OPINION:
‘ಒಡೆದು ಆಳುವ ನೀತಿ’ಯನ್ನು ಅನುಸರಿಸುವ ಮೂಲಕ ಬ್ರಿಟೀಷರು ಭಾರತವನ್ನು 300 ವರ್ಷಗಳ ಕಾಲ ಆಳಿದರು ಎಂದು ನಾವು ಚಿಕ್ಕವರಿದ್ದಾಗ ಇತಿಹಾಸದ ಪಾಠದಲ್ಲಿ ಓದಿದ ನೆನಪು. ಆಗ ನಮಗೆ ಈ ಒಡೆದು ಆಳುವುದೆಂದರೇನು ಎಂದು ಸರಿಯಾಗಿ ಅರ್ಥವಾಗಿರಲಿಲ್ಲ. ಮೆಸ್ಟರೂ ಸಹ ನಮಗೆ ಅದನ್ನು ಅರ್ಥ ಮಾಡಿಸಲೇಬೇಕು ಎಂದು ಹಠ ತೊಟ್ಟಿರಲಿಲ್ಲ. ಹಾಗಾಗಿ ಶಾಲಾ ಜೀವನ ಮುಗಿಯುವವರೆಗೂ ನನಗೆ ಒಡೆದು ಆಳುವ ನೀತಿಯ ಬಗ್ಗೆ ಸ್ಪಷ್ಟತೆಯಿರಲಿಲ್ಲ.
ಆದರೆ ಇಂದಿನ ವಿದ್ಯಾರ್ಥಿಗಳು ನನ್ನಂತೆ ಈ ಪದದ ಅರ್ಥ ತಿಳಿದುಕೊಳ್ಳಲು ಕಷ್ಟ ಪಡಬೇಕಿಲ್ಲ! ಏಕೆಂದರೆ ಇಂದು ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳಿಗೆ ಮೆಸ್ಟರು, ಸರ್ಕಾರ ಎಲ್ಲರೂ ಸೇರಿ ಪ್ರಾಕ್ಟಿಕಲ್ ಕಲಿಕೆಯ ಮೂಲಕ ಹೇಳಿಕೊಡುತ್ತಿದ್ದಾರೆ. ಹಿಂದೆ ಬರಿ ವಿಜ್ಷಾನದ ವಿದ್ಯಾರ್ಥಿಗಳಿಗೆ ಕಪ್ಪೆ ಕೊಯ್ಯುವುದು ಮುಂತಾಗಿ ಪ್ರಾಕ್ಟಿಕಲ್ಸ್ ಇರುತ್ತಿತ್ತು. ಆದರೆ ಇಂದು ಒಂದನೇ ತರಗತಿಯಿಂದ ಡಿಗ್ರಿಯವರೆಗೂ ಪ್ರತಿಯೊಂದು ವಿಭಾಗದ ಪ್ರತಿಯೊಬ್ಬ ವಿದ್ಯಾರ್ಥಿಗೂ ಸರ್ಕಾರ ಒಡೆದು ಆಳುವ ನೀತಿಯನ್ನು ಸುಸ್ಪಷ್ಟವಾಗಿ ಹೇಳಿಕೊಡುತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ನನ್ನಂತೆ ಈ ಪದದ ಅರ್ಥ ಸರಿಯಾಗಿ ತಿಳಿಯಲಿಲ್ಲ ಎಂದು ಕೊರಗಬೇಕಿಲ್ಲ!
ಕೇವಲ ದಶಕಗಳ ಹಿಂದೆ ಸಮಾಜದ ಎಲ್ಲ ವರ್ಗದವರೂ ಸಾಮರಸ್ಯದಿಂದ ಬಾಳಬೇಕು ಎಂದು ಎಲ್ಲ ರಂಗಗಳೂ ಎತ್ತರದ ಸ್ವರದಲ್ಲಿ ಹೇಳುತ್ತಿದ್ದರು. ಹೀಗೆ ಒಗ್ಗಟ್ಟಿನ ಬಗೆಗಿನ ಮಂತ್ರ ಜಪವನ್ನು ರಾಜಕಾರಣಿಗಳು, ಧರ್ಮಗುರುಗಳು, ಬುದ್ದಿಜೀವಿಗಳು, ಜನಸಾಮಾನ್ಯರು ಎಲ್ಲರೂ ಮಾಡುತ್ತಿದ್ದರು. ಹಿಂದೂ ಹಬ್ಬವನ್ನು ಮುಸ್ಲಿಮರು, ಮುಸ್ಲಿಂ ಹಬ್ಬದಲ್ಲಿ ಹಿಂದೂಗಳು ಭಾಗವಹಿಸುತ್ತಿದ್ದರು. ಮುಸ್ಲಿಂ ಹಬ್ಬದಲ್ಲಿ ಹಿಂದೂ ಗೆಳೆಯರಿಗೆ ಮನೆಗೆ ಕರೆದು ಬಿರಿಯಾನಿ ತಿನಿಸಿ ಅವರು ಸಂತಸಪಟ್ಟರೆ, ಹಿಂದೂ ಹಬ್ಬದಲ್ಲಿ ಹಿಂದೂಗಳು ಮುಸ್ಲಿಂ ಕ್ರಿಶ್ಚಿಯನ್ ಗೆಳೆಯರನ್ನು ಕರೆದು ಹೋಳಿಗೆ ಊಟ ಹಾಕುತ್ತಿದ್ದರು.
