SPECIAL:
ತೇಜಸ್ವಿ ಬಿ.ನಾಯ್ಕ
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದಲ್ಲಿರುವ ದಿವಂಗತ ಪಾಂಡುರಂಗ ಭಂಡಾರಿಯವರ ಕುಟುಂಬ ಇಂದು ಗಣೇಶ ವಿಗ್ರಹ ತಯಾರಿಕೆಯಲ್ಲಿ ರಾಜ್ಯದಲ್ಲಿಯೇ ದೊಡ್ಡ ಹೆಸರು ಮಾಡಿದ್ದಾರೆ.ಇನ್ನು ನಾಲ್ಕು ದಿನಗಳಲ್ಲಿ ಗಣೇಶ ಚತುರ್ಥಿ ಹಬ್ಬ ಬಂದೇ ಬಿಡ್ತು ಅನ್ನುವಾಗಲೇ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದಲ್ಲಿರುವ ಭಂಡಾರಿ ಕುಟುಂಬ ವಿವಿಧ ಶೈಲಿಯ,ಬಹುರೂಪಿ ಗಣೇಶ ವಿಗ್ರಹಗಳನ್ನು ತಯಾರಿಸಿದೆ.
ದಿವಂಗತ ಪಾಂಡುರಂಗ ಭಂಡಾರಿಯವರಿಗೆ ಮೂವರು ಪುತ್ರರು.ಪ್ರಭಾಕರ ಭಂಡಾರಿ,ಸತ್ಯನಾರಾಯಣ ಭಂಡಾರಿ ಮತ್ತು ಸುರೇಶ ಭಂಡಾರಿ ಈ ಮೂವರು ಕುಟುಂಬದವರು ಈಗ 500 ಕ್ಕೂ ಅಧಿಕ ಗಣೇಶ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ.ಇವರು ತಯಾರಿಸುವ ಗಣೇಶ ವಿಗ್ರಹಗಳಿಗೆ ಮಾರುಕಟ್ಟೆಯಲ್ಲಿ ವಿಶೇಷವಾದ ಬೇಡಿಕೆ ಇದೆ.ಈ ಕುಟುಂಬದ ವಿಶೇಷತೆ ಏನೆಂದರೆ ಯಾವುದೇ ಆಧುನಿಕ ಸೌಲಭ್ಯಗಳನ್ನು ಬಳಸದೇ ಅಚ್ಚುಕಟ್ಟಾಗಿ ಗಣಪತಿ ವಿಗ್ರಹಗಳನ್ನು ತಯಾರಿಸುತ್ತಾರೆ.ಅದರಲ್ಲೂ ವಿಶೇಷವಾಗಿ ಗಣಪತಿ ಮುಖದ ಅಚ್ಚುಗಳನ್ನು ಕೂಡ ಇವರು ಬಳಸುವುದಿಲ್ಲ.ದೂರದ ಸಿದ್ದಾಪುರ ತಾಲೂಕಿನ ಹೆಗ್ಗರಣಿಯಿಂದ ಜೇಡಿಮಣ್ಣನ್ನು ತಂದು ಹದಮಾಡಿ ಗಣೇಶ ವಿಗ್ರಹಗಳನ್ನು ನಿರ್ಮಿಸುತ್ತಾರೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರದ ಜನರು ಕುಟುಂಬಕ್ಕೊಂದರಂತೆ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದು ವಾಡಿಕೆಯಾಗಿದೆ.ಈ ನಡುವೆ ಸಾರ್ವಜನಿಕ ಗಣಪತಿ ಸಹ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.ಹೀಗಾಗಿ ಗಣೇಶ ವಿಗ್ರಹ ತಯಾರಕರಿಗೆ ಈಗ ಎಲ್ಲಿಲ್ಲದ ಬೇಡಿಕೆ.ವಿಘ್ನವಿನಾಶಕ,ಅಧಿನಾಯಕ,ಗಣೇಶ ಭಕ್ತರ ಅಭೀಷ್ಟೆಗಳನ್ನು ಪೂರೈಸುವ ದೇವಾನುದೇವತೆಯಾಗಿದ್ದಾನೆ.ಭಕ್ತರು ಕೂಡ ಅಷ್ಟೇ. ತಮಗಿಷ್ಟವಾದ ಗಣೇಶ ವಿಗ್ರಹಗಳನ್ನು ಮನೆಯಲ್ಲಿ ತಂದು ಪ್ರತಿಷ್ಠಾಪಿಸಬೇಕೆಂದು ಮೊದಲೇ ಸಂಕಲ್ಪ ತೊಡುತ್ತಾರೆ.ಭಕ್ತರಿಗಿಷ್ಟವಾದ ಗಣೇಶ ವಿಗ್ರಹಗಳನ್ನು ತಯಾರಿಸುವಲ್ಲಿ ಈ ಭಂಡಾರಿ ಕುಟುಂಬ ಹೆಸರುವಾಸಿಯಾಗಿದೆ.ಭಕ್ತರ ಇಚ್ಚೆಯಂತೆ ಭಂಡಾರಿ ಕುಟುಂಬ ಬಹುರೂಪಿ ಗಣಪನನ್ನು ತಯಾರಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ.
