POLITICS:
ಹಾಸನ: ರಾಜ್ಯದಲ್ಲಿ ಸದ್ಯದ ಪರಿಸ್ಥಿತಿ ಮುಂದುವರೆದರೇ ಮುಂಬರುವ ಚುನಾವಣೆಯಲ್ಲಿ ಬಿಜೆಪಿ 40-50 ಸೀಟು ಗೆಲ್ಲುವುದು ಕಷ್ಟ. ನನ್ನ ರಾಜಕೀಯ ಇತಿಹಾಸದಲ್ಲಿ ಇಂತಹ ದುರ್ಬಲ ಮುಖ್ಯಮಂತ್ರಿ ನೋಡಿಲ್ಲ. ರಿಸರ್ವ್ ಬ್ಯಾಂಕ್‌ನಿಂದ ಸಾಲ ಪಡೆದು ದುಡ್ಡು ಹೊಡೆಯೋಕೆ ಬಿಜೆಪಿಯವರು ಮುಂದಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಚಿವ ಹೆಚ್ ಎಂ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದಕ್ಕೆ ಅವಕಾಶ ಕೊಡಬೇಕು. ಆದರೆ, ಮಂತ್ರಿ ಮಗನೇ ಕೇಸರಿ ಶಾಲು ಹಂಚಲು ಹೋದ್ರೆ ಏನಾಗುತ್ತದೆ. ಸಚಿವ ಈಶ್ವರಪ್ಪ ಅವರನ್ನು ಯಾರಾದ್ರು ಮಂತ್ರಿ ಅಂತಾರೆ ಎಂದರು.
ನಮ್ಮ ದೇಶವು ವಿವಿಧ ಧರ್ಮದಿಂದ ಕೂಡಿದೆ :
ಇನ್ನು, ಹಿಜಾಬ್ ವಿಚಾರವಾಗಿ ಮಾತನಾಡಿದ ಅವರು, ನಮ್ಮ ದೇಶವು ವಿವಿಧ ಧರ್ಮದಿಂದ ಕೂಡಿದೆ. ಅವರವರ ಧರ್ಮವನ್ನು ಆಚರಣೆ ಮಾಡಿದರೇ ತೊಂದರೆಯಿಲ್ಲ. ಇನ್ನು ಹಿಜಾಬ್ ಧಾರಣೆಯೂ ಇತ್ತೀಚೆಗೆ ನಡೆದ ಪದ್ದತಿಯಲ್ಲ. ಹಿಂದಿನಿಂದಲೂ ಮುಸ್ಲಿಂ ಮಹಿಳೆಯರು, ಹೆಣ್ಣು ಮಕ್ಕಳು ಹಿಜಾಬ್ ಧರಿಸುವ ಪದ್ಧತಿ ನಡೆದುಕೊಂಡು ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರವು ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೇ ಮುಂದಿನ ಚುನಾವಣೆಯಲ್ಲಿ ಜನರೇ ಉತ್ತರ ನೀಡುತ್ತಾರೆ. ಬಿಜೆಪಿಯವರು ಧರ್ಮಗಳ ನಡುವೆ ಹೊಡೆದಾಟುವ ಕೆಲಸ ಮಾಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ ಅಲ್ಲ ಎಂದು ಬಿಜೆಪಿ ವಿರುದ್ಧ ರೇವಣ್ಣ ಗುಡುಗಿದ್ದಾರೆ.