OPINION:
ಅಡಾಲ್ಫ್ ಹಿಟ್ಲರ್- 19ನೆಯ ಶತಮಾನ ಕಂಡ ಅತ್ಯಂತ ದುಷ್ಟ ಸರ್ವಾಧಿಕಾರಿ. ಎರಡು ಮಹಾಯುದ್ಧಗಳಿಗೆ ಕಾರಣನಾದ ಹಿಟ್ಲರ್ ಲಕ್ಷಾಂತರ ಜನರ ಸಾವಿಗೆ ಕಾರಣನಾದ. ವರ್ಣಭೇದ ನೀತಿಯ ಪರಕಾಷ್ಠೆಯನ್ನು ತಲುಪಿದ್ದ ಹಿಟ್ಲರ್ ಯಹೂದಿಗಳ ಮಾರಣಹೋಮಕ್ಕೆ ಆದೇಶಿಸಿದ್ದ. ಅವನ ಬಲಗೈ ಬಂಟ ಹಿಮ್ಲರ್ ಹಿಟ್ಲರ್ನ ಈ ಆದೇಶವನ್ನು ಚಾಚೂ ತಪ್ಪದೆ ಪಾಲಿಸಿದ್ದ. ಕಡೆಗೆ ಹಿರೊಷಿಮಾ ನಾಗಾಸಾಕಿಗಳ ಮೇಲೆ ಅಮೆರಿಕಾ ಅನಿವಾರ್ಯವಾಗಿ ಅಣುಬಾಂಬ್ ಹಾಕುವ ಸನ್ನಿವೇಶ ಸೃಷ್ಟಿಸಿ ಇಡೀ ಎರಡು ನಗರಗಳನ್ನು ಸ್ಮಶಾನವಾಗಿದ್ದಕ್ಕೂ ಹಿಟ್ಲರನೇ ಕಾರಣ. ಹೀಗೆ 24 ವರ್ಷಗಳ ಕಾಲ ಜಗತ್ತನ್ನು ಕಾಡಿದ ಹಿಟ್ಲರನ ಕ್ರೌರ್ಯವನ್ನು ಜನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಆದ್ದರಿಂದಲೇ ಇಂದಿಗೂ ಕ್ರೌರ್ಯದ ಉದಾಹರಣೆಗಾಗಿ ಹಿಟ್ಲರ್ ಹೆಸರನ್ನು ತೆಗೆದುಕೊಳ್ಳುವುದುಂಟು. ಈಗ ನಾನು ಹಿಟ್ಲರ್ನ ಪ್ರಸ್ತಾಪ ಮಾಡಲು ಕಾರಣ, ಇಂದು ಅಡಾಲ್ಫ್ ಹಿಟ್ಲರ್ ಮತ್ತೊಂದು ಹೆಸರಿನಲ್ಲಿ ಮತ್ತೆ ಕಾಣಿಸಿಕೊಂಡಿದ್ದಾನೆ. ಅವನೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್.
ಹೌದು ಸರಿಸುಮಾರು ಹಿಟ್ಲರನ ವಯೋಮಾನದಲ್ಲೇ ಅವನಿಗಿಂತ ಒಂದು ಪಟ್ಟು ಹೆಚ್ಚು ಕ್ರೂರಿಯಾಗಿ ಇಡೀ ಜಗತ್ತನ್ನೇ ಸುಟ್ಟುಬಿಡಲು ನೋಡುತ್ತಿರುವ ಪುಟಿನ್ ತಲೆತಿರುಕತನಕ್ಕೆ ಅಮೆರಿಕಾ ಸೇರಿದಂತೆ ಇಡೀ ಪ್ರಪಂಚವೇ ಬೆಚ್ಚಿಬಿದ್ದಿದೆ. ಮೊದಲು ತನ್ನ ದೇಶದ ವಿರೋಧ ಪಕ್ಷದವರನ್ನು, ರಾಜಕೀಯ ವಿರೋಧಿಗಳನ್ನು ಮಾತ್ರ ಗುಟ್ಟಾಗಿ ನಿರ್ದಾಕ್ಷಿಣ್ಯವಾಗಿ ಕೊಲ್ಲಿಸುತ್ತಿದ್ದ ಪುಟಿನ್, ಅಲ್ಲಿ ಸಿಕ್ಕ ಯಶಸ್ಸಿನಿಂದ 23 ವರ್ಷಗಳ ಕಾಲ ರಷ್ಯಾದ ಪರೋಕ್ಷ ಸರ್ವಾಧಿಕಾರಿಯಾಗಿ ಅಧಿಕಾರ ಚಲಾಯಿಸುತ್ತಿದ್ದಾನೆ.ಹೆಸರಿಗೆ ಮಾತ್ರ ಪ್ರಜಾಪ್ರಭುತ್ವ ದೇಶವೆನಿಸಿಕೊಂಡಿರುವ ರಷ್ಯಾದಲ್ಲಿ ಇಂದು ಪುಟಿನ್ಗೆ ಎದುರು ಮಾತಾಡುವವರು ಯಾರೂ ಇಲ್ಲ. ಹೀಗೆ ತನ್ನ ಸ್ವಂತ ದೇಶದಲ್ಲಿ ಸರ್ವಾಧಿಕಾರಿಯಾದ ಪುಟಿನ್ ಜಗತ್ತಿನ ಸರ್ವಾಧಿಕಾರಿಯಾಗುವ ಕನಸು ಕಾಣುತ್ತಿದ್ದಾನೆ.
