OPINION:
‘ಮಾಡಲು ಕೆಲಸವಿಲ್ಲದ ಬಡಗಿ ಅದೇನೊ ಕೆತ್ತಿದನಂತೆ’ ಇದು ನಮ್ಮ ಜನಪದರ ಜನಪ್ರಿಯ ಗಾದೆ. ಇಲ್ಲಿ ನಮ್ಮ ಘನ ಸರ್ಕಾರ ಹಿಂದೂಗಳ ಪ್ರಮುಖ ಹಬ್ಬವಾದ ಯುಗಾದಿಯ ದಿನವನ್ನು ಧಾರ್ಮಿಕ ಆಚರಣೆಯ ದಿನವನ್ನಾಗಿ ಆಚರಿಸಲು ಹೊರಟಿರಲು ನೋಡಿದರೆ ಈ ಗಾದೆ ನೆನಪಾಗದೆ ಇರದು. ಏಕೆಂದರೆ ಯುಗಾದಿ ಎನ್ನುವುದು ನಮ್ಮ ಜನರ ಜನಮಾನಸದಲ್ಲಿ ಹಾಸು ಹೊಕ್ಕಾಗಿದೆ. ಸರ್ಕಾರ ಅದನ್ನು ಪ್ರತ್ಯೇಕವಾಗಿ ಧಾರ್ಮಿಕ ದಿನವನ್ನಾಗಿ ಆಚರಿಸಿದರೆ ಮಾತ್ರ ಜನರು ಅದನ್ನು ಇನ್ನೂ ಚೆನ್ನಾಗಿ ಆಚರಿಸುತ್ತಾರೆ ಎಂದು ಭಾವಿಸುವುದು ಶುದ್ಧ ಮೂರ್ಖತನ.
ಆದರೆ ಮೇಲೆ ಹೇಳಿದ ಗಾದೆ ಇಲ್ಲಿ ಅರ್ಧ ಮಾತ್ರ ಅನ್ವಯಿಸುತ್ತದೆ. ಏಕೆಂದರೆ ಇಲ್ಲಿ ಸರ್ಕಾರಕ್ಕೆ ಮಾಡಲು ಸಾವಿರ ಸಾವಿರ ಕೆಲಸಗಳಿವೆ. ಎಷ್ಟು ಮಾಡಿದರೂ ಬಗೆಹರಿಸಲಾರದಷ್ಟು ಸಮಸ್ಯೆಗಳಿವೆ. ಜನರ ಕಷ್ಟಗಳಿಗೆ ಸ್ಪಂದಿಸಿದರೆ 24 ಗಂಟೆಯೂ ಸಾಕಾಗದಷ್ಟು ನೋವುಗಳಿವೆ. ಇವುಗಳ ಬಗ್ಗೆ ಸರ್ಕಾರ ಗಮನಹರಿಸಿ ಬೆಲೆಯೇರಿಕೆಯಲ್ಲಿ ಶ್ರೀಲಂಕಾವನ್ನೂ ಮೀರಿಸಲು ಹೊರಟಿರುವ ಭಾರತದ ಬೆಲೆಏರಿಕೆಗೆ ಕಡಿವಾಣ ಹಾಕುವ, ತನ್ಮೂಲಕ ಪ್ರಜೆಗಳ ಕಣ್ಣೀರೊರೆಸುವ ಬದಲು ಹೀಗೆ ಅರ್ಥಹೀನವಾದ ಆಚರಣೆಗಳನ್ನು ಸರ್ಕಾರಿ ಆದೇಶದ ಮೂಲಕ ಆಚರಿಸಲು ಹೊರಟಿರುವುದು ಸರ್ಕಾರದ ಅಜ್ಷಾನವನ್ನು ತೋರಿಸುತ್ತದಲ್ಲದೆ ಮತ್ತೇನಲ್ಲ.
ಸರ್ಕಾರದ ಈ ನಿರ್ಧಾರ ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಖರ್ಚು ಮಾಡುವ ಸರ್ಕಾರದ ಹಣವನ್ನು ರಾಜಕಾರಣಿಗಳು, ಅಧಿಕಾರಿಗಳು ತಿನ್ನಲು ಕಂಡುಕೊಂಡಿರುವ ಮತ್ತೊಂದು ದಾರಿಯಾ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಈ ಆಚರಣೆಯನ್ನು ಪ್ರತಿಯೊಂದು ದೇವಾಲಯಗಳೂ ಆಚರಿಸಬೇಕು ಎಂದು ಹೇಳಿದ್ದಾರೆ. ದೇವಾಲಯಗಳು ಈ ಸಮಯದಲ್ಲಿ ಪ್ರತಿಯೊಬ್ಬರಿಗೂ ಬೇವು ಬೆಲ್ಲ ಪ್ರಸಾದ ಹಂಚಬೇಕು ಎಂದು ಆದೇಶಿಸಿದ್ದಾರೆ. ಇದಕ್ಕಿಂತ ಮೂರ್ಖ ಆದೇಶ ಮತ್ತೊಂದಿಲ್ಲ.
