NEWS:
ಸ್ನೇಹಿತ್ರೆ, ಇವತ್ತು ಹಣಕ್ಕಿರೋ ಪ್ರಾಮುಖ್ಯತೆ ಮನುಷ್ಯನಿಗಿಲ್ಲ..ಹಣ ಇಲ್ಲದವನು ಹೆಣಕ್ಕೆ ಸಮ ಅನ್ನುವಂತಾಗಿದೆ ಜಗತ್ತು. ಇಲ್ಲಿ ಬದುಕೋಕೆ ಪ್ರತಿಯೊಂದಕ್ಕೂ ಹಣ ಬೇಕು. ಇಂತಹ ಹಣವನ್ನ ಸಂಪಾದಿಸೋದು ಒಂದು ತರ ಕಷ್ಟವಾದ್ರೆ, ಅದನ್ನ ಕೂಡಿಡೋದು ಮತ್ತೊಂದು ರೀತಿಯ ಕಷ್ಟ. ಹೌದು.. ಇವತ್ತು ಹಣವನ್ನ ಸಂಪಾದಿಸೋದು ಕೂಡ ಕಷ್ಟವೇ…ಸಂಪಾದಿಸಿದ ಹಣವನ್ನ ಕೂಡಿಡೋದು ಮತ್ತೂ ಕಷ್ಟವೇ…ಅಂದಾಗೆ ನೀವು ಸಂಪಾದಿಸಿದ ಹಣವನ್ನ ನಿಯಮಿತವಾಗಿ ಖರ್ಚು ಮಾಡೋದು ಹೇಗೆ..? ಗೊತ್ತಿಲ್ಲ. ಹಣವಿದ್ದಾಗ ಮನಸೋ ಇಚ್ಚೆ ಖರ್ಚು ಮಾಡಿ ಇಲ್ಲದಿದ್ದಾಗ ಅವರಿವರನ್ನು ಬೇಡಾಡುವ ಮಂದಿಯೇ ಜಾಸ್ತಿ.. ಹೇರಳವಾಗಿ ಹಣ ಸಂಪಾದನೆ ಮಾಡ್ಬೇಕು ಅಂದ್ರೆ ಏನ್ ಮಾಡ್ಬೇಕು…ಮಾಡಿದ ಹಣವನ್ನ ಕೂಡಿಡಬೇಕು ಅಂದ್ರೆ ಏನ್ ಮಾಡ್ಬೇಕು ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.
ವಾಸ್ತು ಶಾಸ್ತ್ರ ಇವತ್ತು ಅಗಾಧವಾದ ಪ್ರಚಾರವನ್ನ ಪಡೆದಿರೋದಷ್ಟೆ ಅಲ್ಲ, ಗ್ರಾಮೀಣ ಜನತೆಯಿಂದ ಹಿಡಿದು ಸಿಟಿ ಜನರ ತನಕ ಇವತ್ತು ವಾಸ್ತುವನ್ನ ನಂಬಿದ್ದಾರೆ. ಅದೇ ಪ್ರಕಾರ ಮನೆಗಳನ್ನ ಕಟ್ಟಿಸೋದು, ಕೆಲಸ ಮಾಡುವ ಸ್ಥಳದಲ್ಲಿರಬಹುದು, ಪ್ರತಿಯೊಂದಕ್ಕೂ ವಾಸ್ತು ನಂಬುತ್ತಿದ್ದಾರೆ. ಇನ್ನು ದಿಕ್ಕುಗಳು ಮತ್ತು ವಾಸ್ತುವಿಗೆ ಅವಿನಾಭಾವ ನಂಟಿದೆ. ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಈ ನಾಲ್ಕು ದಿಕ್ಕುಗಳ ಮೇಲೆಯೇ ವಾಸ್ತು ಶಾಸ್ತ್ರ ರಚನೆಯಾಗಿದೆ ಅಂದ್ರೆ ತಪ್ಪಾಗಲಿಕ್ಕಿಲ್ಲ..
