OPINION:
ಮನುಷ್ಯ ಕುಡಿಯುವುದು ತನ್ನ ಕಷ್ಟವನ್ನು ಮರೆಯಲು ಎನ್ನುತ್ತಾರೆ. ಆದರೆ ಮನುಷ್ಯ ಸಂತೋಷದಲ್ಲಿದ್ದಾಗಲೂ ಅದನ್ನು ಸಂಭ್ರಮಿಸಲು, ಸುಖದ ಮತ್ತಿನಲ್ಲಿ ತೇಲಾಡಲು ಕುಡಿಯುತ್ತಾನೆ. ದುಖಃದಲ್ಲಿದ್ದಾಗ ಅದನ್ನು ಮರೆಯಲು ಕುಡಿಯುತ್ತಾನೆ. ಅಂದರೆ ಇದರ ಅರ್ಥ ಒಟ್ಟಿನಲ್ಲಿ ಮನುಷ್ಯ ಕುಡಿಯುವುದು ಮತ್ತಿನಲ್ಲಿ ತೇಲಲು ಎಂದಾಯಿತು. ಹೀಗೆ ಮತ್ತಿನಲ್ಲಿರುವ ಮನುಷ್ಯನಿಗೆ ಯಾವ ಸಂಕಟಗಳೂ ಭಾದಿಸುವುದಿಲ್ಲ. ಮನುಷ್ಯ ಮತ್ತಿನಲ್ಲಿ ಮೈಮರೆಯಲು ಕುಡಿತದೊಂದಿಗೆ ಹಲವು ಮತ್ತು ಬರುವ ಪದಾರ್ಥಗಳನ್ನು ಬಳಸುವುದು ಎಲ್ಲರಿಗೂ ಗೊತ್ತು. ಕ್ಷಮಿಸಿ, ನಾನಿಲ್ಲಿ ಕುಡಿತದ ಬಗ್ಗೆಯಾಗಲಿ, ನಶೆಯ ಬಗ್ಗೆಯಾಗಲಿ ಹೇಳಲು ಹೊರಟಿಲ್ಲ, ಹೇಳಲು ಬಯಸಿರುವುದು ನಾವು ನಂಬಲೂ ಆಗದಷ್ಟು ಬೆಲೆಗಳು ಹೆಚ್ಚಿದ್ದರೂ ನಾವು ಆರಾಮವಾಗಿ ನಗುನಗುತ್ತ ಹೇಗೆ ಇರಲು ಸಾಧ್ಯವಾಗಿದೆ ಎಂಬುದನ್ನಷ್ಟೆ! ಅದಕ್ಕೆ ಈ ಪೀಠಿಕೆಯಷ್ಟೆ!!
ಈಗ ನೋಡಿ, 8 ವರ್ಷಗಳ ಹಿಂದೆ ಪೆಟ್ರೋಲ್ 60-70 ರೂಪಾಯಿಗಳಿತ್ತು. ಇಂದು 120 ರೂಪಾಯಿಗಳಾಗಿವೆ. ಜನ ಒಂದು ಚೂರು ಬೇಜಾರು ಮಾಡಿಕೊಳ್ಳದೆ ನಗುನಗುತ್ತ ಪೆಟ್ರೋಲ್ ಡೀಸೆಲ್ ಹಾಕಿಸಿಕೊಳ್ಳುತ್ತಿದ್ದಾರೆ! 8 ವರ್ಷಗಳಹಿಂದೆ ಅಡಿಗೆಗ್ಯಾಸ್ ಸಿಲಿಂಡರ್ ಬೆಲೆ 350 ರಿಂದ 400 ಇತ್ತು. ಇಂದು ಅದೇ ಸಿಲಿಂಡರ್ ಬೆಲೆ 950 ರೂಪಾಯಿಗಳು. ಅಂದರೆ ಬೆಲೆ ಅಂದಿಗಿಂತ ಡಬಲ್ ಅಥವ ಅದಕ್ಕಿಂತ ಹೆಚ್ಚಾಗಿದೆ. ಆದರೂ ಜನ ಏನೊಂದು ಮಾತಾಡದೆ ನಗುನಗುತ್ತಲೇ ಗ್ಯಾಸ್ ಕೊಳ್ಳುತ್ತಿದ್ದಾರೆ. ತಂದುಕೊಟ್ಟವನಿಗೆ ಹದಿನೈದಿಪ್ಪತ್ತು ಭಕ್ಷೀಸನ್ನೂ ಕೊಡುತ್ತಾರೆ!
ಪೆಟ್ರೋಲ್ ಡೀಸೆಲ್ಗಳ ಬಗ್ಗೆಯೇ ಮೊದಲಿಗೆ ಇಷ್ಟು ಹೇಳಲು ಕಾರಣ ಇವೆರಡೂ ಬೇರೆಲ್ಲಾ ವಸ್ತುಗಳ ಬೆಲೆಯೇರಲು ಕಾರಣವಾಗುವ ಮೂಲ ವಸ್ತುಗಳು. ಹಾಗಾಗಿ ಪೆಟ್ರೋಲ್ ಡೀಸೆಲ್ ಬೆಲೆಯೇರಿಕೆಯಾಗುತ್ತಿದ್ದಂತೆಯೇ ಅದಕ್ಕೆ ಸಂಬಂಧಪಡುವ ಎಲ್ಲದರ ಬೆಲೆಯೂ ಹೆಚ್ಚಾಗುತ್ತದೆ. ದೇಶದಾದ್ಯಂತ ಜನರಿಗೆ ಅವಶ್ಯವಾದ ಎಲ್ಲಾ ವಸ್ತುಗಳು ಲಾರಿಗಳ ಮೂಲಕವೇ ಒಂದೆಡೆಯಿಂದ ಇನ್ನೊಂದೆಡೆ ಸಾಗಣೆಯಾಗುವುದರಿಂದ ಒಮ್ಮೆ ಡೀಸೆಲ್ ಬೆಲೆಯೇರಿದರೆ ಲಾರಿಗಳು ಡೀಸೆಲ್ ಮೇಲೆ ಅವಲಂಬಿತವಾಗಿರುವುದರಿಂದ, ಅದರ ಮೂಲಕ ಸಾಗಿಸಲ್ಪಡುವ ಪ್ರತಿಯೊಂದರ ಬೆಲಯೂ ಏರಿಕೆಯಾಗುತ್ತದೆ. ಆದರೆ ಇದು ಗೊತ್ತಿದ್ದೂ ಗೊತ್ತಿಲ್ಲದಂತೆ ನಾಟಕ ಮಾಡುತ್ತದೆ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು.
ಹೀಗಾಗಿ ಪ್ರತಿಯೊಂದು ರೇಷನ್, ಸೋಪ್, ಬೈಕ್ ನಿಂದ ಹಿಡಿದು ಬೆಂಕಿಪೊಟ್ಟಣದವರೆಗೂ ಪ್ರತಿಯೊಂದರ ಬೆಲೆಯೂ ಏರುತ್ತದೆ, ಈಗ ಹಾಗೆ ಆಗಿದೆ, ಪೆಟ್ರೋಲ್ ಡೀಸೆಲ್ ದರ ಎರಡು ವಾರಗಳಲ್ಲಿ 9 ರೂಪಾಯಿ ಏರಿರುವುದರಿಂದ ಎಲ್ಲದರ ದರವೂ ಏರಿದೆ. ಇದು ಇಲ್ಲಿಗೆ ನಿಲ್ಲುವುದಿಲ್ಲ. ಪ್ರತಿದಿನವೂ 80 ಪೈಸೆ ಏರಸಲೇಬೇಕೆಂಬ ನಿಯಮವನ್ನು ಸರ್ಕಾರ ಹಾಗೂ ತೈಲಕಂಪನಿಗಳು ಹಾಕಿಕೊಂಡಂತಿವೆ. ಆದ್ದರಿಂದ ಪ್ರತಿದಿನವೂ 80-90 ಪೈಸೆ ದರ ಏರುತ್ತಲೇ ಇದೆ. ಇದಕ್ಕೆ ಕೇಂದ್ರದ ಸಚೀವರು ಲೋಕಸಭೆ ಸದನದಲ್ಲಿ ಸಮರ್ಥನೆಯನ್ನೂ ಮಾಡಿಕೊಂಡಿದ್ದಾರೆ! ರಷ್ಯಾ ಉಕ್ರೇನ್ ಯುದ್ಧದಿಂದಾಗಿ ಬೇರೆಲ್ಲಾ ದೇಶಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ 50ಪ್ರತಿಶತ ಹೆಚ್ಚಾಗಿದೆ. ಆದರೆ ನಾವು ಭಾರತದಲ್ಲಿ ಕೇವಲ ಶೇಕಡ 5 ಮಾತ್ರ ಹೆಚ್ಚಿಸಿದ್ದೇವೆ. ಹಾಗಾಗಿ ನಾವು ಅವರೆಲ್ಲರಿಗಿಂತ ಒಳ್ಳೆಯವರು. ನಿಮಗಾಗಿ ತ್ಯಾಗ ಬೆಲೆಯೇರಿಕೆಯ ವಿಷಯದಲ್ಲಿ ಹೆಚ್ಚಿಗೆ ಏರಿಸದೆ ತ್ಯಾಗ ಮಾಡಿದ್ದೇವೆ ಎಂದಿದ್ದಾರೆ!
