OPINION:
ಭಾರತದಲ್ಲಿ ಒಂದು ಸ್ಲೋಗನ್ ಆಗಾಗ ಮೊಳಗುತ್ತಿರುತ್ತದೆ.. 'ಬದಲಾಗುತ್ತಿದೆ ಭಾರತ' ಹೌದು, ಖಂಡಿತ ಭಾರತ ಬದಲಾಗುತ್ತಿದೆ, ಬರೀ ಭಾರತವಲ್ಲ, 21ನೆಯ ಈ ಶತಮಾನದಲ್ಲಿ ಇಡೀ ಪ್ರಪಂಚವೇ ಬದಲಾಗುತ್ತಿದೆ. ಈ ಬದಲಾದ ಪ್ರಪಂಚದಲ್ಲಿ ಶಾಂತಿಗೆ, ಸಹೃದಯತೆಗೆ, ಸಹಬಾಳ್ವೆಗೆ, ಪ್ರಾಮಾಣಿಕತೆಗೆ ಸ್ಥಾನವಿಲ್ಲ! ಬದಲಾದ ಪ್ರಪಂಚದಲ್ಲಿ, ಬದಲಾದ ಭಾರತದಲ್ಲಿ ಏನಿದ್ದರೂ ಬರಿ ಹಿಂಸೆ, ದ್ವೇಷ, ಹೊಡಿ,ಬಡಿ,ಕಡಿಗೆ ಮಾತ್ರ ಸ್ಥಾನ!
ಬದಲಾಧ ಭಾರತದಲ್ಲಿ ಎಲ್ಲಿ ನೋಡಿದರೂ ಕೋಮುಗಲಭೆ. ಅದು ಕರ್ನಾಟಕದ ಶಿವಮೊಗ್ಗವಿರಬಹುದು, ರಾಜಾಸ್ಥಾನದ ಕರೌಲಿಯಿರಬಹುದು, ಪಶ್ಚಿಮ ಬಂಗಾಳದ ಬೀರ್ಭೂಮ್ ಇರಬಹುದು.. ನಮಗೆ ಕಾಣಸಿಗುವುದು ಕೇವಲ ಹಿಂಸೆ, ದ್ವೇಷ, ಕೊಲೆ. ನಮ್ಮ ಬದಲಾದ ಭಾರತದಲ್ಲಿ ಬರಿ ಕೋಮುದ್ವೇಷ ಗಲಭೆಯಷ್ಟೇ ಅಲ್ಲ ಪ್ರತಿದಿನವೂ ಬೆಲೆಯೇರಿಕೆ ಜನರ ಹಾಹಾಕಾರಕ್ಕೆ ಕಾರಣವಾಗಿದೆ. ಸತತ ಎರಡು ವಾರಗಳಲ್ಲಿ ಪ್ರತಿ ದಿನ 80 ಪೈಸೆಯಂತೆ ತೈಲಬೆಲೆಯನ್ನು ಏರಿಸಿರುವ ಉದಾಹರಣೆ ಭಾರತ ಬಿಟ್ಟು ಬೇರೊಂದು ದೇಶದಲ್ಲಿ ಆಗಿರಲು ಸಾಧ್ಯವೇ ಇಲ್ಲ! ಅಡುಗೆ ಎಣ್ಣೆಯ ಬೆಲೆ 70 ರಿಂದ 200 ಕೇವಲ ಎರಡು ತಿಂಗಳಲ್ಲಿ ಹೆಚ್ಚಿಸಿದ ಖ್ಯಾತಿ ಭಾರತಕ್ಕೆ ಮಾತ್ರ ಸಲ್ಲಬೇಕು! ಗ್ಯಾಸ್ ಕೇವಲ 8 ವರ್ಷಗಳಲ್ಲಿ 400ರಿಂದ 1000 ರೂಪಾಯಿ ಹೆಚ್ಚಿಸಿದ ಖ್ಯಾತಿಯೂ ಭಾರತಕ್ಕೆ ಸಲ್ಲಬೇಕು. ಹರ್ಷನ ಸಾವು, ಅದರಿಂದುಂಟಾದ ಕೋಮುಗಲಭೆ, ಹಿಜಾಬ್ ವಿವಾದ, ಅದರಿಂದುಂಟಾದ ವಿದ್ಯಾರ್ಥಿಗಳ ಪರದಾಟ, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್ ವಿರೋಧ ಇವೆಲ್ಲ ಆದ ಮೇಲೆ ಇದೀಗ ಮಸೀದಿಗಳ ಮೈಕುಗಳ ಮೇಲೆ ಕಣ್ಣು!