ಈ ಪೈಕಿ ಗರುಡನ ಮೇಲೆ ವಿರಾಜಮಾನನಾದ ಗಣಪ,ಜಡೆ ಈರುಳ್ಳಿ ಗಣಪ,ಯಕ್ಷ ಗಣಪ,ಅನಾನಸು ಗಣಪ,ಹಲಸಿನ ಹಣ್ಣು ಗಣಪ,ಎಳನೀರು ಗಣಪ,ಶಿವಾಜಿ ಗಣಪ,ಕಲ್ಲಂಗಡಿ ಗಣಪ,ಕುಂಬಳಕಾಯಿ ಗಣಪ,ಇಲಿ ಗಣಪ,ಮೊಲದ ಮೇಲೆ ವಿರಾಜಮಾನನಾದ ಗಣಪ,ದೋಣಿಯಲ್ಲಿ ವಿಹರಿಸುವ ಗಣಪ,ಅಕ್ಕಿ ಮೂಡೆ ಮೇಲೆ ಆಸೀನನಾದ ಗಣಪ,ಬಾತುಕೋಳಿ ಗಣಪ,ಗರುಡ ಗಣಪ,ಸಿಂಹ ಗಣಪ, ನವಿಲು ಗಣಪ,ಕಬ್ಬು ಗಣಪ,ಕಾಳಿಂಗ ಸರ್ಪದ ಮೇಲೆ ವಿರಾಜಿತ ಗಣಪ, ಆಂಜನೇಯ ಗಣಪ,ಈಶ್ವರ ಲಿಂಗ ಸ್ಪರೂಪಿ ಗಣಪ,ತಬಲಾ ಗಣಪ,ಕುದುರೆ ಮೇಲೆ ಆಸೀನನಾದ ಗಣಪ,ಶಾರ್ಕ್ ಗಣಪ,ತಿರುಪತಿ ಗಣಪ,ಇಡಗುಂಜಿ ಗಣಪ, ಹೀಗೆ ಒಂದೇ ಎರಡೇ ನೀವು ನೋಡುತ್ತಾ ನಿಂತರೆ ಸಮಯದ ಅರಿವು ನಿಮಗಾಗದು.ಸರಳವಾಗಿ ಗಣಪತಿ ವಿಗ್ರಹಗಳನ್ನು ತಯಾರಿಸುವುದೇ ಇಂದಿನ ದಿನಗಳಲ್ಲಿ ಕಷ್ಟಕರವಾಗಿರುವಾಗ ಈ ಭಂಡಾರಿ ಕುಟುಂಬ ಬಹುರೂಪಿ ಗಣಪನನ್ನು ತಯಾರಿಸುವುದು ನಿಜಕ್ಕೂ ಚಮತ್ಕಾರವೇ ಸರಿ.
ಭಂಡಾರಿ ಕುಟುಂಬದವರು ತಯಾರಿಸುವ ಗಣೇಶ ವಿಗ್ರಹಗಳು ದಾವಣಗೆರೆ, ಶಿವಮೊಗ್ಗ,ಗೋಕರ್ಣ,ಹೊನ್ನಾವರ,ಕುಮಟಾ ಹಾಗೂ ಅಂಕೋಲಾವರೆಗಿನ ಭಕ್ತರು ಒಯ್ಯುತ್ತಾರೆ.ಅರ್ಧ ಅಡಿಯಿಂದ ಏಳೆಂಟು ಅಡಿಯವರೆಗಿನ ವಿವಿಧ ಶೈಲಿಯ,ಬಹುರೂಪಿ ಗಣೇಶ ವಿಗ್ರಹಗಳನ್ನು ನಿರ್ಮಿಸುವುದರಲ್ಲಿ ಈ ಕುಟುಂಬ ಸಿದ್ದಹಸ್ತವಾಗಿದೆ.ಕಳೆದ 500 ವರ್ಷಗಳಿಂದ ಭಂಡಾರಿ ಕುಟುಂಬ ಗಣೇಶ ವಿಗ್ರಹ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದರೂ ಕೂಡ ಈವರೆಗೆ ಸರಕಾರ ಇವರತ್ತ ಗಮನಹರಿಸದೇ ಇರುವುದು ನಿಜಕ್ಕೂ ವಿಷಾದಕಾರಿ ಸಂಗತಿಯಾಗಿದೆ. ಈಗಲಾದರೂ ಸರಕಾರ ಎಚ್ಚೆತ್ತುಕೊಂಡು ಕಲೆಗಾಗಿ ಜೀವನವನ್ನೇ ಮುಡುಪಾಗಿಟ್ಟ ಈ ಕುಟುಂಬದತ್ತ ಗಮನ ಹರಿಸಲಿ ಎಂಬುದು ಎಲ್ಲರ ಆಶಯವಾಗಿದೆ.