OPINION:
ಮೈಸೂರು: ಜೈನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ, ಗೊಮ್ಮಟೇಶ್ವರನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಇಂಡಿಯನ್ ನ್ಯೂ ಕಾಂಗ್ರೆಸ್ ನ ರಾಷ್ಟ್ರಾಧ್ಯಕ್ಷ ಅಯೂಬ್ ಖಾನ್ ಅವರು ಬಹಿರಂಗವಾಗಿ ಜೈನ ಧರ್ಮದ ಗುರುಗಳು ಹಾಗೂ ಸಮುದಾಯದ ಜನರಲ್ಲಿ ಕ್ಷಮೆಯಾಚಿಸಿದ್ದಾರೆ.
ಮೈಸೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನನ್ನ ಹೇಳಿಕೆಯಿಂದ ಜೈನ ಧರ್ಮದ ಗುರುಗಳು ಹಾಗೂ ಎಲ್ಲಾ ಜನರಿಗೂ ಇದರಿಂದ ನೋವಾಗಿದೆ. ಹಾಗಾಗಿ ನಾನು ಎಲ್ಲಾ ಜನರಲ್ಲೂ ಕೈ ಮುಗಿದು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
ನನಗೆ ಜೈನ ಧರ್ಮದ ಬಗ್ಗೆ, ಜೈನ ಧರ್ಮದ ಸಮುದಾಯದ ಬಗ್ಗೆ ಅಪಾರವಾದ ಗೌರವವಿದೆ. ಇದರಿಂದ ಜೈನ ಧರ್ಮದ ಜನರಿಗೆ ನೋವಾಗಿದೆ. ಇದಕ್ಕಾಗಿ ಜನರು ಧರಣಿ ಮಾಡುತ್ತಿದ್ದಾರೆ. ದಯಮಾಡಿ ಈ ಸಂಬಂಧ ಧರಣಿ ಮಾಡಬೇಡಿ, ನನ್ನನ್ನು ಜೈನ ಧರ್ಮದ ಮಗ ಎಂದುಕೊಳ್ಳಿ, ಈ ವಿವಾದ ಕೋರ್ಟ್ನಲ್ಲಿದೆ. ನನ್ನ ಹೇಳಿಕೆಯಿಂದ ನಿಮಗೆ ನೋವಾಗಿದೆ. ಹಾಗಾಗಿ ಮಾಜಿ ಸಚಿವ ತನ್ವೀರ್ ಸೇಠ್ ಅವರ ಸಲಹೆಯಂತೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.
ನನ್ನ ಹೇಳಿಕೆಯನ್ನು ಇಷ್ಟು ದೊಡ್ಡದಾಗಿ ಮಾಡಬಾರದಿತ್ತು. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ನನ್ನ ಹೇಳಿಕೆ ಸುದ್ದಿಯಾಗಿದೆ. ಇದು ರಾಜಕೀಯ ಪಿತೂರಿ. ನಾನು ಯಾವುದೇ ಸಮಾಜಕ್ಕೆ ಅಥವಾ ಸಮುದಾಯಕ್ಕೆ ನೋವುಂಟು ಮಾಡಲು, ಅಗೌರವ ತೋರುವ ಉದ್ದೇಶದಿಂದ ಈ ಹೇಳಿಕೆ ನೀಡಿಲ್ಲ. ಸಮಾಜಕ್ಕೆ ತಪ್ಪು ಕಲ್ಪನೆ ಮೂಡಿಸುವಂತಹ ಸುದ್ದಿಯನ್ನು ಮಾಧ್ಯಮಗಳು ಪ್ರಸಾರ ಮಾಡಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.