POLITICS:
ಬೆಂಗಳೂರು: ಪದೇ ಪದೇ ಬಿಜೆಪಿ ಸರ್ಕಾರವನ್ನ ಮುಜುಗರಕ್ಕೆ ಸಿಲುಕಿಸುವ ಗೃಹ ಸಚಿವ ಆರಗ ಜ್ಞಾನೇಂದ್ರರ ಹೇಳಿಕೆಗಳಿಂದ ಇದೀಗ ಖಾತೆ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಬಿಜೆಪಿ ವಲಯದಲ್ಲಿ ಆರಗ ಜ್ಞಾನೇಂದ್ರ ಅವರ ಖಾತೆ ಬದಲಾವಣೆ ಕುರಿತಾಗಿ ಆಂತರಿಕ ಚರ್ಚೆಗಳು ಶುರುವಾಗಿದೆ.
ಆರಗ ಜ್ಞಾನೇಂದ್ರ ಅವರು ತಮ್ಮ ಹುದ್ದೆಯ ಸೂಕ್ಷ್ಮತೆ ಮರೆತು ಪದೇ ಪದೇ ಪೇಚಿಗೆ ಸಿಲುಕುವಂತಹ ಹೇಳಿಕೆಗಳನ್ನ ನೀಡ್ತಿದ್ದಾರೆ. ಗೃಹ ಸಚಿವರ ಬಾಲಿಷ ಹೇಳಿಕೆಗಳು ದೊಡ್ಡ ಮಟ್ಟದಲ್ಲಿ ಸುದ್ದಿಯಾಗ್ತಿವೆ. ಆರಗ ಜ್ಞಾನೇಂದ್ರ ಅವರು ಸಚಿವ ಸ್ಥಾನಕ್ಕೆ ಅರ್ಹರಲ್ಲ, ಅವರನ್ನು ಸಂಪುಟದಿಂದ ಕೈ ಬಿಡಬೇಕು ಅಥವಾ ಖಾತೆ ಬದಲಿಸಬೇಕು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಒತ್ತಾಯಿಸಿದ್ದು. ಈ ಎಲ್ಲಾ ಕಾರಣಗಳಿಂದ ಆರಗ ಅವರನ್ನ ಗೃಹ ಸಚಿವರ ಸ್ಥಾನದಿಂದ ಕೈಬಿಡಲು ತೀರ್ಮಾನಿಸಲಾಗಿದೆ ಎನ್ನಲಾಗ್ತಿದೆ.
ಜಗಜೀವನರಾಂ ನಗರದ ಚಂದ್ರಶೇಖರ್ ಎಂಬ ಯುವಕನ ಕೊಲೆಗೆ ಮತೀಯ ಬಣ್ಣ ನೀಡುವ ರೀತಿಯಲ್ಲಿ ಗೃಹ ಸಚಿವರು ನೀಡಿದ ಹೇಳಿಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ಮೈಸೂರಿನ ಯುವತಿಯ ಮೇಲೆ ಅತ್ಯಾಚಾರ ನಡೆದಿತ್ತು. ಈ ವೇಳೆ ಮಾತನಾಡಿದ್ದ ಗೃಹ ಸಚಿವರು ಕತ್ತಲೆ ಸಮಯದಲ್ಲಿ ಸಂತ್ರಸ್ತ ಯುವತಿ ಅಲ್ಲಿಗೇಕೆ ಹೋಗಬೇಕಿತ್ತು? ಎಂದಿದ್ದರು. ಗೃಹ ಸಚಿವರ ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ, ತೀವ್ರ ಟೀಕೆಗೆ ಗುರಿಯಾಗಿತ್ತು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ದನ ಕಳವು ಮಾಡುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಗೃಹ ಸಚಿವರನ್ನು ಭೇಟಿ ಮಾಡಿ ದೂರು ನೀಡಿದ್ದರು. ಈ ವೇಳೆ ಪೊಲೀಸ್ ಅಧಿಕಾರಿಗೆ ಕರೆ ಮಾಡಿದ್ದ ಗೃಹ ಸಚಿವರು ನೀವು ಪೊಲೀಸರು ಲಂಚ ತಿನ್ನುವ ನಾಯಿಗಳು ಎಂದು ಬೈದಿದ್ದರು.
ಹೀಗೆ ಒಂದಾದ ಮೇಲೊಂದರಂತೆ ಆರಗ ಜ್ಞಾನೇಂದ್ರರ ಎಡವಟ್ಟು ಹೇಳಿಕೆಯಿಂದಾಗಿ ಗೃಹ ಸಚಿವರ ಖಾತೆಯನ್ನು ಕಳೆದುಕೊಳ್ಳೋ ಪರಿಸ್ಥಿತಿ ನಿರ್ಮಾಣವಾಗಿದೆ.