲಭ್ಯವಾಗಲಿವೆ. ಹೀಗಾಗಿ 24x7 ಲೈವ್ ಕನ್ನಡ ವೆಬ್ ಸೈಟ್ ವೀಕ್ಷಿಸುತ್ತಿರಿ.
-ರಮೇಶ್, ಹಿರಿಯ ಕಾರ್ಯಕ್ರಮ ನಿರ್ಮಾಪಕ, BMG 24X7 ಲೈವ್ ಕನ್ನಡ