ಏಕೆಂದರೆ ಯುಗಾದಿಯನ್ನು ಆಚರಿಸದ ಹಿಂದೂಗಳೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಎಲ್ಲರೂ ಆಚರಿಸುತ್ತಾರೆ. ಅವರೆಲ್ಲ ದೇವಸ್ಥಾನಗಳಿಗೆ ಹೋಗಿ ಪ್ರಸಾದವಿಲ್ಲದೆ ಬಂದ ಉದಾಹರಣೆಯೇ ಇಲ್ಲ. ಒಂದೊಮ್ಮೆ ದೇವಸ್ಥಾನಗಳಿಗೆ ಹೋಗದವರು ಮನೆಯಲ್ಲೇ ಬೇವು ಬೆಲ್ಲ ತಿಂದು ದೇವರಿಗೆ ಕೈಮುಗಿಯುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಅಂಥದ್ದರಲ್ಲಿ ಸರ್ಕಾರ ಇದಕ್ಕೊಂದು ದಿನವನ್ನು ನಿಗದಿ ಮಾಡಿರುವುದನ್ನು ನೋಡಿದರೆ ಇದು ಪಕ್ಕಾ ದೇವರ ಹೆಸರಿನಲ್ಲಿ ಪರ್ಸೆಂಟೇಜ್ ದುಡ್ಡು ಮಾಡುವ ಐಡಿಯಾ ಎನಿಸುತ್ತದೆ. ಹಾಗಲ್ಲದೆ ಒಳ್ಳೆ ಉದ್ದೇಶಕ್ಕಾಗಿ ಮಾಡಿದ್ದರೆ, ಈಗಾಗಲೇ ಯುಗಾದಿಯನ್ನು ಪ್ರತಿಯೊಬ್ಬರೂ ಆಚರಿಸುತ್ತಿರವುದರಿಂದ ‘ಕೆಲಸವಿಲ್ಲದ ಬಡಗಿ..’ ಗಾದೆ ಖಂಡಿತ ಇವರಿಗೆ ಅನ್ವಯಿಸುತ್ತದೆ!
ಮುಜರಾಯಿ ಖಾತೆ ಸಚಿವೆಗೆ ಏನಾದರೂ ಒಳ್ಳೆಯ ಕೆಲಸ, ಜನಪರ ಕೆಲಸ ಮಾಡಬೇಕೆಂದಿದ್ದರೆ ಸಾವಿರ ಕೆಲಸಗಳಿವೆ. ಕರ್ನಾಟಕದಲ್ಲಿ ಎಷ್ಟು ಸಾವಿರ ದೇವಸ್ಥಾನಗಳು ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುತ್ತವೆ, ಅವುಗಳ ಅರ್ಚಕರೆಲ್ಲರೂ ಸಂತುಷ್ಟರಾಗಿದ್ದಾರೆಯೇ? ಅವರ ಪರಿವಾರಗಳು ಸುಖವಾಗಿವೆಯೆ? ದೇವಸ್ಥಾನಗಳ ಆಡಳಿತ ನಿರ್ವಹಣೆ ಹೇಗಿದೆ, ಅವುಗಳು ಬೀಳುವ ಸ್ಥಿತಿಯಲ್ಲಿಲ್ಲವಷ್ಟೆ? ದೇವಸ್ಥಾನಕ್ಕೆ ಬರುವ ಬಡ ಭಕ್ತರಿಗೆ ಆ ದೇವಸ್ಥಾನಗಳಿಗೆ ಬರಲು ಬಸ್ ವ್ಯವಸ್ಥೆಯಿದೆಯೆ? ಒಂದೊಮ್ಮೆ ಅಲ್ಲಿಗೆ ಬರುವ ಭಕ್ತರು ರಾತ್ರಿ ತಡವಾದರೆ ತಂಗಲು ಏನಾದರು ವ್ಯವಸ್ಥೆಯಿದೆಯೆ? ಅವರಿಗೆ ಅಲ್ಲಿ ಊಟದ ವ್ಯವಸ್ಥೆಯೆನಾದರೂ ಇದೆಯೆ? ಕುಡಿಯುವ ನೀರಿನ ವ್ಯವಸ್ಥೆಯಿದೆಯೆ? ಅರ್ಚಕರ ಮಕ್ಕಳಿಗೆ ಓದಲು ಶಾಲೆಯ ವ್ಯವಸ್ಥೆಯಿದೆಯೆ? ಬಡ ಅರ್ಚಕರು ಎಂದು ಜನರು ಅರ್ಚಕರ ಬಗ್ಗೆ ಆಡಿಕೊಳ್ಳದಂತೆ ಏನು ಮಾಡಬಹುದು? ಹೀಗೆ ದೇವಸ್ಥಾನಗಳಿಗೆ ಸಂಬಂಧಪಟ್ಟ ಸಾವಿರ ಸಾವಿರ ಸಮಸ್ಯೆಗಳ ಜೊಲ್ಲೆಯವರು ಯೋಚಿಸಬಹುದು.
ಓಂಪ್ರಕಾಶ್ ನಾಯಕ್, ಹಿರಿಯ ಉಪಸಂಪಾದಕ, BMG24x7ಲೈವ್ಕನ್ನಡ