ಇದು ನಿಜವೇ ಎಂದು ಯೋಚಿಸಿದರೆ, ಯುದ್ಧಕ್ಕೆ ಮುನ್ನವೇ ಭಾರತದಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ತಲುಪಿದ್ದು ಜನರಿಗೆ ನೆನಪಿರಬಹುದು. ಮುಂಚೆ 60 -70 ಆಸಪಾಸಿನಲ್ಲಿದ್ದ ತೈಲಬೆಲೆಯನ್ನು ಭಾರತ ಸರ್ಕಾರ ಯುದ್ಧಕ್ಕೆ ಮುಂಚೆಯೇ ಶೇಕಡ 40ರಷ್ಟು ಹೆಚ್ಚಿಸಿದೆಯೆಂದಾಯಿತು! ಅದೂ, ಯಾವುದೇ ಕಾರಣವಿಲ್ಲದೆ! ಅದರಲ್ಲೂ, ಕೊರೋನ ಸಮಯದಲ್ಲಿ ಇಡೀ ಜಗತ್ತಿನಲ್ಲಿ ಕಚ್ಚಾ ತ್ಯಲದ ಬೆಲೆ ಬ್ಯಾರೆಲ್ಲಿಗೆ ಬರಿ 5-10 ಡಾಲರ್ ಇದ್ದಾಗಲೂ ನಮ್ಮಲ್ಲಿ ಪೆಟ್ರೋಲ್ ಬೆಲೆ 80-90 ಇತ್ತು. ಅದಕ್ಕೆ ನಮ್ಮ ಸರ್ಕಾರ, ಸಚಿವರು ಯಾವುದೇ ವಿವರಣೆ ಕೊಡುವುದಿಲ್ಲ!
ಇದರ ಜೊತೆಗೆ ಗಾಯದ ಮೇಲೆ ಬರೆಯಿಟ್ಟಂತೆ ಅಡಿಗೆ ಅನೀಲದ ಬೆಲೆ 50 ರೂಪಾಯಿ ಹೆಚ್ಚಿಸಿರುವುದರಿಂದ ಬರಿ ಗ್ರಾಹಕರಿಗಷ್ಟೇ ಅಲ್ಲ, ಹೋಟೆಲ್ ನ ಪ್ರತಿಯೊಂದು ಊಟ ತಿಂಡಿಗಳ ಬೆಲೆಯೂ ಏರಿದೆ. 10 ರೂಪಾಯಿ ಕಾಫಿ 15 ಆಗಿದ್ದರೆ, 60 ರೂಪಾಯಿ ಊಟ 80 ಆಗಿದೆ. ಜನ ಚಿಂತಿಸುತ್ತಿಲ್ಲ. ನಗುನಗುತ್ತ ಹೆಚ್ಚುವರಿ ದುಡ್ಡನ್ನು ಕೊಡುತ್ತಿದ್ದಾರೆ! ಬರಿ ನಗುತ್ತ ಹೆಚ್ಚಿನ ದುಡ್ಡು ಕೊಡುವುದಷ್ಟೇ ಅಲ್ಲ, ಪಂಚರಾಜ್ಯಗಳ ಚುನಾವಣೆಯಲ್ಲಿ 5 ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಅದೇ ಬಿಜೆಪಿ ಸರ್ಕಾರವನ್ನು ನಗುನಗುತ್ತಾ ಆರಿಸಿ ಕಳುಹಿಸಿದ್ದಾರೆ!
ಇದು ಹೇಗೆ ಸಾಧ್ಯ? ಹೇಗೆ, ಹೇಗೆ!!?
