POLITICS:
ಮೈಸೂರು: ಕೊರೊನಾ ಹಿನ್ನೆಲೆ ರಾಜ್ಯದಲ್ಲಿ ಶಾಲೆ ಆರಂಭ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅವೈಜ್ಞಾನಿಕವಾಗಿ ಶಾಲೆ ತೆರೆಯೋದು ಬೇಡ. ಮಕ್ಕಳ ವಿಚಾರದಲ್ಲಿ ಬೇಜವಾಬ್ದಾರಿ ಬೇಡ ಎಂದರು.
ಶಿಕ್ಷಣ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿ, ಆಯುಕ್ತರಾಗಿ ಕೆಲಸ ಮಾಡಿದ ಅಧಿಕಾರಿಗಳು ಇದ್ದಾರೆ. ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ತನ್ವೀರ್ ಸೇಠ್, ನಾನು ಸೇರಿದಂತೆ ಅನೇಕರು ಇದ್ದೇವೆ. ಪ್ರತಿಪಕ್ಷದವರನ್ನೂ ಸೇರಿದಂತೆ ಯಾರನ್ನೂ ಕರೆದು ಅಭಿಪ್ರಾಯ ಕೇಳಿಲ್ಲ. ಮಕ್ಕಳನ್ನು ಸಾಯಿಸಬೇಕು ಅಂತ ಮಾಡಿದ್ದೀರಾ? ಶಿಕ್ಷಕರು, ಪೋಷಕರ ಜೀವ ಬಲಿ ತೆಗೆದುಕೊಳ್ಳುವ ಅಧಿಕಾರವನ್ನು ಸರ್ಕಾರಕ್ಕೆ ಯಾರೂ ಕೊಟ್ಟಿಲ್ಲ ಶಿಕ್ಷಣ ಸಚಿವರದ್ದು ಇದೆಂಥಾ ಇಗೋ? ಈ ಹಠ ಯಾಕೆ? ಯಾವ ಹಠಕ್ಕೆ ಪರೀಕ್ಷೆ ಮಾಡುತ್ತಿದ್ದೀರಿ? ಎಂದು ಸಚಿವ ಸುರೇಶ್ ಕುಮಾರ್ಗೆ ಹೆಚ್.ವಿಶ್ವನಾಥ್ ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಸಿಬಿಎಸ್ಸಿ ಪರೀಕ್ಷೆಯನ್ನೆ ರದ್ದು ಮಾಡಿದೆ. ಇಂತಹ ಸಂಧರ್ಭದಲ್ಲಿ ಪರೀಕ್ಷೆ ಮಾಡುವುದು ಬೇಡ ಅಂತ ಹೇಳಿದೆ. ಆದರೆ ರಾಜ್ಯದಲ್ಲಿ ಯಾವ ಪುರುಷಾರ್ಥಕ್ಕೆ ಪರೀಕ್ಷೆ ಮಾಡಲಾಗುತ್ತಿದೆ. ಜೀವ ಮತ್ತು ಜೀವನ ಎರಡನ್ನೂ ತೆಗೆಯಲು ಸುರೇಶ್ ಕುಮಾರ್ ಮುಂದಾಗಿದ್ದಾರೆ. ಪ್ರಧಾನಿಯವರೇ ಜೀವ ಮುಖ್ಯ ನಂತರ ಜೀವನ ಅಂತ ಹೇಳಿದ್ದಾರೆ. ಆದ್ರೆ ಸಚಿವ ಸುರೇಶ್ ಕುಮಾರ್ ನನಗೆ ಎಲ್ಲ ಗೊತ್ತು ಎಂಬ ಇಗೋ ಇದೆ. ಇಂತಹ ಇಗೋ ಇರಬಾರದು ಎಂದು ಸಚಿವ ಸುರೇಶ್ ಕುಮಾರ್ ವಿರುದ್ಧ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು