POLITICS: "ಕೋವಿಡ್ ನಿರ್ವಹಣೆಗೆ ಸಂಬಂಧಿಸಿದ ಎಲ್ಲದರ ನಿಯಂತ್ರಣವನ್ನೂ ಕೇಂದ್ರ ಸರ್ಕಾರ ತನ್ನ ಕೈಯಲ್ಲಿರಿಸಿಕೊಂಡಿದೆ. ಆದರೆ ರಾಜ್ಯಗಳ ಪಾಲಿಗೆ ಅಗತ್ಯ ಲಸಿಕೆಯೂ ಸಿಗುತ್ತಿಲ್ಲ, ಔಷಧವೂ ಸಿಗುತ್ತಿಲ್ಲ." ಇದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಟೀಕೆ. 'ಸಂಡೇ ಎಕ್ಸ್ ಪ್ರೆಸ್' ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಅವರು ಹಲವು ಗಂಭೀರ ಆರೋಪಗಳನ್ನು ಕೇಂದ್ರದ ವಿರುದ್ಧ ಮಾಡಿದ್ದಾರೆ. ಕೋವಿಡ್ ನ್ನು ಕೇಂದ್ರ ಸರ್ಕಾರವು ಅತ್ತ ರಾಷ್ಟ್ರೀಯ ಪಿಡುಗು ಎಂತಲೂ ಪರಿಗಣಿಸುತ್ತಿಲ್ಲ, ಇತ್ತ ರಾಜ್ಯ ಸರ್ಕಾರಗಳ ಮಾತಿಗೂ ಕಿವಿಗೊಡದೆ, ಪರಿಸ್ಥಿತಿಯನ್ನು ಅವು ತಮ್ಮ ವಿವೇಚನೆಯಿಂದ ನಿರ್ವಹಿಸುವುದಕ್ಕೂ ಬಿಡುತ್ತಿಲ್ಲ ಎಂದು ಸೊರೇನ್ ಆರೋಪಿಸಿದ್ದಾರೆ. ಆಮ್ಲಜನಕ, ವೈದ್ಯಕೀಯ ಉಪಕರಣಗಳು, ಲಸಿಕೆ ಇವೆಲ್ಲದರ ಹಂಚಿಕೆಯ ಮೇಲೂ ಕೇಂದ್ರವೇ ನಿಯಂತ್ರಣ ಹೊಂದಿದೆ. ತಮಗೇನು ಬೇಕಾಗಿದೆಯೊ ಅದನ್ನು ಪಡೆಯುವುದು ರಾಜ್ಯಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ಅವರು ಸಂದರ್ಶನದಲ್ಲಿ ಆಕ್ಷೇಪಿಸಿದ್ದಾರೆ. ಕೋವಿಡ್ ಸ್ಥಿತಿ ನಿರ್ವಹಣೆಯಲ್ಲಿನ ಕೇಂದ್ರ ಸರ್ಕಾರದ ವೈಫಲ್ಯವನ್ನು ಅಧಿಕಾರದಲ್ಲಿರುವ ಎಲ್ಲರೂ ಪ್ರಶ್ನಿಸಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ. ಪಿಎಂ ಕೇರ್ಸ್ ನಿಧಿ ಏನಾಯ್ತು ಎಂಬುದರ ಬಗ್ಗೆ ದೇಶಕ್ಕೆ ಕೆಂದ್ರ ಸರ್ಕಾರ ಸ್ಪಷ್ಟಪಡಿಸಬೇಕಾದ ಅಗತ್ಯವಿದೆ ಎಂದೂ ಅವರು ಒತ್ತಾಯಿಸಿದ್ದಾರೆ. ಪಿಎಂ ಕೇರ್ಸ್ ನಿಧಿ ಹೆಸರಲ್ಲಿ ಸಾವಿರಾರು ಕೋಟಿ ಸಂಗ್ರಹವಾಗಿದೆ. ಅಲ್ಲಿ ಪಾರದರ್ಶಕತೆ ಅವಶ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.