POLITICS:
ಶಿವಮೊಗ್ಗ: ಉಪಮುಖ್ಯಮಂತ್ರಿ ಆಗಲ್ಲ ಎಂಬುದಾಗಿ ನಾನು ಹೇಳಲು ಬರುವುದಿಲ್ಲ. ಯಾಕೆ ಆಗಬಾರದು ಎಂಬುದನ್ನು ನಿರ್ಧರಿಸುವುದು ಬಿಜೆಪಿ ಹೈಕಮಾಂಡ್ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಡಿಸಿಎಂ ಆಗಬಹುದು ಎಂಬುದಾಗಿ ಎರಡು ಬಾರಿ ಪ್ರಸ್ತಾಪ ಮಾಡಿದರು. ಮಠಾಧೀಶರು ಸೇರಿದಂತೆ ನೂರಾರು ಜನರು ಕರೆ ಮಾಡಿ ಉಪಮುಖ್ಯಮಂತ್ರಿ ಆಗುವಂತೆ ನನಗೆ ಹೇಳುತ್ತಿದ್ದಾರೆ. ಎಲ್ಲವೂ ನನ್ನ ಕೈಯಲ್ಲಿ ಇಲ್ಲ ಎಂದರು.
ಜಗದೀಶ್ ಶೆಟ್ಟರ್ ಸಚಿವ ಸಂಪುಟ ಸೇರಲ್ಲ ಎಂದಿದ್ದಾರೆ. ನಾನು ಸಾಕು ಎಂಬುದಾಗಿ ಹೇಳಲ್ಲ. ಪಕ್ಷ, ಹಿರಿಯರು ತೀರ್ಮಾನ ಮಾಡುತ್ತೆ. ಡಿಸಿಎಂ, ಸಚಿವರಾಗಿ ಕೆಲಸ ಮಾಡಿ ಅಂದರೆ ಮಾಡ್ತೇನೆ. ಇಲ್ಲ ಶಾಸಕರಾಗಿ ಇರುವಂತೆ ಸೂಚಿಸಿದರೆ ಮುಂದುವರಿಯುತ್ತೇನೆ. ಇದರಲ್ಲಿ ವಿಶೇಷ ಇಲ್ಲ. ಸಂಪುಟದಲ್ಲಿ ಇರಲೇಬೇಕು ಎಂಬ ನಿರ್ಧಾರ ನನ್ನದಲ್ಲ. ಲಾಬಿ ಎಂದರೆ ಏನೂ ಅಂತಾನೇ ಗೊತ್ತಿಲ್ಲ. ಇಲ್ಲಿ ತನಕ ಬಂದಿದ್ದೇನೆ. ಸಂಘಟನೆ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳುತ್ತದೆ. ವ್ಯಕ್ತಿ, ಕಾರ್ಯಕರ್ತರ ತೀರ್ಮಾನ ಇಲ್ಲ. ವರಿಷ್ಠರು ಯಾವುದೇ ತೀರ್ಮಾನ ತೆಗೆದುಕೊಂಡರೂ ಬದ್ಧ ಎಂದು ತಿಳಿಸಿದರು.
ಇದನ್ನೂ ಓದಿ : ಈಶ್ವರಪ್ಪಗೆ ಮಂತ್ರಿ ಸ್ಥಾನ ನೀಡುವಂತೆ ಮಠಾಧೀಶರ ತೀವ್ರ ಲಾಬಿ
ಬಿಜೆಪಿಯಲ್ಲಿ ನಾನೇ ಪ್ರವೀಣ ಎಂದುಕೊಳ್ಳುವ ಸಂಸ್ಕೃತಿ ಕಲಿಸಿಕೊಟ್ಟಿಲ್ಲ. ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ. ಹತ್ತಾರು ಜನ ಕರೆ ಮಾಡಿ ಹೇಳಿದ್ದಾರೆ. ನೀವ್ಯಾಕೆ ಡಿಸಿಎಂ ಆಗಬಾರದು ಎಂದು ಕೇಳುತ್ತಿದ್ದಾರೆ. ಯಡಿಯೂರಪ್ಪ ಅವರು ಬಸವರಾಜ ಬೊಮ್ಮಾಯಿ ಅವರು ಶಾಸಕಾಂಗ ಪಕ್ಷದ ನಾಯಕ ಎಂದು ಘೋಷಿಸಿದರು. ಈ ಹೆಸರು ಅನುಮೋದನೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ ಎಂದ ಅವರು, ಕಾಂಗ್ರೆಸ್ ನಲ್ಲಿ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಹೇಳಿಕೊಳ್ಳುತ್ತಿದ್ದಾರೆ. ಇದು ಬಿಜೆಪಿಯಲ್ಲಿ ಇಲ್ಲ ಎಂದು ಹೇಳಿದರು.