OPINION:
ಅವಿಶ್ವಾಸ ಮತಕ್ಕೆ ಮುನ್ನ ಆಡಳಿತ ಒಕ್ಕೂಟವನ್ನು ತೊರೆಯುವ ಕೆಲವು ಮಿತ್ರಪಕ್ಷಗಳೊಂದಿಗೆ ಇಮ್ರಾನ್ಖಾನ್ ಹೆಚ್ಚುತ್ತಿರುವ ಒತ್ತಡವನ್ನು ಎದುರಿಸುತ್ತಿದ್ದರೂ, ಪಾಕಿಸ್ತಾನದ ಪ್ರಧಾನಿ ರಾಜೀನಾಮೆ ನೀಡುವುದಿಲ್ಲ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಫವಾದ್ ಚೌಧರಿ ಮಂಗಳವಾರ ಹೇಳಿದ್ದಾರೆ.
“ಪ್ರಧಾನಿ ಇಮ್ರಾನ್ಖಾನ್ ಕೊನೆಯ ಎಸೆತದವರೆಗೂ ಹೋರಾಡುವ ಆಟಗಾರ, ಅವರು ರಾಜೀನಾಮೆ ನೀಡುವುದಿಲ್ಲ” ಎಂದು ಫವಾದ್ ಚೌಧುರಿ ಉರ್ದುವಿನಲ್ಲಿ ಟ್ವೀಟ್ ಮಾಡಿದ್ದಾರೆ.
ಇಮ್ರಾನ್ಖಾನ್ ಅನಿಶ್ಚಿತ ಸ್ಥಿತಿಯಲ್ಲಿದ್ದಾರೆ. ಎಪ್ರಿಲ್ 3ರಂದು ಅವಿಶ್ವಾಸ ನಿರ್ಣಯದ ಮೇಲಿನ ಮತದಾನವನ್ನು ನಿರೀಕ್ಷಿಸಲಾಗಿದೆ. ಆಡಳಿತ ನಡೆಸುತ್ತಿರುವ ಇಮ್ರಾನ್ ಪಕ್ಷ PTI ಪಕ್ಷಕ್ಕೆ ಮುಖ್ಯವಾಗಿ ಬೆಂಬಲ ನೀಡಿದ್ದ MQM-P ಪಕ್ಷ ಬೆಂಬಲ ಹಿಂದೆಗೆದುಕೊಂಡು ವಿಪಕ್ಷ ಸೇರಿರುವುದು ದೊಡ್ಡ ಹೊಡೆತ ನೀಡಿದೆ.
ಭಾನುವಾರ ನಡೆದ ಶಕ್ತಿ ಪ್ರದರ್ಶನದ ರ್ಯಾಲಿಯಲ್ಲಿ ಇಮ್ರಾನ್ಖಾನ್ ಪತ್ರವೊಂದನ್ನು ಬಹಿರಂಗಪಡಿಸಿದರು. ಆ ಪತ್ರ ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಬಾಹ್ಯ ದೇಶಗಳೊಂದಿಗೆ ಕೆಲವು ಶಕ್ತಿಗಳು ಸಂಚು ನಡೆಸಿರುವುದನ್ನು ಬಹಿರಂಗಪಡಿಸುತ್ತದೆ ಎಂದು ಅವರು ಆರೋಪಿಸಿದರು. ಈ ಪತ್ರವನ್ನು ಹಿರಿಯ ಪತ್ರಕರ್ತರು ಹಾಗೂ ಪ್ರಮುಖ ಮಿತ್ರರೊಂದಿಗೆ ಹಂಚಿಕೊಳ್ಳುವುದಾಗಿ ಇಮ್ರಾನ್ಖಾನ್ ಈ ಸಮಯದಲ್ಲಿ ಘೋಷಿಸಿದರು.