ಹಿಂದೊಮ್ಮೆ ಅಖಂಡ ರಷ್ಯಾದ ಭಾಗವಾಗಿದ್ದು, ನಂತರ ರಷ್ಯಾದಿಂದ ಸಿಡಿದು ದೂರವಾಗಿ ಹೊಸ ದೇಶಗಳಾದ ಉಕ್ರೇನ್ ಮತ್ತಿತರ ದೇಶಗಳನ್ನು ತನ್ನ ನಿಯಂತ್ರಣದಲ್ಲಿರಿಸಿಕೊಳ್ಳುವುದು ಪುಟಿನ್ ಮಹಾತ್ವಾಕಾಂಕ್ಷೆ. ಇದರ ಫಲವಾಗಿಯೇ ಏಳು ವರ್ಷಗಳ ಮುಂಚೆ ಉಕ್ರೇನ್ನ ಭಾಗವಾಗಿದ್ದ ಕ್ರಿಮಿಯಾವನ್ನು ಯುದ್ಧದ ಮೂಲಕ ವಶಪಡಿಸಿಕೊಂಡಿದ್ದು. ಇಂದು ಉಕ್ರೇನ್ ಅಧ್ಯಕ್ಷ ಝಿಲೆನ್ಸ್ಕಿ ತನ್ನ ಮಾತು ಕೇಳುತ್ತಿಲ್ಲವೆಂಬ ಒಂದೇ ಕಾರಣಕ್ಕೆ ಉಕ್ರೇನ್ ಸರ್ವನಾಶಕ್ಕೆ ಪಣ ತೊಟ್ಟಿದ್ದಾನೆ.
ಉಕ್ರೇನ್ ನ್ಯಾಟೋ ಸೇರಕೂಡದು ಎಂದು ಅಬ್ಬರಿಸಿದ್ದ ಪುಟಿನ್ ಮಾತಿಗೆ ಯುದ್ದಕ್ಕೆ ಮೊದಲು ಝಿಲೆನ್ಸ್ಕಿ ಸೊಪ್ಪು ಹಾಕಿರಲಿಲ್ಲ. ಆದರೆ ಯಾವಾಗ ಪುಟಿನ್ ಉಕ್ರೇನ್ ಮೇಲೆ ಸರ್ವನಾಶದ ದಾಳಿ ಆರಂಭಿಸಿ 23 ದಿನಗಳ ನಂತರ ತಮ್ಮ ದೇಶ ನ್ಯಾಟೋ ಸೇರುವುದಿಲ್ಲ ಎಂದು ಹೇಳಿಕೆ ಕೊಟ್ಟ. ಆದರೆ ಅಷ್ಟೊತ್ತಿಗಾಗಲೇ ಪುಟಿನ್ ರಕ್ತದಾಹ ಅತಿ ಹೆಚ್ಚಾಗಿತ್ತು. ಝಿಲೆನ್ಸ್ಕಿ ನ್ಯಾಟೋ ಸೇರದಿರುವ ಹೇಳಿಕೆ ಕೊಡಲು ಕಾರಣ ಅಮೆರಿಕಾ ಸೇರಿದಂತೆ ನ್ಯಾಟೊ ಸಂಘಟನೆಯ ಯಾವೊಂದು ದೇಶಗಳೂ ಉಕ್ರೇನ್ ಸಹಾಯಕ್ಕೆ ಬರಲೇ ಇಲ್ಲ. ಅವೇನಿದ್ದರೂ ವ್ಯಾಪಾರ ವಾಣಿಜ್ಯ ನಿರ್ಭಂಧನೆ ಮಾಡುತ್ತ ಕಾಲಾಹರಣ ಮಾಡಿಬಿಟ್ಟವು. ರಷ್ಯಾ ಬದ್ಧದ್ವೇಶಿಯಾದ ಅಮೆರಿಕಾ ಸಹ ಉಕ್ರೇನ್ ಸಹಾಯಕ್ಕೆ ನೇರವಾಗಿ ಪ್ರವೇಶಿಸಲೇ ಇಲ್ಲ. ಏಕೆ?
