ಸಿಎಂ ಸ್ಥಾನ ಬಿಟ್ಟ ಮೇಲೆ ಬಿಎಸ್‌ವೈ ವರ್ಚಸ್ಸು ಹೆಚ್ಚಿದೆ: ಬಿ.ವೈ.ವಿಜಯೇಂದ್ರ
ಯಡಿಯೂರಪ್ಪ ಅವರ ರಾಜಕೀಯ ಶಕ್ತಿ, ವರ್ಚಸ್ಸು ಕುಗ್ಗಿಲ್ಲ. ಬದಲಾಗಿ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೆ ಅವರ ವರ್ಚಸ್ಸು, ಶಕ್ತಿ ಇನ್ನೂ ಹೆಚ್ಚಿದೆ. ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣ್ಣಿಸಿದರು.
ಮೈಸೂರು (ಏ.23): ಯಡಿಯೂರಪ್ಪ ಅವರ ರಾಜಕೀಯ ಶಕ್ತಿ, ವರ್ಚಸ್ಸು ಕುಗ್ಗಿಲ್ಲ. ಬದಲಾಗಿ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೆ ಅವರ ವರ್ಚಸ್ಸು, ಶಕ್ತಿ ಇನ್ನೂ ಹೆಚ್ಚಿದೆ. ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣ್ಣಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಡಿಯೂರಪ್ಪ ಯಡಿಯೂರಪ್ಪನೆ, ಅವರೊಂದು ಮಹಾಶಕ್ತಿ. ಅವರು ತಾವು ರಾಜ್ಯಪಾಲರಾಗಬೇಕು, ತಮ್ಮ ಮಗ ಮುಖ್ಯಮಂತ್ರಿ ಆಗಬೇಕು ಎಂಬ ಕನಸನ್ನು ಕಂಡಿಲ್ಲ.
ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂಬುದೇ ಅವರ ಗುರಿ, ಸಂಕಲ್ಪ, ಕನಸು. ಅದಕ್ಕಾಗಿ ಅವರು ಶ್ರಮಿಸುತ್ತಿದ್ದಾರೆ ಎಂದರು. ವರುಣ ಕ್ಷೇತ್ರದ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರ ನಡೆಸುತ್ತೇನೆ. ಅವರೊಂದಿಗೆ ನನಗೆ ಯಾವುದೇ ವೈಮನಸ್ಸು ಇಲ್ಲ. ವರುಣದಲ್ಲಿ ನಾನು ಕಣಕ್ಕಿಳಿಯದಿರಲು ಯಡಿಯೂರಪ್ಪ-ಸಿದ್ದರಾಮಯ್ಯ ನಡುವೆ ಒಳ ಒಪ್ಪಂದವಾಗಿದೆ ಎಂಬ ಆರೋಪ ಸರಿಯಲ್ಲ. ಅದು ಪಕ್ಷದ ತೀರ್ಮಾನ. ನನ್ನನ್ನು ರಾಜ್ಯಕ್ಕೆ ಪರಿಚಯ ಮಾಡಿಕೊಟ್ಟವರು ವರುಣ ಕ್ಷೇತ್ರದ ಕಾರ್ಯಕರ್ತರು. ಅವರ ಪ್ರೀತಿ-ವಿಶ್ವಾಸಕ್ಕೆ ಬೆಲೆ ಕಟ್ಟಲಾಗದು.