ಅಯ್ಯೋ ನಮ್ಮ ಕರ್ನಾಟಕದ ಸಹವಾಸವೂ ಬೇಡ, ದೇಶದ ಸಹವಾಸವೇ ಬೇಡ, ಬೇರೆ ದೇಶದ ಒಳ್ಳೆ ಸುದ್ದಿ ನೋಡೋಣ ಎಂದು ಪಕ್ಕದ ಶ್ರೀಲಂಕಾದತ್ತ ದೃಷ್ಟಿ ಹರಿಸಿದರೆ ಅಲ್ಲಿ ಇಡೀ ಲಂಕೆಯೇ ಆರ್ಥಿಕ ಕುಸಿತದಿಂದಾಗಿ ಧಗಧಗಿಸುತ್ತಿದೆ. ಅಲ್ಲಿನ ಪ್ರಧಾನಿ ಮಹೀಂದ್ರ ರಾಜಪಕ್ಸೆಯ ವಿರುದ್ಧ ಲಕ್ಷಾಂತರ ಜನರು ಪ್ರದರ್ಶನ ನಡೆಸಿದ್ದಾರೆ. ಆದರೆ ರಾಜಪಕ್ಸೆ ಮತ್ತು ಸಹೋದರರು ಮಾತ್ರ ಇದ್ಯಾವುದಕ್ಕೂ ಕೇರ್ ಮಾಡದೆ ಕರ್ಫ್ಯೂ ವಿಧಿಸಿ ತಮ್ಮ ಸರ್ವಾಧಿಕಾರತ್ವವನ್ನು ಮೆರೆದಿದ್ದಾರೆ. ಇಡೀ ಶ್ರೀಲಂಕಾ ದಿವಾಳಿಯಾಗಿ ಜನರು ತುತ್ತು ಅನ್ನಕ್ಕೆ ಪರದಾಡುತ್ತಿದ್ದರೂ ಅಲ್ಲಿನ ಪ್ರಧಾನಿ ಮಾತ್ರ ಕುರ್ಚಿ ಬಿಟ್ಟುಕೊಡಲು ಇನ್ನೂ ತಯಾರಾಗಿಲ್ಲ. ಆದರೆ ಅವನ ಮಂತ್ರಿಮಂಡಳದ 24 ಸಚಿವರು ತಮ್ಮ ರಾಜೀನಾಮೆಯನ್ನು ಕೊಟ್ಟಿದ್ದಾರೆ. ಜನಸಾಮಾನ್ಯರು ಒಂದು ಕೇಜಿ ಹಾಲಿನ ಪುಡಿಯ ಡಬ್ಬಕ್ಕೆ 1900 ರೂಪಾಯಿಯ ಹೌಹಾರುವ ಬೆಲೆಯೊಡನೆ ಪುಟ್ಟ ಕಂದಮ್ಮಗಳಿಗೆ ಹಾಲೂ ಸಹ ಕೊಡಲಾಗದ ಸಂಕಟದ ಸ್ಥಿತಿಯಲ್ಲಿ ಒದ್ದಾಡುತ್ತಿದ್ದಾರೆ.
