OPINION:
ನಮ್ಮ ಕರ್ನಾಟಕ ಸರ್ಕಾರ, ಸಮಾಜ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಖಂಡಿತ ತಿಳಿಯುತ್ತಿಲ್ಲ. ಸಮಾಜವನ್ನು ಒಡೆಯುವ ಕೆಲಸವನ್ಸುನು ಹಿಂದುತ್ವದ ಹೆಸರಿನಲ್ಲಿ ಹಿಂದೂ ಮೂಲಭೂತವಾದಿಗಳಿಂದ ವ್ಯವಸ್ಥಿತವಾಗಿ ಮಾಡಿಕೊಂಡು ಬರುತ್ತಿದ್ದ ಸರ್ಕಾರ, ಹಿಜಾಬ್, ವ್ಯಾಪಾರ, ಟಿಪ್ಪು, ಭಗವದ್ಗೀತೆ, ಕಾಶ್ಮೀರ ಫೈಲ್ಸ್ ಎಲ್ಲವನ್ನೂ ಪ್ರಚಂಡವಾಗಿ ಬಳಸಿ ಸಮಾಜವನ್ನು ಇಬ್ಹಾಗವಾಗಿಸಿತ್ತು. ಈಗ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವಂತೆ ಮುಸ್ಲಿಮರ ಹಲಾಲ್ ಕಟ್ಅನ್ನು ಸರ್ಕಾರವೇ ನಿಷೇಧಿಸಿ ಆದೇಶ ಹೊರಡಿಸಿದೆ!
ಸ್ವಲ್ಪ ದಿನ ಈ ಹಲಾಲ್ ಅಭಿಯಾನವನ್ನು ಹಿಂದೂ ಮೂಲಭೂತವಾದಿಗಳ ಕೈಯಿಂದ ಕರಪತ್ರವನ್ನು ಹಂಚುವಷ್ಟಕ್ಕೆ ಸೀಮಿತವಾಗಿಸಿದ್ದ ಸರ್ಕಾರ ಹೊಸತೊಡಕಿಗೆ ಮುನ್ನಾದಿನವೇ ಧಿಡೀರ್ ಎಂದು ಬೆಂಕಿಯಂಥ ನಿರ್ಣಯವೊಂದನ್ನು ಕೈಗೊಂಡಿದೆ. ಅದೇ ಹಲಾಲ್ ಕಟ್ ನಿಶೇಧಿಸಿ ಹೊರಡಿಸಿರುವ ಸರ್ಕಾರಿ ಆದೇಶ. ಈ ಆದೇಶವನ್ನು ಶಶಿಕಲಾ ಜೊಲ್ಲೆಯೆಂಬ ಮಹಿಳಾ ಮಂತ್ರಿ ಬಿಜೆಪಿಯ ಒಡೆದಾಳುವ ನೀತಿಗನುಸಾರವಾಗಿ ಯಾವುದೇ ಮುಲಾಜಿಲ್ಲದೆ ಹೊರಡಿಸಿದ್ದಾರೆ. ಹಲಾಲ್ ಕಟ್ನಿಂದ ಪ್ರಾಣಿಗಳು ನೋವು ಅನುಭವಿಸುತ್ತವೆ. ಆದ್ದರಿಂದ ರಾಜ್ಯದಲ್ಲಿ ಎಲ್ಲ ಪ್ರಾಣಿಗಳನ್ನೂ ಸ್ಟನ್ನಿಂಗ್ ವಿಧಾನದಿಂದಲೇ ಕಟ್ ಮಾಡಬೇಕು ಎಂದು ಈ ಆದೇಶದಲ್ಲಿ ಹೇಳಲಾಗಿದೆ.
ಏನಿದು ಸ್ಟನ್ನಿಂಗ್ ವಿಧಾನ?
ಸ್ಟನ್ನಿಂಗ್ ವಿಧಾನವೆಂದರೆ ಕೊಲ್ಲುವ ಪ್ರಾಣಿಯನ್ನು ಮೊದಲಿಗೆ ಪ್ರಜ್ಷೆತಪ್ಪಿಸಿ ನಂತರ ಅದನ್ನು ಕೊಲ್ಲಬೇಕು. ಒಂದೊಮ್ಮೆ ಹಾಗೆ ಮಾಡದೆ ಪ್ರಾಣಿಯನ್ನು ಕೊಂದರೆ ಅದಕ್ಕೆ ದಂಡವನ್ನು ವಿಧಿಸಲಾಗುತ್ತದೆ ಎಂದು ಸರ್ಕಾರ ಎಚ್ಚರಿಸಿದೆ. ಸರ್ಕಾರದ ಈ ಕ್ರಮದಿಂದಾಗಿ ಹಿಂದೂ ಮೂಲಭೂತವಾದಿಗಳು ಹಲವು ಜಿಲ್ಲಾಕೇಂದ್ರಗಳಲ್ಲಿ ಜಟ್ಕಾ ಕಟ್ನ ಮಾಂಸ ಮಳಿಗೆಗಳನ್ನು ಸ್ಥಾಪಿಸಿದ್ದಾರೆ. ನಾಳಿನ ಉಗಾದಿಯ ಮರುದಿನದ ಹೊಸತೊಡಕಿನ ಮಾಂಸವನ್ನು ಇದರಲ್ಲಿ ಖರೀದಿಸಲು ಹಿಂದೂಗಳಿಗೆ ಕರೆಕೊಟ್ಟಿದ್ದಾರೆ.
