OPINION:
ಪ್ರಪಂಚದ ಹಲವು ವಿನಾಶಗಳ ಬಗ್ಗೆ, ಬರಿ ವಿನಾಶವೇನು, ಪ್ರಪಂಚ ಪ್ರಳಯದ ಬಗ್ಗೆಯೇ ಹಲವು ಪ್ರಸಿದ್ಧ ಭವಿಷ್ಯಕಾರರು ನೂರಾರು ವರ್ಷಗಳ ಹಿಂದೆಯೇ ಭವಿಷ್ಯ ಹೇಳಿದ್ದಾರೆ. ಭವಿಷ್ಯ ಹಣೆಬರಹ ಎಲ್ಲ ಸುಳ್ಳು ಎಂದು ಹೇಳುವ ಎಷ್ಟೋ ನಾಸ್ತಿಕರೂ ಅಚ್ಚರಿಪಡುವಂತೆ ಈ ಪ್ರಸಿದ್ಧ ಭವಿಷ್ಯಕಾರರು ಹೇಳಿರುವ ಹಲವು ಭವಿಷ್ಯಗಳು ನೂರಾರು ವರ್ಷಗಳ ನಂತರ ನಿಜವಾಗಿವೆ.
ಹೀಗೆ ಪ್ರಪಂಚದ ಆಗುಹೋಗುಗಳ ವಿನಾಶಗಳ ಬಗ್ಗೆ ಭವಿಷ್ಯ ಹೇಳಿರುವ ಪ್ರಸಿದ್ಧ ಭವಿಷ್ಯಕಾರರಲ್ಲಿ ನಾಸ್ಟ್ರಾಡಮಸ್ ಒಬ್ಬರಾದರೆ ಮತ್ತೊಬ್ಬ ಭವಿಷ್ಯಕಾರ್ತಿ ಬಾಬಾ ವಂಗಾ. ಬಲ್ಗೇರಿಯಾದ ಈ ಅಂಧ ಮಹಿಳೆ ಹೇಳಿರುವ ಎಷ್ಟೋ ಭವಿಷ್ಯಗಳು ದಶಕಗಳ ನಂತರ ನಿಜವಾಗಿ, ಪ್ರಪಂಚವನ್ನು ನಿಬ್ಬೆರಗಾಗಿಸಿದೆ. 1911ರಲ್ಲಿ ಹುಟ್ಟಿದ ಬಾಬಾ ವಂಗಾಳಿಗೆ ದುರದೃಷ್ಟವಶಾತ್ ಅವಳ 11 ನೆಯ ವಯಸ್ಸಿನಲ್ಲಿಯೇ ಕಣ್ಣುಗಳೆರಡೂ ಹೊರಟುಹೋದವು. 1996ರವರೆಗೂ ಜೀವಿಸಿದ್ದ ಬಾಬಾ ವಂಗಾ 5079ನೇ ವರ್ಷದವರೆಗಿನ ಭವಿಷ್ಯವನ್ನು ಹೇಳಿಹೋಗಿದ್ದಾಳೆ. ಅಲ್ಲಿಂದ ಮುಂದೆ ಅವಳು ಭವಿಷ್ಯ ಹೇಳಿಲ್ಲ. ಏಕೆಂದರೆ ಅವಳ ಪ್ರಕಾರ 5079ರಲ್ಲಿ ಪ್ರಳಯವಾಗಿ ಸರ್ವನಾಶವಾಗಲಿದೆ.
ಈ ಬಾಬಾ ವಂಗಾ ಹೇಳಿರುವ ಹಲವು ಪ್ರಮುಖ ಭವಿಷ್ಯಗಳು ನಿಜವಾಗಿವೆ. ಅವುಗಳಲ್ಲಿ 2021ರಲ್ಲಿ ಪ್ರಪಂಚದ ಹಲವು ದೇಶಗಳಲ್ಲಿ ಮಿಡತೆಗಳು ಕೋಟಿ ಕೋಟಿ ಸಂಖ್ಯೆಗಳಲ್ಲಿ ದಾಳಿಯಿಡಲಿವೆ ಎಂದು ಹೇಳಿದ್ದಳು. ಅದು ನಿಜವಾಗಿ ಹಲವು ದೇಶಗಳ ರೈತರು ಈ ಕೋಟ್ಯಾಂತರ ಮಿಡತೆಗಳ ದಾಳಿಯಿಂದ ಕಂಗಾಲಾಗಿದ್ದು ಈಗ ಇತಿಹಾಸ. 2004ರಲ್ಲಿ ವಿನಾಶಕಾರಿ ಸುನಾಮಿ ಬರುತ್ತದೆ ಎಂದು ಬಾಬಾ ವಂಗಾ ಹೇಳಿದ್ದ ಭವಿಷ್ಯ ನಿಜವಾಗಿದ್ದು ಎಲ್ಲರಿಗೂ ಗೊತ್ತು. ಹಾಗೆಯೇ ಇಂಗ್ಲೆಂಡಿನ ರಾಜಕುಮಾರಿ ಡಯಾನಾ ದುರಂತ ಸಾವಿನ ಬಗ್ಗೆ ಬಾಬಾ ವಂಗಾ ಹೇಳಿದ ಭವಿಷ್ಯವೂ ನಿಜವಾಗಿದೆ.