ಕೇವಲ ಒಂದೇ ಒಂದು ದಶಕದಲ್ಲಿ ಎಲ್ಲವೂ ಬದಲಾಗಿಬಿಟ್ಟಿದೆ. ಹಿಂದಿನ ದಿನಗಳು ಕನಸಿನಂತಾಗಿಬಿಟ್ಟಿವೆ! ಒಂದು ದಶಕದಲ್ಲಿ ಎನ್ನುವುದಕ್ಕಿಂತ 2019ರ ಚುನಾವಣೆಯ ನಂತರದ ದಿನಗಳಲ್ಲಿ ಈ ಒಡೆದ ಆಳುವ ನೀತಿಯನ್ನು ವಿದ್ಯಾರ್ಥಿಗಳಿಗೆ, ನಾಗರಿಕರಿಗೆ ಪ್ರಾಕ್ಟಿಕಲ್ ಮೂಲಕ ಹೇಳಿಕೊಡುವ ಪಣವನ್ನು ಸರ್ಕಾರ ತೊಟ್ಟಿತು. ಅದಕ್ಕೆ ಕಾರಣವೂ ಇಲ್ಲದಿಲ್ಲ. ಕೊನೆಯ ಬಾರಿ 2019ರಲ್ಲಿ ಇನ್ನೇನು ಚುನಾವಣೆಯ ಕೊನೆ ಗಳಿಗೆಯವರೆಗೂ ಆಡಳಿತಾರೂಢ ಬಿಜೆಪಿ ವಿರುದ್ಧವಾದ ಗಾಳಿ ಇಡೀ ದೇಶದಲ್ಲಿ ಬೀಸುತ್ತಿತ್ತು. ಐದು ವರ್ಷಗಳ ಅದರ ದುರಾಡಳಿತ ಬೆಲೆಯೇರಿಕೆ, ನಿರುದ್ಯೋಗ ಜನರನ್ನು ಕಂಗೆಡಿಸಿತ್ತು. ಇನ್ನೇನು ಕೇಂದ್ರದಲ್ಲಿ ಸರ್ಕಾರ ಬದಲಾವಣೆಯಾಗಿಯೇಬಿಡುತ್ತದೆ ಎಂದುಕೊಳ್ಳುವಷ್ಟರಲ್ಲೇ ಚಮತ್ಕಾರವೊಂದು ನಡೆದುಹೋಯಿತು!
ರಾತ್ರೋರಾತ್ರಿ ಪುಲ್ವಾಮಾದಲ್ಲಿ ಸೈನಿಕರಿದ್ದ ಟ್ರಕ್ ಸ್ಪೋಟಿಸಿ 40 ಸೈನಿಕರು ಹುತಾತ್ಮರಾದರು. ಇದಕ್ಕೆ ಪಾಕ್ ಭಯೋತ್ಪಾದನೆಯೇ ಕಾರಣ ಎಂದು ಆರೋಪಿಸಿ ಭಾರತ ಪಾಕ್ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಬಾಂಬ್ ಹಾಕಿ ಹೀರೊ ಆಗಿದ್ದೂ ಆಯಿತು. ಇಡೀ ದೇಶದಲ್ಲಿ ಪಾಕ್ ವಿರೋಧಿ, ಮುಸ್ಲಿಂ ವಿರೋಧಿ ಭಾವನೆಗಳು ಹೆಡೆಯೆತ್ತಿದವು. ಜೊತೆಜೊತೆಗೆ ರಾಮಮಂದಿರದ ಮಂತ್ರವೂ ಮೇಳೈಸಿ ಮೋದಿ ಮತ್ತೊಮ್ಮೆ ತ್ಸುನಾಮಿಯಾದರು. ಅವರೆದುರು ವಿರೋಧಪಕ್ಷಗಳೆಲ್ಲವೂ ತರಗೆಲೆಗಳಂತೆ ಹಾರಿಹೋದವು. ಪಾಪದ ಪಪ್ಪು ಬಿರುದಾಂಕಿತ ರಾಹುಲ್ ಗಾಂಧಿ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯಸೇನ್ ಜೊತೆಗೆ ಸೇರಿಕೊಂಡು ಸರಿಯಾದ ಲೆಕ್ಕಾಚಾರದೊಡನೆ ತಮ್ಮ ಪಕ್ಷವನ್ನು ಗೆಲ್ಲಿಸಿದರೆ ಪ್ರತಿ ಬಡವರ ಮನೆಗೂ ತಿಂಗಳಿಗೆ 6000 ರೂಪಾಯಿಗಳನ್ನು ಸರ್ಕಾರದ ಕಡೆಯಿಂದ ಕೊಡುತ್ತೇನೆ ಎಂದು ಹೇಳಿದ್ದನ್ನು ಜನ ಗೇಲಿ ಮಾಡಿ ನಕ್ಕರು.