ಅಂದಾಗೆ ವಾಸ್ತು ಶಾಸ್ತ್ರದಲ್ಲಿ ಅನೇಕ ವಿಧಗಳಿವೆ. ಒಂದೊಂದು ವಾಸ್ತುವಿಗೂ ಒಂದೊಂದು ರೀತಿಯ ಶುಭ ಮತ್ತು ಅಶುಭ ಸೂಚಕಗಳಿವೆ. ನಿಮ್ಮ ಮನೆಯ ವಾಸ್ತು ಹೇಗಿರಬೇಕು, ಅಡುಗೆ ಮನೆ ಎಲ್ಲಿರಬೇಕು, ಬೆಡ್ ರೂಮಿನ ಮಂಚ ಯಾವ ದಿಕ್ಕಿಗೆ ಇರಬೇಕು ಎನ್ನುವುದರಿಂದ ಹಿಡಿದು ಮನೆಯಂಗಳದಲ್ಲಿ ನಾವು ಇಡೋ ಹೂ ಕುಂಡಗಳು, ಬೆಳೆಯುವ ಸಸ್ಯಗಳ ಮೇಲೂ ವಾಸ್ತುವಿನ ಪರಿಣಾಮವಿರುತ್ತದೆ ಅಂತಾರೆ ವಾಸ್ತು ಶಾಸ್ತ್ರಜ್ಞರು.
ಕ್ರಾಸುಲ್ಲಾ ಮತ್ತು ಮನಿ ಪ್ಲಾಂಟ್ ಈ ಎರಡು ಗಿಡಗಳ ಬಗ್ಗೆ ಜನರಲ್ಲಿ ತುಂಬಾನೆ ನಂಬಿಕೆ ಇದೆ. ಈ ಗಿಡಗಳನ್ನ ಮನೆಯಲ್ಲಿ ಬೆಳೆಸಿದರೆ, ಆ ಗಿಡಗಳ ಬಾಡದಂತೆ ಸೊಗಸಾಗಿ ಹಬ್ಬಿದರೆ, ಮನೆಯಲ್ಲಿ ಧನಲಕ್ಷ್ಮಿ ಅವಾಹನೆಯಾಗುತ್ತಾಳೆ ಅನ್ನೋ ನಂಬಿಕೆ ಇದೀಗ ಅಗಾಧವಾಗಿ ಹರಡಿಕೊಂಡಿದೆ. ಹೌದು, ಮನೆಯಂಗಳದಲ್ಲಿ ಮನಿ ಪ್ಲಾಂಟ್ ಗಿಡ ಬೆಳೆಸಿದರೆ, ಶ್ರೀಮಂತಿಕೆ ಬರುತ್ತೆ ಅನ್ನೋ ನಂಬಿಕೆ ವ್ಯಾಪಕವಾಗಿದೆ. ಇದು ನಿಜವಾ..?
ಕೈತುಂಬ ಹಣವಿರಬೇಕು, ಮನೆಯಲ್ಲಿ ಸಿರಿ ಸಮೃದ್ದಿ ಮೇಳೈಸಬೇಕು, ಊರು ಕೇರಿ ಸುತ್ತಬೇಕು, ಈ ರೀತಿಯ ಆಸೆಗಳು ಪ್ರತಿಯೊಬ್ಬರಲ್ಲೂ ಇರುತ್ತದೆ. ಆದ್ರೆ, ದುಡಿಯುವ ಸಂಬಳ ತಿಂಗಳ ಖರ್ಚಿಗೆ ಆಗೋದಿಲ್ಲ, ಅನ್ನೋ ಕೊರಗು ಕೂಡ ಅನೇಕರದ್ದು. ಕಠಿಣ ಪರಿಶ್ರಮ ಹಾಕಿದ್ರೂ ಹಣ ಕೂಡಿಡೋಕೆ ಸಾಧ್ಯವಾಗೋದಿಲ್ಲ. ಹೀಗಾಗಿ ವಾಸ್ತುವಿನಲ್ಲಿ ಕೆಲ ಸಸ್ಯಗಳನ್ನ ತಿಳಿಸಲಾಗುತ್ತದೆ. ಅದು ಹಣವನ್ನ ಆಯಾಸ್ಕಾಂತದಂತೆ ಆಕರ್ಷಿಸುತ್ತದೆ. ಮನೆಯಲ್ಲಿ ಈ ಗಿಡಗಳಿದ್ದರೆ ಅದೃಷ್ಟ ನಿಮ್ಮದಾಗಬಹುದು ಎನ್ನಲಾಗುತ್ತೆ.