ಇದಕ್ಕೆ ಕಾರಣ ಸರ್ಕಾರ ಜನರಿಗೆ ಮತ್ತಿನ ಮದ್ದು ಕೊಡುತ್ತಿರುವುದು. ಸರ್ಕಾರದ ಮತ್ತನ್ನು ತಿಂದ ಜನ ಆ ನಶೆಯಲ್ಲಿರುವುದರಿಂದ ಅವರಿಗೆ ಈ ಬೆಲೆಯೇರಿಕೆಯಾಗಲಿ, ತಮ್ಮ ಮೇಲಾಗುತ್ತಿರುವ ದೌರ್ಜನ್ಯವಾಗಲಿ ಗೊತ್ತೇ ಆಗುತ್ತಿಲ್ಲ. ಏನಿದು ಸರ್ಕಾರದ ಮತ್ತಿನ ಮದ್ದು ಏನ್ನುತ್ತೀರಾ?
ಅದೇ ಧರ್ಮದ ಅಫೀಮು.. ಹಿಂದುತ್ವದ ನಶೆ!
ಹೌದು, ಸರ್ಕಾರ ಪ್ರಜೆಗಳಿಗೆ ಒಂದೆಡೆ ಇಷ್ಟೆಲ್ಲಾ ಹಲ್ಲೆ ಮಾಡಿ ಬರೆ ಬಾಸುಂಡೆ ಬರುವಂತೆ ಹೊಡೆಯುತ್ತಿದ್ದರೂ, ಮತ್ತೊಂದೆಡೆ ಒಂದರ ಹಿಂದೊಂದರಂತೆ ವಿವಿಧ ರುಚಿಯ ಧರ್ಮದ ಅಫೀಮನ್ನು ಜನರಿಗೆ ಕೊಡುತ್ತಿದೆ. ಅದು ನೇರವಾಗಿ ಇದನ್ನು ತಾನಾಗೆ ಕೊಡದೆ ಮೊದಲು ತನ್ನ ಹಿಂದುತ್ವ ಸಂಘಟನೆಗಳೆಂಬ ಏಜೆಂಟರ ಮೂಲಕ ಮದ್ದು ಕೊಡಿಸಿ, ನಂತರ ತಾನೂ ಅದಕ್ಕೆ ಕೈ ಜೋಡಿಸುತ್ತಿದೆ.
ನೆನಪಿಸಿಕೊಳ್ಳಿ!
ಕರ್ನಾಟಕದಲ್ಲಿ ಹರ್ಷ ಕೊಲೆ ಪ್ರಕರಣ, ಬಹುಸಂಖ್ಯಾತ ಹಿಂದುಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಲಾಯಿತು. ನಂತರ ಹಿಜಾಬ್ ಪ್ರಕರಣ. ಉಡುಪಿಯ ಮೂಲೆಯ ಹಿಜಾಬನ್ನು ಇಡೀ ಕರ್ನಾಟಕಕ್ಕೆ ಅನ್ವಯಿಸುವಂತೆ ಮಾಡಿ ಪ್ರತಿಯೊಬ್ಬ ವಿದ್ಯಾರ್ಥಿ ಅವರ ಮನೆಯವರೆಲ್ಲರಿಗೂ ಈ ಧರ್ಮದ ಅಫೀಮನ್ನು ಉಚಿತವಾಗಿ ನೀಡಲಾಯಿತು.
ನಂತರ ದೇವಸ್ಥಾನದ ಮುಂದೆ ಮುಸ್ಲಿಂ ವರ್ತಕರು ವ್ಯಾಪಾರ ಮಾಡಬಾರದು ಎಂಬ ಬೇರೆ ರುಚಿಯ ಅಫೀಮನ್ನು ನೀಡಲಾಯಿತು. ಅದರ ಬೂಸ್ಟರ್ ಡೋಸಾಗಿ ಹಲಾಲ್ ಮತ್ತು ಜಟ್ಕಾ ಕಟ್ ಎಂದು ವಿಂಗಡಿಸಿ ಆ ಅಫೀಮಿನ ರುಚಿಯನ್ನೂ ತೋರಿಸಲಾಯಿತು. ನಂತರ ಇದೀಗ ಮಸೀದಿಯ ಮೈಕ್ನಲ್ಲಿ ಹೇಳುವ ಆಜಾನ್ ಬ್ಯಾನ್ ಮಾಡಬೇಕು ಎಂಬ ಮತ್ತಿನ ರುಚಿಯನ್ನು ಹಿಂದೂಗಳಿಗೆ ತೋರಿಸುತ್ತಿದ್ದಾರೆ. ಜೊತೆಗೆ ಮಾವಿನಹಣ್ಣನ್ನು ಮುಸ್ಲಿಂ ವ್ಯಾಪಾರಿಗಳಿಗೆ ಮಾರಬೇಡಿ, ಅವರನ್ನು ದೂರವಡಿ ಎಂಬ ಮಹಾಮತ್ತಿನ ಮತ್ತೊಂದು ರುಚಿಯನ್ನು ತೋರಿಸುತ್ತಿದ್ದಾರೆ.
