POLITICS: ಮೈಸೂರು: ಮರಳಿ ಅಧಿಕಾರದ ಗದ್ದುಗೆ ಹಿಡಿಯಲೇಬೇಕು ಎಂದು ಪಣ ತೊಟ್ಟಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಇಂದು ವಿಶೇಷ ವಿಮಾನ ಮೂಲಕ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ರಮೇಶ್ ಜಾರಕಿಹೊಳಿ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಸರ್ಕಾರ ತಂದವನು ನಾನು, ನಾನು ಮಂತ್ರಿ ಸ್ಥಾನ ಕೇಳ್ತಿನಿ. ಮುಂಬೈನಲ್ಲಿ ಹೋಗಿ ಮಾತಾಡುತ್ತೇನೆ ಎಂದರು. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಂಬೈನಲ್ಲಿ ತೀರ್ಮಾನ ಆಗಲಿದೆ. ಸಿಎಂ ಬಂದು ಭೇಟಿ ಮಾಡಿ ಎಂದಿರೋದು ನನಗೆ ಗೊತ್ತಿಲ್ಲ. ಮುಂಬಯಿಗೆ ಹೋಗಿರೋದು ರಾಜಕೀಯ ಇರಬಹುದು. ಸದ್ಯಕ್ಕೆ ಇಲ್ಲಿ ಬಂದಿರೋದು ಸ್ವಾಮೀಜಿಯನ್ನು ಭೇಟಿ ಮಾಡೋಕೆ. ಆದರೆ ಇಲ್ಲಿ ಸ್ವಾಮೀಜಿ ಅವರ ತಾಯಿ ಮೃತಪಟ್ಟ ಕಾರಣ ಇಲ್ಲಿಗೆ ಬಂದಿದ್ದೇನೆ. ಮಂತ್ರಿಗೋಸ್ಕರ ನಾನು ಸ್ವಾಮೀಜಿಯನ್ನ ಭೇಟಿ ಮಾಡ್ತಿಲ್ಲ. ಸ್ವಾಮೀಜಿಯನ್ನ ಭೇಟಿಯಾದ ಬಳಿಕ ನಾನು ಮಾತಾಡುತ್ತೇನೆ ಎಂದರು. ನಂತರ ರಸ್ತೆ ಮಾರ್ಗದ ಮೂಲಕ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು, ಕೆಲ ಸಮಯ ಶ್ರೀಗಳ ಜೊತೆ ಮಾತನಾಡಿದರು. ಮಠಕ್ಕೆ ಭೇಟಿ ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದ ಮಾಜಿ ಸಚಿವರು, ವಾಪಸ್ ಬಂದು ಎಲ್ಲವನ್ನೂ ಮಾತನಾಡುತ್ತೇನೆ ಎಂದು ಹೇಳಿದರು. ಮಾಜಿ ಸಚಿವರ ಜೊತೆಗೆ ಸಹೋದರ ಲಖನ್, ಅಳಿಯ ಅಂಬಿರಾಯ ಪಾಟೀಲ್ ಇದ್ದರು.