ಶ್ರೀಲಂಕಾದ ಸ್ಥಿತಿಯಿಂದ ಗಾಬರಿಯಾಗಿ ಮತ್ತೊಂದು ಪಕ್ಕದ ದೇಶ ಪಾಕಿಸ್ತಾನದತ್ತ ದೃಷ್ಟಿ ಹರಿಸಿದರೆ ಮತ್ತೂ ಗಾಬರಿಯಾಗುತ್ತದೆ. ಅಲ್ಲಿ ಇಮ್ರಾನ್ಖಾನ್ ಬಹುಮತ ಕಳೆದುಕೊಂಡರೂ ವಿದೇಶಿ ಶಕ್ತಿಗಳ ಹಸ್ತಕ್ಷೇಪ ಎಂಬ ಕೂಗು ಹಾಕಿ ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನೇ ಹೈಜಾಕ್ ಮಾಡಿ, ಸಂಸತ್ತನ್ನು ವಿಸರ್ಜಿಸಿ ಚುನಾವಣೆಯತ್ತ ಮುಖಮಾಡಿದ್ದಾನೆ. ಅಲ್ಲಿನ ಸುಪ್ರೀಂ ಕೋರ್ಟ್ನಲ್ಲಿ ಐವರು ಜಡ್ಜ್ಗಳ ಬೆಂಚು ಈ ವಿಚಾರದ ವಿಚಾರಣೆಯನ್ನು ತ್ವರಿತವಾಗಿ ನಡೆಸುತ್ತಿದೆ. ರಾಜಕೀಯ ಅಸ್ಥಿರತೆ ಪಾಕಿಸ್ತಾನದಲ್ಲಿ ತಾಂಡವವಾಡುತ್ತಿದೆ.
ಛೆ, ಇದೇನು ಅಕ್ಕಪಕ್ಕದ ದೇಶಗಳಲ್ಲೂ ಬರಿ ಇಂಥವೇ ಕೆಟ್ಟ ಸುದ್ದಿಯೆಂದು ದೂರದ ರಷ್ಯಾದತ್ತ ದೃಷ್ಟಿ ಹರಿಸಿದರೆ, ಅಲ್ಲಂತೂ ಪುಟಿನ್ ಸತತ 40 ದಿನಗಳಿಂದ ಪಕ್ಕದ ಉಕ್ರೇನನ್ನು ನಾಶಗೊಳಿಸಲು ಬಾಂಬುಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾನೆ. ಸಾವಿರಾರು ನಾಗರಿಕರ ಮಾರಣಹೋಮ ಮಾಡುತ್ತಿದ್ದಾನೆ. ತಡೆಯುವವರು ಯಾರೂ ಇಲ್ಲ. ಅಮೆರಿಕ ಹಾಗೂ ಮಿತ್ರಪಕ್ಷಗಳು ಅಣುಬಾಂಬಿನ 3ನೇ ವಿಶ್ವಯುದ್ಧದ ಭೀತಿಯಿಂದಾಗಿ ಕೈಕಟ್ಟಿಕೊಂಡು ಹೆದರಿ ಕುಳಿತಿವೆ.
ಹೌದು, ಬದಲಾಗುತ್ತಿದೆ ಪ್ರಪಂಚ, ಬದಲಾಗುತ್ತಿದೆ ಭಾರತ, ಬದಲಾಗುತ್ತಿದೆ ಕರ್ನಾಟಕ, ಬದಲಾಗುತ್ತಿವೆ ಹಳ್ಳಿ ಹಳ್ಳಿಗಳು.. ಹಿಂಸೆಯ ರೂಪದಲ್ಲಿ, ದ್ವೇಶದ ರೂಪದಲ್ಲಿ ಬದಲಾಗುತ್ತಿವೆ.
ಓಂಪ್ರಕಾಶ್ ನಾಯಕ್, ಹಿರಿಯ ಉಪಸಂಪಾದಕರು, BMG24x7ಲೈವ್ಕನ್ನಡ