ಇಲ್ಲಿ ಅಮೆರಿಕಾಗೆ ರಷ್ಯಾದ ಪುಟಿನ್ ಮನಸ್ಥಿತಿಯ ಮೇಲೆ ಎಳ್ಳಷ್ಟೂ ನಂಬಿಕೆಯಿಲ್ಲ. ಏಕೆಂದರೆ ಯುದ್ಧದ ಪ್ರಾರಂಭದ ದಿನದಿಂದಲೂ ಉಕ್ರೇನ್ಗೆ ಯಾವುದೇ ದೇಶ ಬೆಂಬಲಿಸಿದರೆ, ಯುದ್ಧಕ್ಕೆ ಸಹಕರಿಸಿದರೆ ಅವರ ಮೇಲೆ ಅಣುಬಾಂಬ್ ದಾಳಿ ಮಾಡಲು ತಾನು ಹಿಂಜರಿಯುವುದಿಲ್ಲ ಎಂದು ಪುಟಿನ್ ಸಾರಿ ಸಾರಿ ಹೇಳಿದ್ದು. ಇದಕ್ಕೆ ಪೂರಕವಾಗಿಯೆಂಬಂತೆ ಡೂಮ್ಡೆ ವಿಮಾನವನ್ನು ತಯಾರಿರಲು ಹೇಳಿದ್ದು. ತನ್ನ ಕುಟುಂಬವನ್ನು ದೂರದ ದೇಶವೊಂದರ ಬಂಕರ್ನಲ್ಲಿ ಸೇಫ್ ಮಾಡಿದ್ದು. ತನ್ನ ಪ್ರೇಯಸಿಯರನ್ನು ಪಕ್ಕದ ದೇಶಕ್ಕೆ ಕಳುಹಿಸಿದ್ದು.
ಅಮೆರಿಕಾ ಹೆದರಿಕೆಗೆ ಇದಿಷ್ಟೇ ಕಾರಣವಲ್ಲ. ಪುಟಿನ್ ಮನಸ್ಥಿತಿ ಸದ್ಯಕ್ಕೆ ಹಿಟ್ಲರ್ ಕೊನೆಗಾಲದಲ್ಲಿನ ಮನಸ್ಥಿತಿಯನ್ನೇ ಹೋಲುತ್ತಿದೆಯೆಂಬ ವರದಿಗಳು ಬರತೊಡಗಿದ್ದು ಅಮರಿಕಾಗೆ ನಿದ್ದೆಗೆಡಿಸಿದೆ. ಹಿಟ್ಲರ್ ಎರಡನೇ ಮಹಾಯುದ್ಧದ ಕೊನೆಕೊನೆಯಲ್ಲಿ ತನ್ನ ಸೇನೆ ಸೋಲಲು ಪ್ರಾರಂಭಿಸಿದಾಗ ನಿಮಿಷಕ್ಕೊಂಡು ವೈರುದ್ಧ್ಯವಾದ ಆಜ್ಷೆಗಳನ್ನು ಕೊಡುತ್ತಿದ್ದನಂತೆ. ನನ್ನ ನಂತರ ಜಗತ್ತು ಸರ್ವನಾಶವಾಗಲಿ ಎಂಬ ಉಕ್ತಿ ಹಿಟ್ಲರ್ನ ಬಾಯಲ್ಲಿ ಬಂದಿತ್ತಂತೆ. ಇದೀಗ ಪುಟಿನ್ ಸಹ ಅಣ್ವಸ್ತ್ರ ಪ್ರಯೋಗಕ್ಕೆ ಸಿದ್ಧವಾಗಿರುವಂತೆ ತನ್ನ ಸೇನೆಗೆ ಸೂಚನೆ ನೀಡಿದ್ದಾನೆ. ಇಲ್ಲಿ ಪುಟಿನ್ ಈ ಸೂಚನೆ ನೀಡಿದ್ದಕ್ಕೆ ವಿಶೇಷ ಮಹತ್ವವಿರುವುದು ಏಕೆಂದರೆ, ಅಣ್ವಸ್ತ್ರವಿರುವುದು ರಷ್ಯಾ ಬಳಿಯಷ್ಟೇ ಅಲ್ಲ, ಅಮೆರಿಕಾದ ಬಳಿಯೂ ಸಾಕಷ್ಟು ಇವೆ. ಜಗತ್ತಿನ ಅರ್ಧದಷ್ಟು ದೇಶಗಳ ಬಳಿ ಅಣ್ವಸ್ತ್ರವಿದೆ. ಹಾಗಾದರೆ ರಷ್ಯಾದ ಅಣ್ವಸ್ತ್ರ ಬೆದರಿಕೆಗೆ ಜಗತ್ತು ಹೆದರುತ್ತಿರುವುದೇಕೆ?
ಇಲ್ಲಿ ನಾವು ಸಿನಿಮಾಗಳಲ್ಲಿಯ ವಿಲನ್ ಹಾಗೂ ಹೀರೋಗಳ ಉದಾಹರಣೆ ನೋಡಬಹುದು. ಹೀರೋ ಹಾಗೂ ವಿಲನ್ ಇಬ್ಬರ ಕೈಯಲ್ಲೂ ಪಿಸ್ತೂಲ್ ಇರುತ್ತದೆ. ವಿಲನ್ ಹೀರೋಗೆ ನಿನ್ನ ಪಿಸ್ತೂಲು ಕೆಳಗಡೆ ಹಾಕು, ಇಲ್ಲದಿದ್ದರೆ ನಿಮ್ಮವರನ್ನು ಕೊಲ್ಲುತ್ತೇನೆ ಎನ್ನುತ್ತಾನೆ. ಹೀರೋ ಅವನು ಹಾಗೊಮ್ಮೆ ತಮ್ಮವರನ್ನು ಕೊಂದರೆ ತಾನೂ ಅವರ ಕಡೆಯವರನ್ನು ಕೊಲ್ಲುವ ಅವಕಾಶವಿದ್ದರೂ, ಎರಡೂ ಕಡೆ ಹೆಣಗಳು ಬೀಳುವುದು ಬೇಡವೆಂದುಕೊಂಡು ತನ್ನ ಕೈಯಲ್ಲಿನ ಪಿಸ್ತೂಲು ಕೆಳಗಡೆ ಹಾಕುತ್ತಾನೆ. ವಿಲನ್ ವಿಝ್ರಂಭಿಸುತ್ತಾನೆ! ಇಲ್ಲಿ ದೇಶಗಳ ಮಟ್ಟಿಗೆ ನಡೆಯುತ್ತಿರುವುದೂ ಇದೆ! ಇಲ್ಲಿ ವಿಲನ್ ಜಾಗದಲ್ಲಿ ರಷ್ಯಾ ಇದ್ದರೆ, ಹೀರೋ ಜಾಗದಲ್ಲಿ ಅಮೆರಿಕಾ, ಇಂಗ್ಲೆಂಡ್ ಮುಂತಾದ ದೇಶಗಳಿವೆ. ರಷ್ಯಾ ಅಣುಬಾಂಬ್ ಹಾಕಿದರೆ ಅಮೆರಿಕಾ ಇಂಗ್ಲೆಂಡ್ಗಳು ಅಣ್ವಸ್ತ್ರ ಪ್ರಯೋಗಿಸಲು ಆಗುವುದಿಲ್ಲವೆಂತಲ್ಲ. ಆದರೆ ಇದರಿಂದ ಇಡೀ ಜಗತ್ತೇ ಸ್ಮಶಾನವಾಗುತ್ತದೆ ಎಂಬ ಸತ್ಯ ಈ ದೇಶಗಳು ಹೆದರಿ ನಡುಗಲು ಕಾರಣವಾಗಿರುವುದು.
