POLITICS: ಬೆಂಗಳೂರು: ಸಿ.ಡಿಯಲ್ಲಿರುವುದು ತಾನೇ ಎಂದು ತನಿಖಾಧಿಕಾರಿಗಳ ಎದುರು ಮಾಜಿ ಸಚಿವ ರಮೆಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಎಸ್ಐಟಿ ಅಧಿಕಾರಿಘಲೆದುರು ತನಿಖೆಗೆ ಹಾಜರಾಗಿದ್ದ ರಮೇಶ್ ಜಾರಕಿಹೊಳಿ, ತಮ್ಮ ಈವರೆಗಿನ ಹೇಳಿಕೆಗಳಿಗೆ ವಿರುದ್ಧವಾದ ಹೇಳಿಕೆ ನೀಡಿದ್ದು, ಯುವತಿಯ ಪರಿಚಯವಿದ್ದು ಆಕೆಯೊಂದಿಗೆ ಸಮ್ಮತದ ಲೈಂಗಿಕ ಸಂಪರ್ಕ ಹೊಂದಿದ್ದಾಗಿ ಹೇಳಿಕೆ ನೀಡಿರುವರೆಂದು ವರದಿಯಾಗಿದೆ. ಪ್ರಾಜೆಕ್ಟ್ ಒಂದರ ವಿಚಾರದಲ್ಲಿ ಯುವತಿ ತಮ್ಮನ್ನು ಭೇಟಿಯಾಗಿದ್ದರೆಂಬ ವಿಚಾರವನ್ನೂ ಜಾರಕಿಹೊಳಿ ಹೇಳಿದ್ದಾರೆ ಎನ್ನಲಾಗಿದೆ. ಯುವತಿಯೊಂದಿಗೆ ತಾವಿದ್ದುದನ್ನು ತಮ್ಮ ಅರಿವಿಗೆ ಬಾರದಂತೆ ವಿಡಿಯೋ ಮಾಡಲಾಗಿದೆ ಎಂದೂ ಅವರು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಸಿ.ಡಿ ಪ್ರಕರಣ ಬಹಿರಂಗವಾದ ದಿನದಿಂದಲೂ ಯುವತಿ ತಮಗೆ ಪರಿಚಯವಿಲ್ಲ, ಸಿ.ಡಿಯಲ್ಲಿರುವ ವ್ಯಕ್ತಿಯೂ ತಾನಲ್ಲ ಎಂದೇ ಹೇಳಿಕೆ ನೀಡುತ್ತ ಬಂದಿದ್ದ ರಮೇಶ್ ಜಾರಕಿಹೊಳಿ ಈಗ ಹೀಗೆ ಹೇಳಿಕೆ ಕೊಟ್ಟಿರುವುದರಿಂದ ಇಡೀ ಪ್ರಕರಣಕ್ಕೆ ಹೊಸದೇ ತಿರುವು ಸಿಕ್ಕಂತಾಗಿದೆ.