ಗುಜರಾತ್ ಚುನಾವಣೋತ್ತರ ಸಮೀಕ್ಷೆ: ಕರ್ನಾಟಕದಲ್ಲಿಯೂ ಪರಿಣಾಮ; ಸಿಎಂ ಬೊಮ್ಮಾಯಿ

ಗುಜರಾತ್ ಚುನಾವಣೋತ್ತರ ಸಮೀಕ್ಷೆ: ಕರ್ನಾಟಕದಲ್ಲಿಯೂ ಪರಿಣಾಮ; ಸಿಎಂ ಬೊಮ್ಮಾಯಿ

ಬೆಂಗಳೂರು: ಗುಜರಾತ್ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ ಬರಲಿದ್ದು, ಕರ್ನಾಟಕದಲ್ಲಿಯೂ ಕೂಡ ಇದು ಒಳ್ಳೆಯ ಪರಿಣಾಮ ಬೀರಲಿದೆ. 2023ರಲ್ಲಿ ನೂರಕ್ಕೆ ನೂರು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 66ನೇ ಪುಣ್ಯಸ್ಮರಣೆ ಅಂಗವಾಗಿ ವಿಧಾನ ಸೌಧದ ಪೂರ್ವದಿಕ್ಕಿನಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಜನ ಇಂದು ಸುಶಾನ, ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸುತ್ತಾರೆ. ಸುಳ್ಳು ಹಾಗೂ ರಾಜಕೀಯ ಪ್ರೇರಿತ ಆರೋಪಗಳಿಗೆ ಬೆಂಬಲವಿಲ್ಲ ಎಂದು ಸ್ಪಷ್ಟವಾಗಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಜಯಭೇರಿ ಹೊಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಇಡೀ ಭಾರತ ಬೆಂಬಲ ನೀಡುತ್ತಿದೆ. ಇದೊಂದು ಸಕಾರಾತ್ಮಕ, ಅಧಿಕಾರದ ಪರ ಮತದಾರರ ತೀರ್ಪು. ಗುಜರಾತ್ ನಲ್ಲಿ 7ನೇ ಬಾರಿಗೆ ಆಯ್ಕೆಯಾಗುತ್ತಿದ್ದು, ಇದು ನರೇಂದ್ರ ಮೋದಿಯವರ ನಾಯಕತ್ವ, ಆಡಳಿತದಲ್ಲಿ ಜನರ ಪ್ರಬಲವಾದ ನಂಬಿಕೆಯನ್ನು ತೋರಿದೆ ಎಂದರು.

ಚುನಾವಣಾ ದೃಷ್ಟಿಕೋನವಿಲ್ಲ

ಮಹಾರಾಷ್ಟ್ರ ಸಚಿವರು ಬಾರದೆ ಇರುವುದಕ್ಕೂ ಚುನಾವಣೆಗೂ ಸಂಬಂಧವಿಲ್ಲ. ಇದು ಮಹಾರಾಷ್ಟ್ರದವರು ಬಹಳ ವರ್ಷಗಳಿಂದ ವಿವಾದ ಮಾಡಿಕೊಂಡು ಬಂದಿದ್ದಾರೆ. ವಿವಾದದಿಂದ ಎರಡೂ ಕಡೆ ಪ್ರತಿಕ್ರಿಯೆ ಬರುತ್ತದೆ. ಜನರ ಮಧ್ಯೆ ಇರುವ ಸಾಮರಸ್ಯ ಕದಡುವ ಕೆಲಸ ಬೇಡ ಎಂದು ಹೇಳಿದ್ದೇನೆ. ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ವಿದ್ದು, ನಮ್ಮ ನಡೆ ಸಂವಿಧಾನಬದ್ಧವಾಗಿರುವುದರಿಂದ ಕಾನೂನು ಸಮರವನ್ನು ಗೆಲ್ಲುವ ವಿಶ್ವಾಸವಿದೆ. ನಮಗೆ ಚುನಾವಣಾ ದೃಷ್ಟಿಕೋನವಿಲ್ಲ ಅಥವಾ ವಿವಾದ ಹುಟ್ಟಿಸುವ ಇರಾದೆಯೂ ಇಲ್ಲ. ನಮ್ಮ ಗಡಿ ಹಾಗೂ ಜನರ ರಕ್ಷಣೆ ಮಾಡುವ ಕೆಲಸಕ್ಕೆ ನಾವು ಬದ್ಧರಾಗಿದ್ದೇವೆ. ಮಹಾರಾಷ್ಟ್ರ, ತೆಲಂಗಾಣ, ಕೇರಳದಲ್ಲಿರುವ ಕನ್ನಡಿಗರ ಹಿತಚಿಂತನೆಯನ್ನೂ ಮಾಡುತ್ತಿದ್ದೇವೆ ಎಂದರು.