ಆದರೆ ಪುಟಿನ್ಗೆ ಈ ಭಯವಿಲ್ಲ. ಏಕೆಂದರೆ ಇಡೀ ಪ್ರಪಂಚವೇ ಸ್ಮಶಾನವಾದರೂ ತಾನೊಬ್ಬ ಚೆನ್ನಾಗಿದ್ದರೆ ಸಾಕು ಎಂಬ ಮನಸ್ಥಿತಿ ಪುಟಿನ್ದು. ಹೀಗಾಗಿ ಇಂದು ಪುಟಿನ್ ಹಿಟ್ಲರನನ್ನು ಮೀರಿಸಿದ ಪೈಶಾಚಿಕ ಸರ್ವಾಧಿಕಾರಿಯಾಗಿದ್ದಾನೆ ಎಂದರೆ ತಪ್ಪಿಲ್ಲ. ದುರಂತವೆಂದರೆ ವಿಶ್ವದ ಮುಕ್ಕಾಲು ಭಾಗ ದೇಶಗಳು ಪುಟಿನ್ನ ಪೈಶಾಚಿಕ ಕೃತ್ಯವನ್ನು ಖಂಡಿಸಿ, ರಷ್ಯಾದೊಂದಿಗೆ ವಾಣಿಜ್ಯ, ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿದ್ದರೆ, ಭಾರತ ಮಾತ್ರ ಅಲಿಪ್ತ ನೀತಿಯ ಹೆಸರಿನಲ್ಲಿ ರಷ್ಯಾದ ಜೊತೆ ಇನ್ನೂ ಸುಮಧುರ ಸಂಬಂಧವನ್ನೇ ಹೊಂದಿದೆ! ಪಕ್ಕದ ಮನೆಗೆ ಬೆಂಕಿ ಬಿದ್ದರೆ ಅಲ್ಲಿರುವ ಗಳ ಹೀರಿಕೊಂಡರು ಎಂಬ ಗಾದೆಯಂತೆ ಭಾರತ ಪ್ರಪಂಚವೇ ಸಂಕಷ್ಟದಲ್ಲಿರುವಾಗ, ಆ ಸಂಕಷ್ಟಕ್ಕೆ ದುಷ್ಟ ದೇಶವೊಂದು ಕಾರಣವಾಗಿರುವಾಗ ಆ ದೇಶದ ಆರ್ಥಿಕತೆಯನ್ನು ಮೇಲೆತ್ತುವಂತೆ ರಷ್ಯಾದ ಜೊತೆ ಕಚ್ಚಾ ತೈಲ ವ್ಯಾಪಾರ ಮಾಡುತ್ತಿದೆ! ರಷ್ಯಾದಿಂದ ಕಡಿಮೆ ದರದಲ್ಲಿ ತೈಲ ಖರೀದಿಸುತ್ತಿದೆ. ಆದರೆ ಹೀಗೆ ವಿಶ್ವದ ವಿರೋಧದ ಮಧ್ಯೆ ಕಡಿಮೆ ದರದಲ್ಲಿ ತೈಲ ಖರೀದಿಸಿಯೂ ಸಹ ಭಾರತದಲ್ಲಿ ತೈಲದ ದರವನ್ನು ಹೆಚ್ಚಿಸಿದ್ದು ಜನರನ್ನು ಕಕ್ಕಾಬಿಕ್ಕಿಯಾಗಿಸಿದೆ. ಇರಲಿ, ಸದ್ಯಕ್ಕೆ ವಿಷಯಾಂತರ ಮಾಡುವುದು ಬೇಡ!
