POLITICS:
ಬೆಂಗಳೂರು: ಪಕ್ಷ ಸಂಘಟನೆ, 2023ರ ಚುನಾವಣೆ, ಪಕ್ಷದ ಮಹತ್ವಾಕಾಂಕ್ಷಿ ಕಾರ್ಯಕ್ರಮ ಜನತಾ ಜಲಧಾರೆ ಯಾತ್ರೆ, ವಿಧಾನ ಮಂಡಲ ಅಧಿವೇಶನ, ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಜೆಡಿಎಸ್ ಪ್ರಮುಖರ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ರೆಸಾರ್ಟ್ ಒಂದರಲ್ಲಿ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಕಾಶಂಪೂರ್ ಅಧ್ಯಕ್ಷತೆಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪಾಲ್ಗೊಂಡಿದ್ದರು.
ಜನತಾ ಜಲಧಾರೆ
ರಾಜ್ಯದ ನೀರಾವರಿ ಹಕ್ಕುಗಳನ್ನು ಸಾಧಿಸಿಕೊಳ್ಳುವ ಹಾಗೂ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡುವ ಸಭೆಯಲ್ಲಿ ಚರ್ಚೆ ನಡೆದಿದೆ. ರಾಜ್ಯದ 180ಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳಲ್ಲಿ ಹಾದು ಹೋಗುವ ಜಲಧಾರೆ ಗಂಗಾ ರಥಯಾತ್ರೆ ಸಾಗುವ ಹಾದಿಯಲ್ಲಿ ಏನೆಲ್ಲಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು? ಇಡೀ ರಥಯಾತ್ರೆ ಸ್ವರೂಪ, ಜಲ ಸಂಗ್ರಹ, ಮುಖಂಡರ ಪಾಲ್ಗೊಳ್ಳುವಿಕೆ ಇತ್ಯಾದಿ ಅಂಶಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.
ಜೆಪಿ ಮತ್ತು ಡಿಜಿಟಲ್ ಗ್ರಂಥಾಲಯ
ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಹೆಸರಿನಲ್ಲಿ ಜಗತ್ತಿನ ಅತ್ಯುತ್ತಮ ಪುಸ್ತಕಗಳ ಗ್ರಂಥಾಲಯವನ್ನು ಸ್ಥಾಪನೆ ಮಾಡುವ ಬಗ್ಗೆಯೂ ಸಭೆ ನಿರ್ಧಾರ ಕೈಗೊಂಡಿತು. ಜತೆಗೆ ಡಿಜಿಟಲ್ ಗ್ರಂಥಾಲಯವನ್ನೂ ಕೂಡ ಸ್ಥಾಪಿಸಲು ಕೋರ್ ಕಮಿಟಿಯಲ್ಲಿ ತೀರ್ಮಾನಿಸಲಾಗಿದೆ.
ಸುಧಾಕರ್ ಶೆಟ್ಟಿ ನೇಮಕ
ಜೆಡಿಎಸ್ ನ ಕರ್ನಾಟಕ ಕೈಗಾರಿಕೆ ಹಾಗೂ ವಾಣಿಜ್ಯ ಘಟಕದ ಅಧ್ಯಕ್ಷರನ್ನಾಗಿ ಪಕ್ಷದ ಹಿರಿಯ ಮುಖಂಡ ಸುಧಾಕರ್ ಶೆಟ್ಟಿರನ್ನು ನೇಮಿಸಲಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್, ಮಾಜಿ ಶಾಸಕ ಟಿಎ ಶರವಣ, ಶಾಸಕ ವೆಂಕಟರಾವ್ ನಾಡಗೌಡ, ಹಿರಿಯ ನಾಯಕಿ ರುತ್ ಮನೋರಮಾ, ಮಾಜಿ ಸಚಿವ ಸಿ ಎಸ್ ಪುಟ್ಟರಾಜು, ಗಾಂಧಿನಗರ ನಾರಾಯಣಸ್ವಾಮಿ, ಸುಧಾಕರ್ ಶೆಟ್ಟಿ, ಶಾಸಕ ರಾಜಾ ವೆಂಕಟಪ್ಪ ನಾಯಕ, ವಿಲ್ಸನ್ ರೆಡ್ಡಿ, ಶಾಸಕ ಶ್ರೀಕಂಠೇಗೌಡ, ಕೆ ಎಂ ತಿಮ್ಮರಾಯಪ್ಪ, ಶಾಸಕ ಕೆ ಎ ತಿಪ್ಪೇಸ್ವಾಮಿ, ಸಮೃದ್ಧಿ ಮಂಜುನಾಥ್, ನಾಸಿರ್ ಭಗವಾನ್ ಭಾಗಿಯಾಗಿದ್ದರು