ಪ್ರತಿಯೊಬ್ಬರಿಗೂ 15 ಲಕ್ಷ ಕೊಡುತ್ತೇನೆಂದು ಬಿಜೆಪಿ ಮುಖಂಡರು ಹೇಳಿರುವಾಗ ಜುಜುಬಿ 6000 ಏಕೆ ಬೇಕು ಎಂಬುದು ಜನರ ಅನಿಸಿಕೆಯಿರಬೇಕು. ಜೊತೆಜೊತೆಗೆ EVM ಯಂತ್ರ ಮತ್ತು ಅದನ್ನು ಚುನಾವಣೆಯಲ್ಲಿ ಬಳಸುವ ಅಧಿಕಾರಿಗಳು ಸರ್ಕಾರಕ್ಕೆ ತಮ್ಮ ಕೈಲಾದಷ್ಟು ಹೆಚ್ಚುವರಿ ಸೇವೆ ಮಾಡಿದವೆಂದು ವಿರೋಧ ಪಕ್ಷಗಳು ಬಾಯಿ ಬಡಿದುಕೊಂಡರು. ಮೋದಿ ನಕ್ಕರಷ್ಟೆ. ಬಾಯಿಯಿರುವುದೇ ಬಡಿದುಕೊಳ್ಳಲು ಅಲ್ಲವೆ ಎಂಬ ನಗೆ ಅದು! ಸರ್ಕಾರದ ವಿರುದ್ಧ, ಪಾಕ್ ಪರ, ಮುಸ್ಲಿಮರ ಪರ ಯಾರೇ ಮಾತಾಡಿದರೂ ಅವರು ದೇಶದ್ರೋಹಿಗಳು ಎಂಬ ಪರೋಕ್ಷ ಘಷಣೆಯನ್ನೇ ಸರ್ಕಾರ ಹೊರಡಿಸಿತ್ತು. ಹೀಗಾಗಿ ಪಾಕ್ ವಿರುದ್ಧ ಮುಸ್ಲಿಂ ವಿರುದ್ಧ ಮಾತಾಡಿದರೆ ಅದು ದೇಶಪ್ರೇಮ, ಧರ್ಮಪ್ರೇಮ ಎನಿಸಿಕೊಳ್ಳುತ್ತದೆ ಎಂಬ ಹೊಸ ವಿಷಯವನ್ನು ಸಂಘಪರಿವಾರ ಹಾಗೂ ಬಿಜೆಪಿ ಶಿಸ್ತುಬದ್ಧವಾಗಿ ಪ್ರಜೆಗಳಿಗೆ ತಿಳಿಹೇಳಿತು. ಇದರ ಪರಿಣಾಮ ಇಂದು ನಿಮ್ಮ ಮುಂದೆಯೇ ಇದೆ.
ಹಿಜಾಬ್ ವಿವಾದ, ದೇವಸ್ಥಾನದ ಎದುರು ವ್ಯಾಪಾರ ವಿವಾದ, ಕಶ್ಮೀರ್ ಫೈಲ್ಸ್ ವಿವಾದ ಮತ್ತು ಇದೀಗ ಹೊಸದಾಗಿ ಸೇರ್ಪಡಿಸಲಾದ ಹಲಾಲ್ ವಿವಾದ ಇವೆಲ್ಲವುಗಳನ್ನೂ ನಾಗರಿಕರ ಪಠ್ಯಕ್ರಮದಲ್ಲಿ ಸೇರಿಸಿರುವ ಸರ್ಕಾರ 2024ರಲ್ಲಿ ನಡೆಯುವ ಚುನಾವಣೆಯಲ್ಲಿ ಸೋಲುವ ಭೀತಿಯನ್ನು ಈಗಲೇ ನಿವಾರಿಸಿಕೊಂಡಿದೆ.
ನಾನು ಶಾಲಾ ವಿದ್ಯಾರ್ಥಿಯಾಗಿದ್ದಾಗ ಬ್ರಿಟಿಷರ ನೀತಿಯಾದ ಒಡೆದು ಆಳುವ ನೀತಿಯ ಬಗ್ಗೆ ತಿಳಿದುಕೊಳ್ಳಲು ಎಷ್ಟು ಒದ್ದಾಡಿದ್ದೆ ಎಂಬುದನ್ನು ಈಗ ನೆನೆಸಿಕೊಂಡರೆ ನಗುಬರುತ್ತದೆ!
ಸಂಪಾದಕೀಯ, ಓಂಪ್ರಕಾಶ್ ನಾಯಕ್