ಕ್ರಾಸ್ಸುಲಾ ಮತ್ತು ಮನಿಪ್ಲಾಂಟ್. ಕ್ರಾಸ್ಸುಲಾ ಸಸ್ಯದ ಎಲೆಗಳು ದಪ್ಪ ಮತ್ತು ಹಸಿರು ಮತ್ತು ಹಳದಿ ಬಣ್ಣದಲ್ಲಿರುತ್ತದೆ. ಈ ಗಿಡವನ್ನ ಮನೆಯಲ್ಲಿ ನೆಟ್ಟರೆ ತುಂಬಾ ಶುಭ. ಇದು ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಮನಿ ಪ್ಲಾಂಟ್ ಅನ್ನು ನೆಡುವುದನ್ನು ಸಹ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಬಹುತೇಕ ಮನೆಗಳಲ್ಲಿ ಮನಿ ಪ್ಲಾಂಟ್ ಅಳವಡಿಸಲಾಗಿದೆಯಾದರೂ ಅದರಲ್ಲಿ ಮಾಡಿದ ಕೆಲವು ತಪ್ಪುಗಳಿಂದ ಪೂರ್ಣ ಪ್ರಯೋಜನ ಸಿಗೋದಿಲ್ಲ.
ಹೌದು ಮನಿ ಪ್ಲಾಂಟ್ ಅನ್ನು ಮನೆಯ ಈಶಾನ್ಯ ಅಥವಾ ಉತ್ತರ ದಿಕ್ಕಿನಲ್ಲಿ ಇಡಬೇಕು. ಮತ್ತೊಂದೆಡೆ ವ್ಯಾಪಾರ ಹೆಚ್ಚಿಸಲು ಅಂಗಡಿಯ ದಕ್ಷಿಣ ದಿಕ್ಕಿನಲ್ಲಿ ಮಡಿಕೆಯಲ್ಲಿ ಮಣ್ಣು ತುಂಬಿ ಮನಿ ಪ್ಲಾಂಟ್ ನೆಡಬೇಕು. ಗಾಜಿನ ಬಾಟಲಿಯಲ್ಲಿ ಮನಿಪ್ಲಾಂಟನ್ನು ಎಂದಿಗೂ ಇಡಬೇಡಿ. ಮನಿ ಪ್ಲಾಂಟ್ಗೆ ಹಾಲಿನೊಂದಿಗೆ ಬೆರೆಸಿದ ನೀರನ್ನು ಸೇರಿಸಿದರೆ, ಆರ್ಥಿಕ ಸ್ಥಿತಿ ತುಂಬ ವೇಗವಾಗಿ ಸುಧಾರಿಸುತ್ತದೆ ಎನ್ನಲಾಗುತ್ತದೆ.
ಇನ್ನು ಕ್ರಾಸ್ಸುಲಾ ಕೂಡ ಅಷ್ಟೆ, ತೋಚಿದ ದಿಕ್ಕಿನಲ್ಲಿ ಅವುಗಳನ್ನ ಇಟ್ಟರೆ, ಶೂನ್ಯ ರಿಸಲ್ಟ್ ಕಟ್ಟಿಟ್ಟಬುತ್ತಿ. ಹೀಗಾಗಿ ಇದು ಕೂಡ ನಿಮ್ಮ ಮನೆಯ ಈಶಾನ್ಯ ಇಲ್ಲವೇ ಉತ್ತರ ದಿಕ್ಕಿನಲ್ಲಿ ಇರಲಿ. ಅಂಗಡಿಯಲ್ಲೂ ಕೂಡ ನೀವು ದಕ್ಷಿಣ ದಿಕ್ಕಿಗೆ ಸಸಿ ಹಾಕಿಕೊಳ್ಳಬಹುದು. ಈ ಎರಡು ಗಿಡಗಳು ವಾಸ್ತು ಶಾಸ್ತ್ರದಲ್ಲಿ ಹಣ ಗಳಿಕೆಗೆ ಪ್ರಮುಖ ಪಾತ್ರ ವಹಿಸುತ್ತವೆ.
-ರಮೇಶ್, 24X7 ಲೈವ್ ಕನ್ನಡ