POLITICS:
ನವದೆಹಲಿ : ದಿ ಗ್ರೇಟ್ ಖಲಿ ಎಂದು ಖ್ಯಾತರಾಗಿರುವ ಕುಸ್ತಿಪಟು ಮತ್ತು ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (ಡಬ್ಲ್ಯುಡಬ್ಲ್ಯುಇ) ಸ್ಟಾರ್ ದಿಲೀಪ್ ಸಿಂಗ್ ರಾಣಾ ಗುರುವಾರ ಬಿಜೆಪಿಗೆ ಸೇರಿದ್ದಾರೆ. ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ನೇತೃತ್ವದಲ್ಲಿ ಇಂದು ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ.
ಡಬ್ಲ್ಯುಡಬ್ಲ್ಯುಎಫ್ ಹಾಗೂ ಡಬ್ಲ್ಯುಡಬ್ಲ್ಯುಇ ಮೂಲಕ ಅಂತರಾಷ್ಟ್ರಿಯ ಮಟ್ಟದಲ್ಲಿ ಖ್ಯಾತಿಗಳಿಸಿರು ಖಲಿ, ಕೇವಲ ಕುಸ್ತಿಯಲ್ಲಷ್ಟೇ ಅಲ್ಲದೇ ಅನೇಕ ಹಾಲಿವುಡ್ ಸಿನಿಮಾಗಳಲ್ಲೂ ನಟಿಸಿದ್ದಾರೆ.
49 ವರ್ಷದ ಖಲಿ ಅವರು ಮೂಲತಃ ಹಿಮಾಚಲ ಪ್ರದೇಶದವರಾಗಿದ್ದು, 22 ವರ್ಷಗಳ ಹಿಂದೆ ಅಂತರಾಷ್ಟ್ರೀಯ ಕುಸ್ತಿಗೆ ಪದಾರ್ಪಣೆ ಮಾಡಿದರು. ಖಲಿ ಡಬ್ಲ್ಯುಡಬ್ಲ್ಯುಇಯಲ್ಲಿ ವೃತ್ತಿಯನ್ನು ಆರಂಭಿಸುವ ಮುನ್ನ ಪಂಜಾಬ್ ಪೊಲೀಸ್ ಅಧಿಕಾರಿಯೊಬ್ಬರ ಬಾಡಿಗಾರ್ಡ್ ಆಗಿದ್ದರು. ಆದರೆ ಡಬ್ಲ್ಯುಡಬ್ಲ್ಯುಇಯಲ್ಲಿ ವೃತ್ತಿಯನ್ನು ಆರಂಭಿಸಿ ನಂತರ ಖಲಿ ಅವರು ಚಾಂಪಿಯನ್ ಪಟ್ಟಗಳಿಸಿದರು.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಅವರು, ನಾನು ತುಂಬಾ ವರ್ಷಗಳ ಕಾಲ ಅಮೆರಿಕಾದಲ್ಲಿಯೇ ಇದ್ದೆ. ಆದ್ರೆ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿ ಹಾಗೂ ದೇಶ ಸಾಧಿಸುತ್ತಿರುವ ಅಭಿವೃದ್ಧಿ ಕಂಡು ನಾನು ಪ್ರೇರಿತನಾಗಿ ಮರಳಿ ದೇಶಕ್ಕೆ ಬಂದೆ. ಈಗ ಅದೇ ಕಾರಣಕ್ಕೆ ನಾನು ಬಿಜೆಪಿಗೆ ಸೇರಿದ್ದೇನೆ ಎಂದು ತಿಳಿಸಿದರು.
2020ರಲ್ಲಿ, ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಖಲಿ ಬೆಂಬಲ ನೀಡಿದ್ದರು. ಧರಣಿ ನಿರತ ರೈತರನ್ನು ಬೆಂಬಲಿಸುವಂತೆ ಕುಸ್ತಿಪಟು ಭಾರತದ ಜನರಿಗೆ ಮನವಿ ಮಾಡಿದ್ದರು.