ಸರ್ಕಾರದ ಈ ಆದೇಶವನ್ನು ಮೈಸೂರಿನ ಹಲವು ಸಾಹಿತಿಗಳು, ವಿಚಾರವಾದಿಗಳು ವಿರೋಧಿಸಿದ್ದಾರೆ. ನಾಳೆ ಮುಸ್ಲಿಂ ಮಾಂಸದಂಗಡಿಗಳಲ್ಲೇ ಮಾಂಸ ಖರೀದಿಸಲು ಈ ವಿಚಾರವಾದಿಗಳು ನಿರ್ಧರಿಸಿದ್ದಾರೆ.
ಮತ್ತೊಂದೆಡೆ ಜೆಡಿಎಸ್ನ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರದ ಈ ನಿಧಾರಕ್ಕೆ ಕೆಂಡಾಮಂಡಲವಾಗಿದ್ದಾರೆ. ಸರ್ಕಾರ ಇಂಥ ನೀಚ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಸಮಾಜವನ್ನು ಸ್ಪಷ್ಟವಾಗಿ ಎರಡು ಭಾಗವಾಗಿ ಒಡೆಯುತ್ತಿದೆ. ಆ ಮೂಲಕ ಓಟ್ ಗಿಟ್ಟಿಸಿಕೊಳ್ಳುವ ನೀಚ ತಂತ್ರವನ್ನು ಅನುಸರಿಸುತ್ತಿದೆ ಎಂದು ಹೆಚ್.ಡಿ.ಕೆ ಟೀಕಿಸಿದ್ದಾರೆ.
ಆದರೆ ಯಾರು ಏನೇ ಹೇಳಲಿ, ತನ್ನ ಹಿಂದೂ ಪರ ಹಾಗೂ ಮುಸ್ಲಿಮರನ್ನು ಮಟ್ಟ ಹಾಕುವ ಅಜೆಂಡಾದಿಂದ ಹಿಂದೆ ಸರಿಯುವುದಿಲ್ಲವೆಂದು ಸರ್ಕಾರ ಪರೋಕ್ಷವಾಗಿ ಇಂಥ ಆದೇಶಗಳಿಂದ ಸಾರಿ ಹೇಳುತ್ತಿದೆ. ಒಂದು ಧರ್ಮದ ಧಾರ್ಮಿಕ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುವಂಥ ಸರ್ಕಾರದ ಈ ಆದೇಶ ನಾಳಿನ ದಿನಗಳಲ್ಲಿ ಸಮಾಜದಲ್ಲಿ ಎಂಥ ಅಶಾಂತಿಯನ್ನು ಮೂಡಿಸಬಹುದು ಎಂಬುದನ್ನು ನೆನೆಸಿಕೊಂಡರೆ ಮೈಮೇಲೆ ಮುಳ್ಳುಗಳೆದ್ದ ಹಾಗಾಗುತ್ತದೆ.
ಜಾತ್ಯಾತೀತತೆಯಿಂದ ಮೈಲುಗಟ್ಟಲೆ ದೂರ ಸರಿದಿರುವ, ಸರಿಯುತ್ತಿರುವ ಸರ್ಕಾರದ ಇಂಥ ನಿರ್ಧಾರಗಳು ಪ್ರಜಾಪ್ರಭುತ್ವಕ್ಕೆ ಸಾಮರಸ್ಯಕ್ಕೆ ಅತ್ಯಂತ ಹಾನಿಕಾರಕ ಎಂಬುದನ್ನು ಇವರಿಗೆ ತಿಳಿಹೇಳುವವರು ಯಾರು? ಬೇಲಿಯೆ ಎದ್ದು ಹೊಲ ಮೇಯ್ದರೆ ಮಾಡುವುದೇನು?
ಓಂಪ್ರಕಾಶ್ ನಾಯಕ್, BMG24x7ಲೈವ್ಕನ್ನಡ