ಪಂಚರಾಜ್ಯ ಚುನಾವಣೆ ಜನರ ಗೆಲುವು, ರೌಡಿಗಳ ಸೋಲು: ಕೇಶವ್ ಪ್ರಸಾದ್ ಮೌರ್ಯ

ಪಂಚರಾಜ್ಯ ಚುನಾವಣೆ ಜನರ ಗೆಲುವು, ರೌಡಿಗಳ ಸೋಲು: ಕೇಶವ್ ಪ್ರಸಾದ್ ಮೌರ್ಯ

ಲಖನೌ: ಉತ್ತರ ಪ್ರದೇಶದಲ್ಲಿ ಆರಂಭದಿಂದಲೂ ಬಿಜೆಪಿ ಸತತ ಮುನ್ನಡೆ ಕಾಯ್ದುಕೊಂಡಿದೆ. ಎರಡನೇ ಬಾರಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಗದ್ದುಗೆ ಏರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಆಶಾದಾಯಕ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಸರ್ಕಾರದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ‘ರಾಜ್ಯದಲ್ಲಿ ಜನರು ಗೆಲ್ಲುತ್ತಿದ್ದಾರೆ, ಗೂಂಡಾಗಳು ಸೋಲುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಚುನಾವಣಾ ಪ್ರಚಾರ ಸಭೆಗಳಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರೋಧ ಪಕ್ಷಗಳು ಸತತ ಟೀಕಾಪ್ರಹಾರ ನಡೆಸಿದ್ದರು. ಸಮಾಜವಾದಿ ಪಕ್ಷವು ಎಲ್ಲ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. 2012ರಿಂದ 2017ರವರೆಗೆ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸಿದ್ದ ಸಮಾಜವಾದಿ ಪಕ್ಷವು ನಂತರ ರಾಷ್ಟ್ರೀಯ ಲೋಕದಳದೊಂದಿಗೆ ಕೈಜೋಡಿಸಿತ್ತು. ಇದೀಗ ಮತ್ತೆ ಗೂಂಡಾಗಿರಿ, ಮಾಫಿಯಾ ಮತ್ತು ಅರಾಜಕತೆಯೊಂದಿಗೆ ಕೆಲಸ ಆರಂಭಿಸಿದೆ ಎಂದು ಕೇಶವ್ ಪ್ರಸಾದ್ ಮೌರ್ಯ ಆರೋಪಿಸಿದ್ದಾರೆ.

ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕದಳ ಪಕ್ಷಗಳ ಮೈತ್ರಿಕೂಟವು ಹಲವು ಅಪರಾಧಿಗಳು ಸ್ಪರ್ಧಿಸಲು ಅವಕಾಶ ನೀಡಿವೆ. ಈ ಮೂಲಕ ಸಮಾಜವಾದಿ ಪಕ್ಷ ತನ್ನ ಹಳೆಯ ಚಾಳಿ ಮುಂದುವರಿಸಿದೆ ಎಂದು ದೂರಿದ್ದರು. ಅಪರಾಧ ಹಿನ್ನೆಲೆಯವರಿಗೆ ಟಿಕೆಟ್ ನೀಡುವ ಮೂಲಕ ಅಖಿಲೇಶ್ ಯಾದವ್ ಈ ಬಾರಿಯೂ ಪಶ್ಚಿಮ ಉತ್ತರ ಪ್ರದೇಶವನ್ನು ಕೋಮುದಳ್ಳುರಿಗೆ ತಳ್ಳಲು ನಿರ್ಧರಿಸಿದ್ದರು ಎಂದು ಆರೋಪ ಮಾಡಿದ್ದಾರೆ.