NEWS: ನವದೆಹಲಿ: ಯೋಗ ಗುರು ಬಾಬಾ ರಾಮದೇವ್ ವಿರುದ್ಧ ಕೇಂದ್ರವು ಕಠಿಣ ಕ್ರಮ ಕೈಗೊಳ್ಳಬೇಕೆಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಒತ್ತಾಯಿಸಿದೆ. ತಪ್ಪು ಟೀಕೆಗಳನ್ನು ಮಾಡುವ ಮೂಲಕ ಮತ್ತು ಆಧುನಿಕ ವೈದ್ಯಕೀಯವನ್ನು ಸ್ಟುಪಿಡ್ ಸೈನ್ಸ್ ಎಂದು ವಿವರಿಸುವ ಮೂಲಕ ಜನರನ್ನು ದಾರಿತಪ್ಪಿಸಿರುವುದಾಗಿ ಅದು ಆಕ್ಷೇಪಿಸಿದೆ. ಆದರೆ ಈ ಹೇಳಿಕೆಗಳನ್ನು ಹರಿದ್ವಾರ ಮೂಲದ ಪತಂಜಲಿ ಯೋಗಪೀತ್ ಟ್ರಸ್ಟ್ ನಿರಾಕರಿಸಿದೆ. ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಮತ್ತು ಸಫ್ದರ್ಜಂಗ್ ಆಸ್ಪತ್ರೆಯ ಸ್ಥಾನಿಕ ವೈದ್ಯರ ಸಂಘಗಳು ರಾಮದೇವ್ ಹೇಳಿಕೆಯನ್ನು ಖಂಡಿಸಿವೆ. ಮಾತ್ರವಲ್ಲ, ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿವೆ. ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿರುವ ವಿಡಿಯೋವೊಂದನ್ನು ಉಲ್ಲೇಖಿಸಿ, ರಾಮದೇವ್ ಅಲೋಪತಿ ಒಂದು ವಿವೇಕಹೀನ ವಿಜ್ಞಾನ ಎಂದಿರುವುದನ್ದುನು ಮತ್ತು ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಅನುಮೋದಿಸಿದ ರೆಮೆಡೆಸಿವಿರ್, ಫೆವಿಫ್ಲೂ ಮತ್ತು ಇತರ ಔಷಧಿಗಳು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಫಲವಾಗಿವೆ ಎಂದು ಹೇಳಿರುವುದನ್ನು ವೈದ್ಯಕೀಯ ಮಂಡಳಿ ಆಕ್ಷೇಪಿಸಿದೆ. ರಾಮ್‌ದೇವ್ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಬೇಕು, ಏಕೆಂದರೆ ಅವರ ಹೇಳಿಕೆಗಳು ದೇಶದ ಜನರ ಪಾಲಿಗೆ ಅಪಾಯಕಾರಿ ಎಂದು ಐಎಂಎ ಹೇಳಿದೆ. ಲಿಖಿತ ಕ್ಷಮೆ ಕೇಳುವಂತೆ ಮತ್ತು ಹೇಳಿಕೆಗಳನ್ನು ಹಿಂಪಡೆಯುವಂತೆ ಸೂಚಿಸಿ ರಾಮದೇವ್ ಅವರಿಗೆ ಕಾನೂನು ನೋಟಿಸ್ ಕಳುಹಿಸಲಾಗಿದೆ ಎಂದು ಐಎಂಎ ತಿಳಿಸಿದೆ.