ರಷ್ಯಾದ ಅಧ್ಯಕ್ಷ ಪುಟಿನ್ಗೆ ಉಕ್ರೇನ್ ಮೇಲಿನ ವಿಜಯ ತಾನಂದುಕೊಂಡಷ್ಟು ಸುಲಭವಲ್ಲವೆಂಬುದು ಯುದ್ಧದ 35 ದಿನಗಳ ನಂತರ ಮನವರಿಕೆಯಾಗಿದೆ. ಆದ್ದರಿಂದಲೇ ರಷ್ಯಾದ ಸಾವಿರಾರು ಸೈನಿಕರು ಪ್ರಾಣಕಳೆದುಕೊಂಡ ನಂತರ, ಸಿರಿಯಾದಿಂದ 16 ಸಾವಿರ ಬಾಡಿಗೆ ಸೈನಿಕರನ್ನು ಕರೆತಂದಿದ್ದಾನೆ. ಅವರಲ್ಲಿ ಯುದ್ಧದ ಮುಂಚೂಣಿಯಲ್ಲಿ ಯುದ್ಧ ಮಾಡುವವರಿಗೆ 6000 ಡಾಲರ್ ಹಾಗೂ ಯುದ್ಧದ ಸ್ಥಳದಿಂದ ಹಿಂದಿದ್ದು ಹೋರಾಡುವವರಿಗೆ 3000 ಡಾಲರ್ ಕೊಡುವುದಾಗಿ ಹೇಳಿದ್ದಾನೆ. ಇಷ್ಟೇ ಅಲ್ಲದೆ ಯುದ್ಧದಲ್ಲಿ ಸತ್ತ ವಿದೇಶಿ ಯೋಧರ ಮನೆಯವರಿಗೆ 50ಸಾವಿರ ಡಾಲರ್ ಪರಿಹಾರ ಕೊಡುವುದಾಗಿಯೂ ಸಹ ಆಮಿಷ ತೋರಿದ್ದಾನೆ. ಮೊದಲೆ ಸಿರಿಯಾದಲ್ಲಿ ಊಟಕ್ಕಿಲ್ಲದೆ ಸಾಯುತ್ತಿರುವ ಜನರು ತುತ್ತು ಅನ್ನದ ಆಸೆಗೆ ರಷ್ಯಾ ಸೈನ್ಯ ಸೇರುತ್ತಿದ್ದಾರೆ.
ಇಷ್ಟೆಲ್ಲ ಬೆಳವಣೆಗೆಯ ನಂತರವೂ ಪುಟಿನ್ ಯುದ್ಧ ನಿಲ್ಲಿಸುವ ಮನಸ್ಸು ಮಾಡುತ್ತಿಲ್ಲ. ಉಕ್ರೇನ್ ರಾಜಧಾನಿ ಕೈವ್ ಕೈವಶವಾಗದ್ದರಿಂದ, ಇದೀಗ ರಷ್ಯಾದಿಂದ ಕೇಳಲ 50 ಕಿಲೋಮಿಟರ್ ದೂರದಲ್ಲಿರುವ ರಷ್ಯಾ ಗಡಿಗೆ ಸಮೀದಲ್ಲಿರುವ ಉಕ್ರೇನ್ ನಗರವಾದ ಮಾರಿಯೋಪೊಲ್ ನಗರವನ್ನು ಕೈವಶ ಮಾಡಿಕೊಳ್ಳುವತ್ತ ಗಮನ ಹರಿಸಿದ್ದಾನೆ. ಹಾಗೆಯೇ ಡಾನ್ಬಾಸ್ಕ್ಅನ್ನೂ ಸಹ ವಶಪಡಿಸಿಕೊಳ್ಳಲು ಹೊರಟಿದ್ದಾನೆ. ಆದರೆ ಯುದ್ಧದಲ್ಲಿ ನೇರ ಜಯ ಸಿಗದ ಕಾರಣ ಕೈವ್, ಖಾರ್ಕೀವ್, ಮಾರಿಯೋಪೋಲ್ ಮುಂತಾದ ನಗರಗಳ ನಾಗರಿಕ ಪ್ರದೇಶಗಳ ಮೇಲೆ, ಅದರಲ್ಲೂ ಆಸ್ಪತ್ರೆಗಳ, ಶಾಲೆಗಳ ಮೇಲೆ ವೈಮಾನಿಕ ದಾಳಿಯನ್ನು ಮಾಡುತ್ತಿದ್ದಾನೆ. ಇದುವರೆಗೂ ಈ ದಾಳಿಯಿಂದ ಸಾವಿರಾರು ನಾಗರಿಕರು ಸಾವಿಗೀಡಾಗಿದ್ದಾರೆ. ಆದರೆ ಪುಟಿನ್ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ರತ್ನಗಂಬಳಿಯ ಮೇಲೆ ವೈಭವದ ಜೀವನ ನಡೆಸಿದ್ದಾನೆ.
