SPECIAL:
ಮಂಜುನಾಥ್ ಡಿ
ತಮ್ಮ ಹಳೆಯ ಬೆಳೆ ಕಬ್ಬು ಕಡಿಮೆ ಅದಾಯದಿಂದ ರೋಷಿ ಹೋಗಿದ್ದ ಧಾರವಾಡ ಜಿಲ್ಲೆ ಕಲಘಟಗಿಯ ರೈತರೊಬ್ಬರು ಸಾಂಪ್ರದಾಯಿಕ ಬೆಳೆ ಬಿಟ್ಟು, ಒಂದು ಹೆಕ್ಟೇರ್ ಪ್ರದೇಶದಲ್ಲಿ ಏಲಕ್ಕಿ ಬಾಳೆ ಬೆಳೆದು 25 ಟನ್ ಇಳುವರಿ ತೆಗೆದಿದ್ದಾರೆ. ಈ ಹಿಂದೆ ಕಬ್ಬು ಬೆಳೆಯುತ್ತಿರುವ ಸಂದರ್ಭದಲ್ಲಿ ಕಡಿಮೆ ಆದಾಯದಿಂದ ಹಾಗೂ ಕುಟುಂಬ ನಿರ್ವಹಣೆಗಾಗಿ, ಬೇರೊಂದು ಉದ್ಯೋಗ ಮಾಡುವ ಪರಿಸ್ಥಿತಿ ಬಂದೊದಗಿತ್ತು.
ಕಲಘಟಗಿ ತಾಲೂಕಿನ ನೆಲ್ಲಿಹರವಿ ಗ್ರಾಮದ ಬಸವಣ್ಣಯ್ಯ ಮಹಾಂತಯ್ಯ ಅಣ್ಣಿಗೇರಿ ಅವರು, ಮಹಾತ್ಮಾಗಾಂಧಿ ನರೇಗಾ ಹಾಗೂ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೌಲಭ್ಯ ಪಡೆದು, ಈಗ ಒಂದು ಹೆಕ್ಟೇರ್ ಭೂಮಿಯಲ್ಲಿ ಏಲಕ್ಕಿ ಬಾಳೆ ಬೆಳೆದು ಸುಮಾರು 25 ಟನ್ ಇಳುವರಿ ಪಡೆದಿದ್ದಾರೆ.
ಕೋವಿಡ್ ಸಾಂಕ್ರಾಮಿಕ ತಡೆಗೆ ಜಾರಿಗೊಳಿಸಿದ್ದ ಲಾಕ್‍ಡೌನ್ ಸಂದರ್ಭದಲ್ಲಿಯೂ ಸುಮಾರು 4,50,000 ರೂಪಾಯಿ ಆದಾಯ ನಿರೀಕ್ಷಿಸುತ್ತಿದ್ದಾರೆ. ಇವರು ಪ್ರತಿವರ್ಷ ಸಾಂಪ್ರದಾಯಿಕವಾಗಿ ಕಬ್ಬು ಬೆಳೆದು ಸಾಮಾನ್ಯವಾಗಿ ಒಂದು ಹೆಕ್ಟೇರ್‌ಗೆ 75,000 ಸಾವಿರ ಆದಾಯ ಪಡೆಯುತ್ತಿದ್ದರು. ಈ ಉತ್ಪನ್ನದಲ್ಲಿ ಕುಟುಂಬ ನಿರ್ವಹಣೆ ಕಷ್ಟವೆನಿಸಿದಾಗ ಕೃಷಿಯ ಜೊತೆಗೆ ಮತ್ತೊಂದು ಉದ್ಯೋಗ ಹುಡುಕಲು ಪ್ರಾರಂಭಿಸಿದರು.
