POLITICS:
ಮಂಗಳೂರು: ಸ್ವಾಮೀಜಿಗಳು ತಲೆ ಮೇಲೆ ಖಾವಿ ಹಾಕಿಕೊಳ್ಳುವುದರ ಕುರಿತು ಸಿದ್ದರಾಮಯ್ಯ ಹೇಳಿಕೆ ಬಾರಿ ವಿವಾದಕ್ಕೆ ಕಾರಣವಾಗಿದೆ. ರಾಜಕೀಯ ನಾಯಕರ ಜೊತೆ ಜೊತೆಗೆ ಸ್ವಾಮೀಜಿಗಳು ಕೂಡ ಸಿದ್ದು ವಿರುದ್ದ ಕೆಂಡಾಮಂಡಲರಾಗಿದ್ದಾರೆ. ಇದೀಗ ಸಿದ್ದರಾಮಯ್ಯ ಹೇಳಿಕೆಯನ್ನ ವಿಪಕ್ಷ ಉಪನಾಯಕ ಯುಟಿ ಖಾದರ್ ಸಮರ್ಥಿಸಿಕೊಂಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಎಲ್ಲಾ ಧರ್ಮದ ಗುರುಗಳಿಗೆ ಗೌರವ ಕೊಡುತ್ತಾರೆ. ಆದರೆ ಬಿಜೆಪಿಯವರು ಹೇಳಿಕೆ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ಎಲ್ಲಾ ಸ್ವಾಮೀಜಿಗಳು ಸಿದ್ದರಾಮಯ್ಯನವರ ಜೊತೆ ಆತ್ಮೀಯತೆಯಿಂದ ಇದ್ದಾರೆ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಯಾರಾದರೂ ಸ್ವಾಮೀಜಿಗಳು ಪ್ರತಿಭಟನೆ ಮಾಡಿದ್ರಾ? ಮೂಢನಂಬಿಕೆ ಕಾಯ್ದೆ ಕೂಡ ಆವತ್ತು ಸ್ವಾಮೀಜಿಗಳ ಮನವಿ ಮೇರೆಗೆ ಸಿದ್ದರಾಮಯ್ಯನವರು ಕೈ ಬಿಟ್ಟಿದ್ದರು. ಆದರೆ ಬಿಜೆಪಿ ಸರ್ಕಾರ ಯಾವುದಕ್ಕೂ ಬೆಲೆ ಕೊಡದೇ ಆ ಬಿಲ್ ಜಾರಿ ಮಾಡಿತ್ತು. ಬಿಜೆಪಿ ಸ್ವಾಮೀಜಿಯವರ ಬೇಡಿಕೆ ಮತ್ತು ಜನರ ಭಾವನೆ ಅರ್ಥ ಮಾಡಿಕೊಳ್ಳಲ್ಲ. ಸಿದ್ದರಾಮಯ್ಯ ದೇವಸ್ಥಾನದ ಅರ್ಚಕರ ಗೌರವಧನ ಹೆಚ್ಚಳ ಮಾಡಿದರು. ಆದರೆ ಬಿಜೆಪಿ ಈವರೆಗೆ ಆ ಕೆಲಸ ಮಾಡಲೇ ಇಲ್ಲ. ಅದನ್ನು ಬಿಟ್ಟು ಸುಮ್ಮನೇ ಜನರ ಮಧ್ಯೆ ಬಿಜೆಪಿ ಗೊಂದಲ ಸೃಷ್ಟಿಸುತ್ತಿದೆ. ಈ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ ಎಂದು ಯು.ಟಿ ಖಾದರ್ ಕಿಡಿಕಾರಿದ್ದಾರೆ.