ಹಾಗೆಂದು ಬಾಬಾ ವಂಗಾ ಹೇಳಿದ ಎಲ್ಲ ಭವಿಷ್ಯಗಳೂ ನಿಜವಾಗಿವೆಯೆಂದಲ್ಲ. ಅಮೆರಿಕಾ ಅಧ್ಯಕ್ಷರ ಬಗ್ಗೆ ಹೇಳಿದ ಭವಿಷ್ಯವೊಂದು ಸುಳ್ಳಾಗಿದೆ. ಅಮೆರಿಕಾದ 44ನೇ ಅಧ್ಯಕ್ಷನೆ ಅಲ್ಲಿನ ಕೊನೆಯ ಅಧ್ಯಕ್ಷನಾಗಲಿದ್ದಾನೆ ಎಂದು ಬಾಬಾ ಹೇಳಿದ್ದಳು. ಆದರೆ 44ನೇ ಅಧ್ಯಕ್ಷರಾದ ಬರಾಕ್ ಒಬಾಮಾ ಕೊನೆಯ ಅಧ್ಯಕ್ಷರೇನೂ ಆಗಲಿಲ್ಲ.
ಆದರೆ ಬಾಬಾ ವಂಗಾ ಹೇಳಿದ ಮುಕ್ಕಾಲು ಭಾಗ ಭವಿಷ್ಯಗಳು ನಿಜವಾಗಿರುವುದರಿಂದ ಇದೀಗ ರಷ್ಯಾ ಉಕ್ರೇನ್ ಯುದ್ಧದ ಸಮಯದಲ್ಲಿ ಅವಳು ಹೇಳಿರುವ ಭವಿಷ್ಯವೊಂದು ನಿಜವಾದರೆ ಏನು ಗತಿ ಎಂದು ಜಗತ್ತಿನ ಹಲವರ ನಿದ್ದೆಗೆಡಿಸಿದೆ.
ಬಾಬಾ ವಂಗಾ ಹೇಳಿರುವ ಈ ಭವಿಷ್ಯವೆಂದರೆ ಈಗ ನಡೆಯುತ್ತಿರುವ ಯುದ್ಧ 3ನೇ ವಿಶ್ವಯುದ್ಧವಾಗಿ ಮಾರ್ಪಟ್ಟು ಅದರಲ್ಲಿ ರಷ್ಯಾ ಜಗತ್ತನ್ನೇ ಆಳುತ್ತದೆ ಎಂಬುದು. ಅವಳ ಈ ಭವಿಷ್ಯದ ಪ್ರಕಾರ ಈ ಯುದ್ಧದ ನಂತರ ಪ್ರಪಂಚದ ಎಲ್ಲ ದೇಶಗಳು ಮಂಜುಗಡ್ಡೆಯಂತೆ ತಮ್ಮ ಅಸ್ತಿತ್ವವನ್ನು ಕಳೆದುಕೊಂಡರೆ, ರಷ್ಯಾ ಮಾತ್ರ ಯಾವುದೇ ತೊಂದರೆಗೊಳಗಾಗದ ಜಗತ್ತಿನ ಏಕೈಕ ರಾಷ್ಟ್ರವಾಗುತ್ತದೆ. ರಷ್ಯಾದ ಅಧ್ಯಕ್ಷ ಪುಟಿನ್ ಜಗತ್ತಿನ ಒಡೆಯನಾಗುತ್ತಾನೆ. ರಷ್ಯಾದ ವೈಭವ, ವ್ಲಾಡಿಮಿರ್ ವೈಭವ ಉಳಿದುಕೊಳ್ಳುತ್ತದೆ. ಬಾಬಾ ವಂಗಾಳ ಈ ಭವಿಷ್ಯವಾಣಿಯನ್ನು ಅಮೆರಿಕಾದ ದಿ ಡೇಲಿ ಪೋಸ್ಟ್ ವರದಿ ಮಾಡಿದೆ.
ಓಂಪ್ರಕಾಶ್ ನಾಯಕ್, 24x7 ಲೈವ್ ಕನ್ನಡ