ಅಮೆರಿಕ ಅಥವ ನ್ಯಾಟೋ ದೇಶಗಳ ಒಂದೇ ಒಂದು ಸಣ್ಣ ತಪ್ಪು ಹೆಜ್ಜೆ 3ನೇ ವಿಶ್ವಯುದ್ಧಕ್ಕೆ ಕಾರಣವಾಗುವುದರಲ್ಲಿ ಸಂದೇಹವಿಲ್ಲ. ಹೀಗೆ 3ನೇ ವಿಶ್ವಯುದ್ಧವಾದರೆ ಅದು ಅಣುಯುದ್ಧವೆ ಎಂದು ಪುಟಿನ್ ಈಗಲೇ ಕಡ್ಡಿತುಂಡು ಮಾಡಿದಂತೆ ಹೇಳಿಬಿಟ್ಟಿದ್ದಾನೆ. ವಿಶ್ವ ಎರಡು ಹೋಳಾದರೆ, ರಷ್ಯಾ ಪರ ಇರುವ ದೇಶಗಳೆಂದರೆ ಮತ್ತೊಂದು ಸೂಪರ್ ಪವರ್ ಆದ ಚೀನಾ,ಪಾಕಿಸ್ತಾನ ಹಾಗು ಅಮೆರಿಕಾದ ಬದ್ಧವೈರಿಯಾದ ಉತ್ತರ ಕೊರಿಯಾ. ಇವೆಲ್ಲಾ ದೇಶದ ಬಳಿಯೂ ಅಣ್ವಸ್ತ್ರಗಳಿರುವುದು ಹಾಗೂ ಇಲ್ಲೆಲ್ಲ ಮುಕ್ಕಾಲುಪಾಲು ಸರ್ವಾಧಿಕಾರಿ ಆಳ್ವಿಕೆಯಿರುವುದು ಜಗತ್ತನ್ನು ಚಿಂತೆಗೀಡು ಮಾಡಿದೆ. ಏಕೆಂದರೆ ಕೊರಿಯಾದ ಕಿಮ್ ಆಗಲೇ 1100 ಕಿಲೋಮಿಟರ್ ಕ್ರಮಿಸಬಲ್ಲ ಖಂಡಾಂತರ ಕ್ಷಿಪಣಿಯ ಯಶಸ್ವಿ ಪರಿಕ್ಷೆಯನ್ನು ಮೊನ್ನೆಮೊನ್ನೆಯಷ್ಟೇ ಮಾಡಿದ್ದಾನೆ.
ಆದ್ದರಿಂದಲೇ ಅಮೆರಿಕಾ ರಷ್ಯಾದ ವಿರುದ್ಧ ತೊಡೆತಟ್ಟಿದರೆ, ಇವೆಲ್ಲಾ ದೇಶಗಳು ರಷ್ಯಾ ಪರವಹಿಸಿ ಬರುವುದರಲ್ಲಿ ಸಂಶಯವಿಲ್ಲ. ಹಾಗೇನಾದರೂ 3ನೇ ವಿಶ್ವಯುದ್ಧ ಶುರುವಾದರೆ ಭಾರತವೂ ಹೆಚ್ಚುಕಾಲ ಅಲಿಪ್ತವಾಗಿರಲು ಸಾಧ್ಯವಿಲ್ಲ. ಹಾಗಾಗಿ ನಂತರ ಸಂಭವಿಸಬಹುದಾದ ಅಣುಬಾಂಬ್ ದಾಳಿಗೆ ಜಗತ್ತಿನ ಅರ್ಧಕ್ಕಿಂತಲೂ ಹೆಚ್ಚಿನ ದೇಶಗಳು ಬೆಂದು ಹೋಗಬಹುದು. ಆ ಸಾಲಿನಲ್ಲಿ ಭಾರತವೂ ಸೇರಬಹುದು. ಇದೆಲ್ಲವನ್ನೂ ತಡೆಯಬೇಕಾದರೆ ರಷ್ಯಾ ವಿರುದ್ಧ ಇಡೀ ಜಗತ್ತೇ ಒಗ್ಗಟ್ಟಾಗಿ ವಾಣಿಜ್ಯ ನಿರ್ಭಂಧ ಹೇರುವುದೊಂದೇ ದಾರಿ. ಓಂಪ್ರಕಾಶ್ ನಾಯಕ್, ಹಿರಿಯ ಉಪಸಂಪಾದಕ, BMG24x7ಲೈವ್ಕನ್ನಡ