ಪಾಕಿಸ್ತಾನಿ ರಾಷ್ಟ್ರೀಯ ಅಸೆಂಬ್ಲಿಯು ಒಟ್ಟು 342 ಸದಸ್ಯ ಬಲವನ್ನು ಹೊಂದಿದ್ದು, ಸರಳ ಬಹುಮತಕ್ಕಾಗಿ 172 ಸದಸ್ಯರು ಬೇಕಾಗುತ್ತಾರೆ. PTI ನೇತೃತ್ವದ ಒಕ್ಕೂಟವು 179 ಸದಸ್ಯರ ಬೆಂಬಲದೊಂದಿಗೆ ರಚನೆಯಾಗಿತ್ತು. ಇಮ್ರಾನ್ಖಾನ್ ಅವರ PTI 155 ಸದಸ್ಯರನ್ನು ಹೊಂದಿದ್ದರೆ, ಬಲೂಚಿಸ್ತಾನ್ ಅವಾಮಿ ಪಕ್ಷ ಸೇರಿದಂತೆ ಇತರ ಪ್ರಮುಖ ಮಿತ್ರಪಕ್ಷಗಳು ಜೊತೆಗಿವೆ. ಗ್ರ್ಯಾಂಡ್ ಡೆಮಾಕ್ರಟಿಕ್ ಅಲಯನ್ಸ್ 20 ಸ್ಥಾನಗಳನ್ನು ಹೊಂದಿದೆ.
PTI ನ ನಾಲ್ಕು ಮಿತ್ರಪಕ್ಷಗಳಲ್ಲಿ ಮೂರು ಪಕ್ಷಗಳಾದ MQM-P, PML-Q ಮತ್ತು BAP ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ತಮ್ಮ ಬೆಂಬಲವನ್ನು ಸೂಚಿಸಿವೆ ಮತ್ತು ಅದಕ್ಕೆ ಅನುಗುಣವಾಗಿ ಮತ ಚಲಾಯಿಸುವುದಾಗಿ ಹೇಳಿರುವುದರಿಂದ ಇಮ್ರಾನ್ಖಾನ್ ಪರಿಸ್ಥಿತಿ ಅನಿಶ್ಚಿತವಾಗಿದೆ.
ಪಾಕಿಸ್ತಾನದ ವಿರೋಧ ಪಕ್ಷಗಳು 162 ಸದಸ್ಯ ಬಲವನ್ನು ಹೊಂದಿವೆ ಮತ್ತು ಮತದಾನದ ಸಮಯದಲ್ಲಿ ಮೂರು ಆಡಳಿತ ಸಮ್ಮಿಶ್ರ ಪಕ್ಷಗಳು ಸೇರಿಕೊಳ್ಳುವ ನಿರೀಕ್ಷೆಯಿದೆ. ಹೀಗಾದರೆ ವಿರೋಧಪಕ್ಷಕ್ಕೆ ಬಹುಮತವು ದೊರಕುತ್ತದೆ. ವಿಪಕ್ಷವು ತನ್ನ 161 ಸದಸ್ಯರ ಬೆಂಬಲದೊಂದಿಗೆ ಮಾರ್ಚ್ 28ರಂದು ಸದನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು.
ಇದೀಗ ಬಂದಿರುವ ಬಹುಮುಖ್ಯ ಬ್ರೇಕಿಂಗ್ ನ್ಯೂಸ್ ಪ್ರಕಾರ MQM-P ಇಮ್ರಾನ್ಖಾನ್ ಪಕ್ಷಕ್ಕೆ ಬೆಂಬಲಿಸುವುದಾಗಿ ಹೇಳಿದೆ. ಆದರೆ ಕೊನೆಗಳಿಗೆಯವರೆಗೂ ಯಾರು ಯಾರನ್ನು ಬೆಂಬಲಿಸುತ್ತಾರೆ ಎನ್ನುವುದನ್ನು ಊಹಿಸುವುದು ಸಾಧ್ಯವಿಲ್ಲ.