ಕೋವಿಡ್ ಲಾಕ್‍ಡೌನ್ ಕಾರಣದಿಂದ ಬದುಕು ಇನ್ನಷ್ಟು ಕಠಿಣವಾಯಿತು. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಕಾಲದಲ್ಲಿ ನೀಡಿದ ಮಾರ್ಗದರ್ಶನ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಾಮಗ್ರ ಮತ್ತು ಕೂಲಿ ವೆಚ್ಚ ಹಾಗೂ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಸೌಲಭ್ಯ ಕಲ್ಪಿಸಲು ನೆರವಾದರು. ಇದರಿಂದ ಬಸವಣ್ಣಯ್ಯ ತಮ್ಮ ಒಂದು ಹೆಕ್ಟೇರ್ ಭೂಮಿಯನ್ನು ಏಲಕ್ಕಿ ಬಾಳೆಯ ತೋಟವಾಗಿ ಅಭಿವೃದ್ಧಿಪಡಿಸಿದರು.
ಇನ್ನೂ ಲಾಕ್‍ಡೌನ್ ಸಂದರ್ಭದಲ್ಲಿ ಬೆಳೆಯು ಕಟಾವಿಗೆ ಬಂದಾಗ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮಹಾಂತೇಶ ಪಟ್ಟಣಶೆಟ್ಟಿ ಹಾಗೂ ಸಹಾಯಕ ತೋಟಗಾರಿಕಾ ಅಧಿಕಾರಿ ಕೆ.ವಿ. ಅಂಗಡಿ ಅವರು ರಾಜ್ಯ ಮತ್ತು ಅಂತರ ರಾಜ್ಯದ ಹಣ್ಣು ಮಾರಾಟಗಾರರೊಂದಿಗೆ ಸಂಪರ್ಕ ಕಲ್ಪಿಸಿ ಮಾರುಕಟ್ಟೆ ಒದಗಿಸಿದರು. ಸುಮಾರು 13 ಟನ್ ಫಸಲನ್ನು ಗೋವಾ ರಾಜ್ಯಕ್ಕೆ ಮಾರಾಟ ಮಾಡಿ 2,60,000 ಆದಾಯ ಈಗಾಗಲೇ ಪಡೆದಿದ್ದಾರೆ ರೈತ. ಇನ್ನೂ 10 ರಿಂದ 12 ಟನ್ ಇಳುವರಿಯಿಂದ ಸುಮಾರು 2 ಲಕ್ಷ ಆದಾಯ ನಿರೀಕ್ಷೆಯಲ್ಲಿದ್ದೇನೆ ಎಂದು ನೆಲ್ಲಿಹರವಿ ಗ್ರಾಮದ ಬಸವಣ್ಣಯ್ಯ ಮಹಾಂತಯ್ಯ ಅಣ್ಣಿಗೇರಿ ಅವರು ಹೇಳುತ್ತಾರೆ.
ಜಿಲ್ಲೆಯ ರೈತರು ಕೂಡಾ ತೋಟಗಾರಿಕೆ ಇಲಾಖೆ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಂಡು, ಅಧಿಕ ಲಾಭ ನೀಡುವ ಬೆಳೆಗಳನ್ನು ಬೆಳೆಯಬಹುದಾಗಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಕಲಾದ ಸಹಕಾರ ನನಗೆ ಇಂದು ಉತ್ತಮ ಬೆಳೆಯ ಜೊತೆಗೆ ಅದಾಯ ಬಂದಿದ್ದು, ನಮ್ಮ ರೈತರು ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಕೇಂದ್ರಗಳ ಸಹಾಯದೊಂದಿಗೆ ಉತ್ತಮ ಬೆಳೆಯಬಹುದಾಗಿದ್ದು, ನಮ್ಮ ರೈತರು ಇಂತಹ ಸರ್ಕಾರ ರೈತರಿಗೆ ಘೋಷಣೆ ಮಾಡಿರುವ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಇತರೆ ರೈತರಿಗೆ ಮನವಿ ಮಾಡಿದ್ದಾರೆ.