ಇದಿಷ್ಟು ಕರ್ನಾಟಕದ ಮಾತಾಯಿತು.
ಇನ್ನು ಬೇರೆ ರಾಜ್ಯ ಅದರಲ್ಲೂ ಉತ್ತರ ಪ್ರದೇಶವನ್ನು ತೆಗೆದುಕೊಂಡರೆ, ಕಾಶಿ ವಿಶ್ವನಾಥ ಕಾರಿಡಾರ್ ಎಂಬ ಒಂದೇ ಒಂದು ಭಾರಿ ಹಿಂದುತ್ವದ ಅಫೀಮನ್ನು ಏಕಕಾಲದಲ್ಲಿ ಇಡೀ ಭಾರತದ ಜನರಿಗೆ ಉಣಬಡಿಸಲಾಯಿತು. ಇದರಿಂದ ಹಿಂದುತ್ವದ ಭಾರಿ ನಶೆ ಏರಿಸಿಕೊಂಡ ಜನರು ಅಮಲಿನಲ್ಲಿ ಪಂಚರಾಜ್ಯಗಳ ಚುನಾವಣೆಯಲ್ಲಿ ತಾವೇನು ಮಾಡುತ್ತಿದ್ದೇವೆಂಬ ಪರಿವೆಯೇ ಇಲ್ಲದೆ ಬಿಜೆಪಿಯನ್ನು ಗೆಲ್ಲಿಸಿದರು.
ಈಗ ಗೊತ್ತಾಯಿತಲ್ಲವೆ? ಧರ್ಮದ ಒಂದೇ ಒಂದು ಅಫೀಮಿನ ವಿವಿಧ ರುಚಿಗಳಿಂದ ಹೇಗೆ ಜನರನ್ನು ಸಮಸ್ಯೆಗಳಿಂದ, ಬೆಲೆಯೇರಿಕೆಯ ಭೂತದಿಂದ ವಿಮುಖರನ್ನಾಗಿಸಿ ರಾಜ್ಯವಾಳುತ್ತಿದ್ದಾರೆಂದು.. ಬರಿ ಧರ್ಮದ ಅಫೀಮಷ್ಟೇ ಅಲ್ಲ, IPL ಹಾಗೂ ಆಗಾಗ ಬೇರೆ ಬೇರೆ ರೀತಿಯ ಕ್ರಿಕೆಟ್ ಅಫೀಮಿನ ಮೂಲಕವೂ ಸಹ ಜನರಿಗೆ ನಶೆಯನ್ನು ಇಂಜೆಕ್ಟ್ ಮಾಡಲಾಗುತ್ತಿದೆ. ಹೀಗಾಗಿ ಜನರು ಸದ್ಯ ಎಲ್ಲ ಸಮಸ್ಯೆಗಳನ್ನು ಮರೆತು ನಶೆಯಲ್ಲಿ ಹಾಯಾಗಿ ವಿಹರಿಸುತ್ತಿದ್ದಾರೆ. ಇಷ್ಟೊಂದು ಸಮಸ್ಯೆಗಳನ್ನು ಸೃಷ್ಟಿಸಿಯೂ ಜನರನ್ನು ಸಂತೋಷದಿಂದಿರುವಂತೆ ಮಾಡುತ್ತಿರುವ ಸರ್ಕಾರಕ್ಕೆ ಒಂದು ಥ್ಯಾಂಕ್ಸ್ ಹೇಳಲೇಬೇಕಲ್ಲವೆ!
ಓಂಪ್ರಕಾಶ್ ನಾಯಕ್, ಹಿರಿಯ ಉಪಸಂಪಾದಕರು, BMG24x7ಲೈವ್ಕನ್ನಡ