POLITICS:
ಬೆಂಗಳೂರು: ಕೊವಿಡ್ ನೆಪ ಹೇಳಿ ಸರ್ಕಾರ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆಯನ್ನು ತಡೆಯುವ ಪ್ರಯತ್ನ ಮಾಡುವ ಸಾಧ್ಯತೆಗಳು ಇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಕೋವಿಡ್ ನಿಯಮಗಳನ್ನು ಪರಿಪಾಲಿಸಿಯೇ ಪಾದಯಾತ್ರೆ ನಡೆಸುತ್ತೇವೆ. ಅದನ್ನು ಮುರಿಯುವವರು ಬಿಜೆಪಿಯವರೇ. ಉತ್ತರ ಪ್ರದೇಶದ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ನಡೆಸುತ್ತಿರುವ ಸಭೆಗಳಲ್ಲಿ ಸೇರುವ ಜನ ಮಾಸ್ಕ್ ಹಾಕಿಕೊಂಡು ಬರುತ್ತಾರಾ? ಸ್ಯಾನಿಟೈಸರ್ ಬಳಸುತ್ತಾರಾ? ಸ್ವತಃ ಪ್ರಧಾನಿಗಳೇ ನಿಮಯ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ದೂರಿದರು.
ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹತಾಶರಾಗಿ ಮಾತನಾಡುತ್ತಿದ್ದಾರೆ ಎಂದ ಅವರು, ಮೇಕೆದಾಟು ಕಾಂಗ್ರೆಸ್ ಸರ್ಕಾರದ ಯೋಜನೆ. 1968ರಲ್ಲೇ ಯೋಜನೆ ಜಾರಿಗೆ ಚಿಂತನೆ ನಡೆಸಿತ್ತು. ಆದರೆ ಕಾವೇರಿ ಜಲವಿವಾದ ಇತ್ಯರ್ಥವಾಗಿದ್ದು 2018ರಲ್ಲಿ. ಯೋಜನೆ ಕಾರ್ಯಗತ ಈಗಾಗಲೇ ವಿಳಂಬವಾಗಿದೆ. ಇನ್ನಾದರೂ ಯೋಜನೆ ಶೀಘ್ರ ಜಾರಿಗೊಳಿಸಬೇಕು. ಇದಕಾಗಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ ಎಂದರು.
ತಮಿಳುನಾಡುಗೆ ಪರೋಕ್ಷ ಬೆಂಬಲ
ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಯಾವುದೇ ರೀತಿಯ ಕಾಲಹರಣ ಮಾಡಿಲ್ಲ. ಕೇಂದ್ರದಲ್ಲಿ ಇರುವುದು ಬಿಜೆಪಿ ಸರ್ಕಾರ. ಯೋಜನೆಗೆ ಅಂತಿಮಒಪ್ಪಿಗೆ ಕೊಡಬೇಕಿರುವುದು ಅವರೆ ಎಂದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ನಮ್ಮ ರಾಜ್ಯದವರೇ ಆದರೂ ಮೇಕೆದಾಟು ಯೋಜನೆಗೆ ವಿರೋಧಿಸುತ್ತಿದ್ದಾರೆ. ರಾಜ್ಯದ ಬಿಜೆಪಿ ರಾಜಕೀಯ ಲಾಭಕ್ಕಾಗಿ ಪರೋಕ್ಷವಾಗಿ ತಮಿಳುನಾಡಿಗೆ ಬೆಂಬಲ ನೀಡುತ್ತಿದೆ. ಸಲ್ಲದ ಆರೋಪ ಮಾಡುತ್ತಿದ್ದಾರಷ್ಟೇ ಎಂದೂ ಸಿದ್ದರಾಮಯ್ಯ ದೂರಿದರು.